ಬೆಂಗಳೂರು: ಅಂಬೇಡ್ಕರ್ ಎಂದಿಗೂ ತಪ್ಪು ಮಾಡಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಅಖಂಡ ಭಾರತಕ್ಕಾಗಿ ಪ್ರತಿಪಾದನೆ ಮಾಡಿದವರು. ಧ್ವಜ ರೂಪಿಸುವ ಸಮಿತಿಯಲ್ಲಿಯೂ ಅವರಿದ್ದರು.
ಆರ್ಎಸ್ಎಸ್ನವರು ಕೇಸರಿ ಬಣ್ಣದ ಭಗವಾ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ರೂಪಿಸುವಂತೆ ಮನವಿ ಮಾಡಿದಾಗ ಅದನ್ನು ನಿರಾಕರಿಸಲಿಲ್ಲ. ತ್ರಿವರ್ಣಧ್ವಜದಲ್ಲೇ ಕೇಸರಿಯನ್ನೂ ಸೇರಿಸಿದರು. ಅಶೋಕ ಚಕ್ರದ ಕೆಳಗೆ ಇರುವ ಸತ್ಯಮೇವ ಜಯತೆ ಸಾಲುಗಳನ್ನು ಪಂಡಿತ್ ಮದನ ಮೋಹನ ಮಾಳವಿಯಾ ಅವರು ಕಳುಹಿಸಿದ್ದರು. ಅದನ್ನೂ ಸ್ವೀಕರಿಸಿ ಲಾಂಛನದಲ್ಲಿ ಸೇರಿಸಿದರು ಎಂದು ಹೇಳಿದರು.
ಪರಿಶಿಷ್ಟ ಜಾತಿ, ವರ್ಗದ ಹಲವಾರು ಶಾಸಕರು ಇಲ್ಲಿದ್ದೀರಿ. ನಿಮ್ಮನಿಮ್ಮ ಕ್ಷೇತ್ರಗಳಲ್ಲಿ ಗೆಲ್ಲುವ ಶಕ್ತಿ ಇದೆಯಾ? ಸವರ್ಣೀಯರ ಮತಗಳಿಲ್ಲದೆ ಗೆದ್ದುಬರುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದರು. ಪೂನಾ ಒಪ್ಪಂದ ಜಾರಿಗೆ ಬಾರದೆ ಇದ್ದಿದ್ದರೆ ಅಂಬೇಡ್ಕರ್ ಸೋಲುತ್ತಿರಲಿಲ್ಲ. ಅವರು ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲಿಲ್ಲ. ಪಾರ್ಥಿವ ಶರೀರವನ್ನು ಮುಂಬೈಗೆ ತರಲು ನೆರವು ನೀಡಲಿಲ್ಲ. ಇದು ಕಾಂಗ್ರೆಸ್ನ ಬಹುದೊಡ್ಡ ತಪ್ಪು ಎಂದು ಹೇಳಿದರು.
ಈಗ ಅಂಬೇಡ್ಕರ್ ಅವರನ್ನು ಹಾಡಿ ಹೊಗಳಬಹುದು. ಪ್ರಶಸ್ತಿಗಳನ್ನು ಕೊಟ್ಟಿರಬಹುದು. ಆದರೆ ಅಂದು ಮಾಡಿದ ತಪ್ಪು ಅಕ್ಷಮ್ಯ. ಇದ್ದಾಗ ಅಪಮಾನ ಮಾಡೋದು, ಸತ್ತ ಮೇಲೆ ಕೊಂಡಾಡೋದು ವೈದಿಕ ಸಂಸ್ಕೃತಿಯ ಮನಸು ಎಂದರು.