More

    ತುಮಕೂರು-ಶಿವಮೊಗ್ಗ ಚತುಷ್ಪಥ ಹೆದ್ದಾರಿ ತ್ವರಿತವಾಗಿ ಪೂರ್ಣ: ರಾಘವೇಂದ್ರ ವಿಶ್ವಾಸ

    ಶಿವಮೊಗ್ಗ: ತುಮಕೂರು-ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ 6,397.47 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರು ಅನುಮೋದನೆ ನೀಡಿದ್ದು ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
    ಈ ಯೋಜನೆಯಿಂದ ತುಮಕೂರು-ಶಿವಮೊಗ್ಗ ನಡುವೆ 5 ದೊಡ್ಡ ಸೇತುವೆಗಳು, 66 ರೈಲ್ವೆ ಕೆಳಸೇತುವೆಗಳು, ಮೇಲ್ಸೇತುವೆಗಳು, 7 ಕಡೆ ಬೈಪಾಸ್ ನಿರ್ಮಾಣವಾಗಲಿದ್ದು, ಬೆಂಗಳೂರಿನಿಂದ ಮಲೆನಾಡು ಭಾಗದ ಸಂಪರ್ಕ ಇನ್ನಷ್ಟು ಸುಗಮವಾಗುವುದರ ಜತೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ.
    ಇತ್ತೀಚೆಗೆ ಸಚಿವರನ್ನು ಭೇಟಿಯಾಗಿ ಯೋಜನೆಗೆ ಈಗಾಗಲೇ ನೀಡಿರುವ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ, ಭೂಸ್ವಾಧಿನ ಹಾಗೂ ಇತರ ವೆಚ್ಚಗಳಿಗೆ ಹೆಚ್ಚುವರಿಯಾಗಿ 1,796.24 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಭಾರತಮಾಲಾ ಯೋಜನೆಯಡಿ ಒಟ್ಟಾರೆ ಯೋಜನೆ ಅನುಷ್ಠಾನಕ್ಕೆ 6,397.47 ಕೋಟಿ ರೂ. ಮಂಜೂರು ಮಾಡಿದ್ದಾರೆಂದು ಸಂತಸ ವ್ಯಕ್ತಪಡಿಸಿದ್ದಾರೆ.
    ಒಟ್ಟು ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದ್ದು, ಬೆಟ್ಟದಹಳ್ಳಿ (ತರೀಕೆರೆ)ಯಿಂದ ಶ್ರೀರಾಂಪುರ (ಶಿವಮೊಗ್ಗ) ಪ್ಯಾಕೇಜಿನಲ್ಲಿ 56.335 ಕಿ.ಮೀ. ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ 33 ಕಿ.ಮೀ. ಸರ್ವಿಸ್ ರಸ್ತೆ, ತುಂಗಾ ಮತ್ತು ಭದ್ರಾ ನದಿಗೆ 3 ಬೃಹತ್ ಸೇತುವೆಗಳು, 20 ಅಂಡರ್ ಮತ್ತು ಓವರ್ ಪಾಸ್‌ಗಳು, ಶಿವಮೊಗ್ಗದಲ್ಲಿ 14.74 ಕಿ.ಮೀ. ಹಾಗೂ ತರೀಕೆರೆಯಲ್ಲಿ 9 ಕಿ.ಮೀ. ಬೈಪಾಸ್, ರಂಗಾಪುರ ಗ್ರಾಮದಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾಗಲಿದೆ. ಈ ಪ್ಯಾಕೇಜಿಗೆ ಈ ಮೊದಲು 1,331.77 ಕೋಟಿ ರೂ. ಅಂದಾಜಿಸಿದ್ದು, ಇದೀಗ ಪರಿಷ್ಕೃತ ಅಂದಾಜಿನಲ್ಲಿ 2,082.98 ಕೋಟಿ ರೂ. ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts