More

    ರೇಪ್ ವಿವಾದ ಕ್ಷಮೆಯ ಉಪಶಮನ: ದೇಶ ವ್ಯಾಪಿಸಿದ ರಮೇಶ್​ಕುಮಾರ್ ಅತ್ಯಾಚಾರ ಅಪಹಾಸ್ಯ ವೃತ್ತಾಂತ; ಲೋಕಸಭೆಯಲ್ಲೂ ಬಿರುಗಾಳಿ..

    ಬೆಳಗಾವಿ: ಕಾಂಗ್ರೆಸ್ ಹಿರಿಯ ಶಾಸಕ ರಮೇಶ್​ಕುಮಾರ್ ಪ್ರಾಸಂಗಿಕವಾಗಿ ಆಡಿದ ಮಾತುಗಳು ರಾಷ್ಟ್ರ ಮಟ್ಟದಲ್ಲಿ ಆ ಪಕ್ಷದ ನಾಯಕರನ್ನು ಮುಜುಗರಕ್ಕೆ ತಳ್ಳಿದ್ದು, ಅದರಿಂದ ಹೊರಬರುವುದಕ್ಕೆ ಸ್ವಯಂಪ್ರೇರಿತವಾಗಿ ದೇಶದ ಕ್ಷಮೆ ಯಾಚಿಸಿದ್ದಾರೆ. ಶುಕ್ರವಾರ ಲೋಕಸಭೆಯಲ್ಲೂ ಈ ವಿಷಯ ಚರ್ಚೆಯಾಯಿತು. ಪಕ್ಷ ಹಾಗೂ ಸಮಾಜದಿಂದ ಬಂದ ತೀವ್ರ ಹಾಗೂ ತೀಕ್ಷ್ಣ ಪ್ರತಿಕ್ರಿಯೆಗೆ ವಿಚಲಿತರಾದ ರಮೇಶ್​ಕುಮಾರ್ ಶುಕ್ರವಾರ ವಿಧಾನಸಭೆಯಲ್ಲಿ ಸದನ ಸೇರುತ್ತಿದ್ದಂತೆ ವಿವರಣೆ ನೀಡಿ, ಉದ್ದೇಶಪೂರ್ವಕವಾಗಿ ಆಡಿದ ಮಾತಲ್ಲವಾದರೂ ವಿಷಾದಿಸುವೆ. ಇದರಲ್ಲಿ ಯಾವುದೇ ಪ್ರತಿಷ್ಠೆ, ಮುಜುಗರ ತೋರದೆ ಹೃದಯಾಂತರಾಳದಿಂದ ಕ್ಷಮೆಯಾಚಿಸುವೆ ಎಂದರು. ಜತೆಗೆ ಮಹಿಳೆಯರೂ ಸೇರಿದಂತೆ ಯಾರದೇ ಭಾವನೆಗಳಿಗೆ ನೋವುಂಟು ಮಾಡುವುದು ನನ್ನ ಮಾತಿನ ತಾತ್ಪರ್ಯ ಆಗಿರದಿದ್ದರೂ, ಈಗಾಗಲೆ ನನ್ನ ಅಪರಾಧಿ ಎಂಬಂತೆ ತೀರ್ಪು ಕೊಟ್ಟಿದ್ದಾರೆ. ಇದಕ್ಕೆ ಇಲ್ಲೇ ಸುಖಾಂತ್ಯ ಹಾಡಿ, ಕಲಾಪ ನಡೆಸೋಣ ಎಂದು ಮನವಿ ಮಾಡಿದರು. ಈ ನಡುವೆ, ರಮೇಶ್​ಕುಮಾರ್ ಮಾತು ದೇಶದಲ್ಲೇ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯಿತು. ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ರಮೇಶ್​ಕುಮಾರ್ ಪರವಾಗಿ ಕ್ಷಮೆಯಾಚಿಸಿದರು. ಆ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಿಯಾಂಕಾ ವಾದ್ರಾ ಸೇರಿ ಹಲವು ನಾಯಕರು ವಿಷಾದ ವ್ಯಕ್ತಪಡಿಸಿ, ಸಾರ್ವಜನಿಕರ ಆಕ್ರೋಶ ತಣ್ಣಗಾಗಿಸುವ ಪ್ರಯತ್ನ ಮಾಡಿದರು.

    ಸ್ಪೀಕರ್ ಸಮಜಾಯಿಷಿ: ನಾವೆಲ್ಲರೂ ಕುಟುಂಬ ಇರುವವರು. ಸಾಂಸಾರಿಕವಾಗಿ, ಭಾವನಾತ್ಮಕ ಸಂಬಂಧಗಳು ಇದ್ದೇ ಇರುತ್ತವೆ. ಇಲ್ಲಾಡಿದ ಮಾತಿನಲ್ಲಿ ವಿವಾದದ ಅಂಶ ಇತ್ತು. ಇಡೀ ಸದನ ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡಿದೆ. ಅದನ್ನು ಹೆಚ್ಚಿಸಲೂ ಬದ್ಧರಾಗಿದ್ದೇವೆ. ವಿವಾದ ಮಾಡುವ ಅಗತ್ಯವಿಲ್ಲ. ಇಲ್ಲಿಗೇ ಮುಕ್ತಾಯವಾಗಿದೆ.

    ನಿರ್ಭಯಾ ತಾಯಿ ಆಕ್ರೋಶ: ರಮೇಶ್​ಕುಮಾರ್ ವಿವಾದಿತ ಹೇಳಿಕೆಗೆ ನಿರ್ಭಯಾ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಅವಮಾನಕಾರಿ ಹೇಳಿಕೆ ಸಮಾಜದ ಮೇಲೆ ಕಪ್ಪುಕಲೆಯಾಗಿದೆ. ತಕ್ಷಣವೇ ರಮೇಶ್​ಕುಮಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಶಾದೇವಿ ಆಗ್ರಹಿಸಿದ್ದಾರೆ. ನಿರ್ಭಯಾ ಳನ್ನು ಚಲಿಸುತ್ತಿದ್ದ ಬಸ್​ನಲ್ಲಿ ಅಮಾನುಷವಾಗಿ ರೇಪ್ ಮಾಡಿ 9 ವರ್ಷ ಗಳಾಗಿವೆ. ಇವರು ಅದನ್ನು ಅಣಕಿಸುತ್ತಿದ್ದಾರೆ. ಸಮಾಜಕ್ಕೆ ಏನು ಸಂದೇಶ ನೀಡಬಯಸಿದ್ದಾರೆ? ಇಂಥವ ರಿಂದಲೇ ಈ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಇಂಥ ಅಪರಾಧಗಳು ನಡೆಯುವುದು ಎಂದಿದ್ದಾರೆ.

    ಸ್ಮೃತಿ ಕಿಡಿ: ರಮೇಶ್​ಕುಮಾರ್ ಹೇಳಿಕೆಗೆ ಲೋಕಸಭೆಯಲ್ಲೂ ಟೀಕೆ ವ್ಯಕ್ತವಾಗಿದೆ. ನಿಮಗೆ ಧೈರ್ಯವಿದ್ದರೆ ಇಂಥ ಅವಮಾನಕರ ಹೇಳಿಕೆ ನೀಡಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸಿ. ಮಹಿಳೆಯರ ಘನತೆ ರಕ್ಷಿಸುವ ಪ್ರತಿಜ್ಞೆ ತೆಗೆದುಕೊಳ್ಳುವ ವಿಧಾನಸಭೆಯನ್ನು ಕಾಂಗ್ರೆಸ್ ನಾಯಕರೊಬ್ಬರು ಮಹಿಳೆಯರ ವಿರುದ್ಧ ಇಂಥ ಅವಮಾನಕರ ಹೇಳಿಕೆ ನೀಡಲು ಬಳಸಿದ್ದಾರೆ. ಉತ್ತರಪ್ರದೇಶ ದಲ್ಲಿ ’ನಾನು ಹುಡುಗಿ, ಹೋರಾಡಬಲ್ಲೆ’ ಎಂಬ ಘೊಷವಾಕ್ಯ ಹಿಡಿದು ಚುನಾವಣಾ ಪ್ರಚಾರ ಮಾಡು ತ್ತಿರುವ ಕಾಂಗ್ರೆಸ್, ಮೊದಲು ಈ ಶಾಸಕನಿಗೆ ಶಿಕ್ಷೆ ವಿಧಿಸಲಿ ಎಂದು ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.

    ರಮೇಶ್ ವಿಷಾದ ಉವಾಚ

    • ಕಲಾಪ ನಡೆಯುವ ವೇಳೆಗೆ ಭಾಷಣಕಾರರ ಪಟ್ಟಿ ಜಾಸ್ತಿ ಆಗುತ್ತಿದೆ. 2 ಇದ್ದ ಹೆಸರು 6 ಆಗಿದೆ. ಇನ್ನೂ ಪಟ್ಟಿ ಇದೆ. ನಾನೂ ಇದನ್ನು ಅನುಭವಿಸುತ್ತಿದ್ದೇನೆ ಎಂದು ಸ್ಪೀಕರ್ ಆಗಿ ತಮ್ಮ ನೋವು ಹೇಳಿಕೊಂಡಿರಿ. ನಾನು ಇಂಗ್ಲಿಷ್​ನ ಒಂದು ಮಾತನ್ನು ಉಲ್ಲೇಖಿಸಿದೆ ಅಷ್ಟೇ. ಹೆಣ್ಣಿಗೆ ಅಪಮಾನ ಮಾಡುವ, ಸದನದ ಗೌರವ ಕಡಿಮೆ ಮಾಡುವ ಅಥವಾ ಲಘುವಾಗಿ ವರ್ತಿಸುವ ದುರುದ್ದೇಶ ಇಲ್ಲ.
    • ಯಾವ ಸನ್ನಿವೇಶದಲ್ಲಿ ಏಕೆ ಹೇಳಿರುತ್ತೇವೆ ಎನ್ನುವುದನ್ನು ತೆಗೆದುಕೊಳ್ಳುವುದಿಲ್ಲ. ಮಧ್ಯದ ಯಾವುದೋ ಒಂದು ಸಾಲನ್ನಷ್ಟೇ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಸಮರ್ಥಿಸಿಕೊಳ್ಳುವುದಿಲ್ಲ. ಸಾಲದ್ದಕ್ಕೆ ಸ್ಪೀಕರ್ ಅವರನ್ನೂ ಎಳೆದುತರಲಾಗುತ್ತಿದೆ. ಸದಾ ಗೌರವದಿಂದ ಇರುವವನು ನಾನು. ಪ್ರತಿಷ್ಠೆ ಇಲ್ಲ.
    • ನನ್ನಿಂದ ಅಪರಾಧ ಆಗಿದೆ ಎನ್ನುವ ತೀರ್ವನಕ್ಕೆ ಬಂದು, ತೀರ್ಪು ಕೊಟ್ಟುಬಿಟ್ಟಾಗಿದೆ. ಆದ್ದರಿಂದ ಕ್ಷಮೆ ಕೋರುತ್ತೇನೆ.

    ಎಫ್​ಐಆರ್ ದಾಖಲಿಸಲು ಆಗ್ರಹ: ರಮೇಶ್​ಕುಮಾರ್ ಸೂಕ್ಷ್ಮತೆಯಿಲ್ಲದ ಮಾತನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಖಂಡಿಸಿದ್ದು, ತಕ್ಷಣ ಎಫ್​ಐಆರ್ ದಾಖಲಿಸಿ ವಿಧಾನಸಭೆಯಿಂದ ವಜಾ ಮಾಡಿ. ವಿಐಪಿ ಭದ್ರತೆ ಕಿತ್ತುಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಮುಜುಗರದಲ್ಲೇ ಶಾಸಕರ ಪ್ರವೇಶ!: ರಮೇಶ್​ಕುಮಾರ್ ಹೇಳಿಕೆ ಆಡಳಿತ ಮತ್ತು ವಿರೋಧ ಪಕ್ಷವನ್ನು ಮುಜುಗರಕ್ಕೀಡು ಮಾಡಿತ್ತು. ರಮೇಶ್​ಕುಮಾರ್ ಹೇಳಿಕೆ ಜತೆಗೆ ಸ್ಪೀಕರ್ ಕೂಡ ಧ್ವನಿಗೂಡಿಸಿದ್ದರಿಂದ ಬೆಳಗ್ಗೆ ಕಲಾಪಕ್ಕೆ ಆಗಮಿಸುವ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಮಾಧ್ಯಮದ ಮುಂದೆ ಮುಖ ತೋರಿಸುವುದಕ್ಕೆ ಮುಜುಗರ ಪಟ್ಟ ಪ್ರಸಂಗ ನಡೆಯಿತು. ಬಿಜೆಪಿ ಶಾಸಕರು ಮಾತ್ರ ರಮೇಶ್​ಕುಮಾರ್ ವಿರುದ್ಧ ಧ್ವನಿ ಎತ್ತಿದರು. ಕಾಗೇರಿ ವಿಚಾರ ಕೇಳಿದಾಗ ಮೌನವಹಿಸಿ ತಕ್ಷಣ ಸದನ ಪ್ರವೇಶಕ್ಕೆ ಮುಂದಾದರು. ಇನ್ನೂ ಕೆಲವು ವಿರೋಧ ಪಕ್ಷದ ಸದಸ್ಯರು ರಮೇಶ್​ಕುಮಾರ್ ಯಾವ ರೀತಿಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದಿಲ್ಲ. ಹೀಗಾಗಿ ಪ್ರತಿಕ್ರಿಯೆ ನೀಡುವುದು ಕಷ್ಟ ಎಂದು ಜಾರಿಕೊಂಡರು. ಅಂಜಲಿ ನಿಂಬಾಳ್ಕರ್ ಮಾತ್ರ ‘ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸುವುದು ಒಬ್ಬ ಮಹಿಳೆಯಾಗಿ ನನ್ನ ಕರ್ತವ್ಯ’ವೆಂದು ಹೇಳಿದರು.

    ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ಕಾಂಗ್ರೆಸ್ ಶಾಸಕರ ನಡುವೆ ನಡೆದ ಆಕ್ಷೇಪಾರ್ಹ ವಿಚಾರದ ವಿನಿಮಯವನ್ನು ಕಾಂಗ್ರೆಸ್ ಒಪು್ಪವುದಿಲ್ಲ. ಸ್ಪೀಕರ್ ಮತ್ತು ಅನುಭವಿ ಶಾಸಕರು ಇತರರಿಗೆ ಮಾದರಿಯಾಗಿರಬೇಕು. ಆಕ್ಷೇಪಾರ್ಹ ನಡವಳಿಕೆಗಳಿಂದ ದೂರವಿರಬೇಕು.

    | ರಣದೀಪ್ ಸಿಂಗ್ ಸುರ್ಜೆವಾಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿ

    ಪ್ರಿಯಾಂಕಾ ಖಂಡನೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ರಮೇಶ್ ಕುಮಾರ್ ಮಾತನ್ನು ಖಂಡಿಸಿದ್ದಾರೆ. ಅಂತಹ ಪದಗಳನ್ನು ಯಾರಾದರೂ ಹೇಗೆ ಹೇಳಬಹುದು ಎಂಬುದು ವಿವರಿಸಲಾಗ ದಂತಿದೆ. ಅವು ಅಸಮ ರ್ಥನೀಯ. ರೇಪ್ ಒಂದು ಘೊರ ಅಪರಾಧ. ಫುಲ್ ಸ್ಟಾಪ್! ಎಂದು ಅವರು ಟ್ವೀಟ್ ಮಾಡಿದ್ದಾರೆ.

    ನಮ್ಮ ಪಕ್ಷದವರು ಈ ರೀತಿ ಮಾಡಿರುವು ದನ್ನು ಖಂಡಿಸು ತ್ತೇವೆ. ಕಾಂಗ್ರೆಸ್ ಮಹಿಳೆಯನ್ನು ಗೌರವಿಸುತ್ತದೆ. ಲಿಂಗ ಸಮಾನತೆ ಎತ್ತಿ ಹಿಡಿಯುತ್ತದೆ. ಇದಕ್ಕಾಗಿಯೇ ರಮೇಶ್​ಕುಮಾರ್ ಕ್ಷಮೆ ಕೇಳಿದ್ದಾರೆ.

    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಮಹಿಳೆಯರನ್ನು ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡುವ ಮೂಲಕ ರಮೇಶ್​ಕುಮಾರ್ ಅವರು ಕಾಂಗ್ರೆಸ್ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಬಗೆಗಿನ ಕೀಳು ಭಾವನೆ ಮತ್ತು ವಿಕೃತ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ.

    | ಗೀತಾ ವಿವೇಕಾನಂದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

    ಸದನದ ಕ್ಷಮೆಗೆ ಪಟ್ಟು: ಈ ಘಟನೆಗೆ ಸಾಕ್ಷಿಯಾದ ಇಡೀ ಸದನ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಆಗ್ರಹಿಸಿದರೆ, ರಮೇಶ್​ಕುಮಾರ್ ಗುರುವಾರ ಆಡಿದ ಮಾತುಗಳನ್ನು ಕಡತದಿಂದ ತೆಗೆಯು ವಂತೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಆಗ್ರಹಿಸಿದರು. ಮುಜರಾಯಿ ಸಚಿವೆ ಸಹ ತಮ್ಮ ಅಭಿಪ್ರಾಯ ದಾಖಲಿಸಲು ಸಾಕಷ್ಟು ಪ್ರಯತ್ನಿಸಿದರು. ಸ್ಪೀಕರ್ ಯಾರಿಗೂ ಮಾತನಾಡಲು ಅವಕಾಶ ಕೊಡಲಿಲ್ಲ.

    ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts