More

    ರೈತರಿಗೆ ಏನು ಗ್ಯಾರಂಟಿ ಕೊಟ್ಟಿದ್ದೀರಿ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಪ್ರಶ್ನೆ

    ಮಂಡ್ಯ: ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೀರಿ. ಇದರಲ್ಲಿ ರೈತರಿಗೆ ಏನು ಕಾರ್ಯಕ್ರಮ ಕೊಟ್ಟಿದ್ದೀರಿ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಪ್ರಶ್ನಿಸಿದರು.
    ಲೋಕಸಭಾ ಚುನಾವಣೆ ಕಾರಣಕ್ಕೆ ಕಾಂಗ್ರೆಸ್‌ನಿಂದ 25 ಗ್ಯಾರಂಟಿ ನೀಡಲಾಗಿದೆ. ಅದರಲ್ಲಿ ರೈತರ ಸಾಲಮನ್ನಾ ಸೇರಿಸಲಾಗಿದೆ. ಹಾಗಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಬರದಿಂದ ರೈತರು ತತ್ತರಿಸಿರುವುದರಿಂದ ಚುನಾವಣೆಗೆ ಮುನ್ನವೇ ಅವರ ಸಾಲಮನ್ನಾ ಮಾಡಬಹುದಿತ್ತಲ್ಲವೇ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
    ಕಾವೇರಿ ನೀರಿನ ವಿಷಯ ಬಂದರೆ ಉತ್ತರ ಕರ್ನಾಟಕ ಭಾಗದ ಜನರು ಕಿವಿಗೊಡುತ್ತಾರೆ. ಅಷ್ಟೊಂದು ಭಾವನಾತ್ಮಕತೆ ಹೊಂದಿದ್ದೇವೆ. ಮೇಕೆದಾಟು ಯೋಜನೆ ಮಾಡುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ನಂತರ ಸುಮ್ಮನಾದರು. ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹವಿದ್ದರೂ ಜಿಲ್ಲೆಯ ರೈತರಿಗೆ ಕೊಡದೇ ಮಿತ್ರಪಕ್ಷ ತಮಿಳುನಾಡಿಗೆ ನಿರಂತರವಾಗಿ ಹರಿಸಲಾಯಿತು. ಈ ಮೂಲಕ ರೈತರಿಗೆ ಅನ್ಯಾಯ ಮಾಡಲಾಯಿತು. ಇದಲ್ಲದೆ ತ.ನಾಡು ಮೇಕೆದಾಟು ಯೋಜನೆಗೆ ತಡೆ ನೀಡುತ್ತೇವೆನ್ನುವ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇದ್ದನ್ನು ಕಾಂಗ್ರೆಸ್ ಖಂಡಿಸಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
    ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಫೆ.29ರೊಳಗೆ ಸಾಲ ಪಾವತಿಸಿದರೆ ಬಡ್ಡಿ ಮನ್ನಾ ಮಾಡುತ್ತೇವೆಂದು ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು ಚಿನ್ನಾಭರಣ, ಆಸ್ಥಿ ಅಡವಿಟ್ಟು ಸಾಲ ಕಟ್ಟಿದ್ದಾರೆ. ಆದರೆ ಅವರಿಗೆ ಮರುಸಾಲವನ್ನೇ ಕೊಡುತ್ತಿಲ್ಲ. ಹೀಗಾದರೆ ಅವರು ಕೃಷಿ ಚಟುವಟಿಕೆ ಮಾಡುವುದಾದರೂ ಹೇಗೆಂದು ಪ್ರಶ್ನಿಸಿದ ಬಂಡೆಪ್ಪ ಕಾಶೆಂಪೂರ್, ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗೆ ಕಳೆದ ವರ್ಷ ರಾಜ್ಯ ಸರ್ಕಾರ ಒಂದು ಲಕ್ಷ ಕೋಟಿ ರೂ ಸಾಲ ಮಾಡಿದೆ. ಈ ಹೊರೆಯನ್ನು ಯಾರ ಮೇಲೆ ಹಾಕಬೇಕು ಎಂದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
    ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತಮ ಆಡಳಿತ ನೀಡಿದವರು. ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದರು. ಮಂಡ್ಯ ಜಿಲ್ಲೆಯಲ್ಲಿ 709 ಕೋಟಿ ರೂ ಸಾಲ ಮನ್ನಾಗೊಂಡು ಸುಮಾರು ಒಂದೂವರೆ ಲಕ್ಷ ರೈತರಿಗೆ ಅನುಕೂಲವಾಗಿತ್ತು. ಇಂತಹ ವ್ಯಕ್ತಿಗೆ ಮತದಾರರು ಬೆಂಬಲ ನೀಡಬೇಕು. ಕಾಂಗ್ರೆಸ್‌ನಲ್ಲಿ ಬಹುತೇಕ ಸಚಿವರು ತಮ್ಮ ಅಧಿಕಾರದ ಕುರ್ಚಿ ಭದ್ರ ಮಾಡಿಕೊಳ್ಳಲು ಸ್ಪರ್ಧೆಗಿಳಿದಿಲ್ಲ, ಬದಲಿಗೆ ತಮ್ಮ ಮಕ್ಕಳನ್ನು ಕರೆತಂದು ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಗ್ಯಾರಂಟಿ ಯೋಜನೆ ನಂಬಿ ಮತ ಹಾಕಿದ ಬಡವರು ಪರಿತಪಿಸುತ್ತಿದ್ದಾರೆ. ಗೃಹಜ್ಯೋತಿ ಹೆಸರಿನಲ್ಲಿ ಜನರಿಗೆ ಪರಿಪೂರ್ಣವಾಗಿ ವಿದ್ಯುತ್ ಉಚಿತವಾಗಿ ನೀಡದೇ ವಾರ್ಷಿಕ ಸರಾಸರಿ ಮೀಟರ್ ಲೆಕ್ಕಹಾಕಿ ಹೆಸರಿನಲ್ಲಿ ಮೋಸ ಮಾಡಲಾಗುತ್ತಿದೆ. ಅನ್ನಭಾಗ್ಯದಲ್ಲಿಯೂ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿಯನ್ನು ತಮ್ಮದೇ ಎನ್ನುವ ಮೂಲಕ ಅಲ್ಲಿಯೂ ಮೋಸ ಮಾಡುತ್ತಿದ್ದಾರೆ. ಯುವ ನಿಧಿ ಎನ್ನುತ್ತೀರಾ, ಯಾವ ಯುವಕರಿಗೆ ನೀವು ಕೊಟ್ಟಿದ್ದೀರಾ ಎಂದು ಹರಿಹಾಯ್ದರು.
    ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಿ.ಜಯರಾಂ, ಕಾರ್ಯಾಧ್ಯಕ್ಷ ಸಿ.ಎಂ.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಸಿದ್ದಾಚಾರಿ, ಮಳವಳ್ಳಿ ಯುವ ಘಟಕ ಅಧ್ಯಕ್ಷ ಶ್ರೀಧರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts