More

    ನೀರಿಲ್ಲದೆ ವನ್ಯಜೀವಿಗಳ ಅರಣ್ಯರೋದನ

    ಹನಗೋಡು : ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪಕ್ಕೆ ಗ್ರಾಮೀಣ ಭಾಗದ ಕೆರೆಕಟ್ಟೆಗಳು ಬತ್ತಿಹೋಗುತ್ತಿದ್ದು, ಜನ-ಜಾನುವಾರುಗಳು ನೀರಿಗೆ ಬವಣೆಪಡುತ್ತಿವೆ. ಅರಣ್ಯದೊಳಗೆ ಪ್ರಾಣಿಗಳ ಅರಣ್ಯರೋದನ ಹೇಳತೀರದಾಗಿದೆ.

    ನಾಗರಹೊಳೆ ಅರಣ್ಯ ಪ್ರದೇಶದೊಳಗಿರುವ ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿ ಹೋಗಿದ್ದು, ಪ್ರಾಣಿ-ಪಕ್ಷಿಗಳು ನೀರಿಗಾಗಿ ಪ್ರಯಾಸಪಡುತ್ತಿವೆ. ಹಾಗಾಗಿ, ವನ್ಯಜೀವಿಗಳ ಬಯಾರಿಕೆ ತಣಿಸಲು ಅರಣ್ಯ ಇಲಾಖೆ ಕಾಡಿನೊಳಗಿರುವ ಕೆರೆ, ಕಟ್ಟೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದು, ಪ್ರಾಣಿ, ಪಕ್ಷಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿವೆ.

    ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು, ವೀರನಹೊಸಹಳ್ಳಿ, ಕಲ್ಲಹಳ್ಳ, ಅಂತರಸಂತೆ ಸೇರಿದಂತೆ ನಾಗರಹೊಳೆ ವಲಯ ವ್ಯಾಪ್ತಿಯಲ್ಲಿ ಫೆಬ್ರವರಿ ಅಂತ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾದ ಪರಿಣಾಮ ನಾಗರಹೊಳೆ ಅರಣ್ಯ ಒಣಗಿಹೋಗುತ್ತಿದೆ. ಇತ್ತ ಕಾಡಿನಲ್ಲಿರುವ ಸಾಕಷ್ಟು ಕೆರೆ-ಕಟ್ಟೆಗಳಲ್ಲಿ ನೀರಿನ ಬವಣೆ ಕಾಣಿಸಿಕೊಂಡಿದೆ. ಇದರಿಂದ ವನ್ಯಜೀವಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಹೆಚ್ಚಾಗಿದೆ. ಅಲ್ಲದೇ ಬೇಸಿಗೆ ತಾಪಮಾನದಿಂದ ಪಾರಾಗಲು ನೀರಿನ ಮೂಲ ಹುಡುಕಿ ಅಲ್ಲಿ ವಿಶ್ರಾಂತಿ ಪಡೆಯುವ ಹುಲಿ, ಆನೆಯಂತಹ ವನ್ಯಜೀವಿಗಳು ನೀರಿನ ಮೂಲ ಅರಸಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈ ಬಾರಿ ಮಳೆಗಾಲ ಕಡಿಮೆಯಾದ ಹಿನ್ನೆಲೆಯಲ್ಲಿ ಅಂತರ್ಜಲ ಹಾಗೂ ಅರಣ್ಯದೊಳಗೆ ಹರಿಯುವ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕಳೆದ ಹಲವು ವರ್ಷಗಳ ಹಿಂದೆಯೇ ನಾಗರಹೊಳೆ ಕಾಡಿನ ಮಂಟಹಳ್ಳಿ ಕೆರೆ, ಹಂದಿಕೆರೆ, ಭೀಮನಕಟ್ಟೆ, ಪಾರೆಕಟ್ಟೆ ಭಾಗದ ಕೆರೆ ಕಟ್ಟೆಗಳ ಸಮೀಪ ಕೊಳವೆಬಾವಿಗಳನ್ನು ಕೊರೆಸಿ ಅವುಗಳಿಗೆ ಸೋಲಾರ್ ಪಂಪ್ ಮೂಲಕ ನೀರು ಹರಿಸಿ ತುಂಬಿಸುವ ಕಾರ್ಯ ಕೈಗೊಂಡಿತ್ತು.

    ಮುಂಜಾಗ್ರತಾ ಕ್ರಮ: ಚಳಿಗಾಲ ಹಾಗೂ ಬೇಸಿಗೆಯ ಆರಂಭದಿಂದಲೂ ಬಿಸಿಲಿನ ತಾಪ ಹೆಚ್ಚಿರುವ ಪರಿಣಾಮ ಕೆರೆ-ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಮುನ್ಸೂಚನೆ ಅರಿತು ಎಚ್ಚರ ವಹಿಸಿರುವ ಅರಣ್ಯ ಇಲಾಖೆ ಟ್ಯಾಂಕರ್‌ಗಳ ಮೂಲಕ ಕಾಡಿನೊಳಗಿನ ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಕೆರೆಕಟ್ಟೆಗಳಲ್ಲಿ ನೀರು ಬತ್ತಿಹೋಗಿದಂತೆ ಕ್ರಮವಹಿಸಿದೆ.

    ನಾಗರಹೊಳೆ ಅರಣ್ಯದೊಳಗೆ ಕಬಿನಿ ಹಾಗೂ ಲಕ್ಷ್ಮಣತೀರ್ಥ ನದಿ ಹರಿಯುತ್ತಿರುವುದು ಕಾಡಿನ ಅಪಾರ ಜೀವ ಸಂತತಿಗೆ ಅನುಕೂಲವಾಗಿದೆ. ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ನದಿ ಪಾತ್ರ ಹಾಗೂ ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗಿದೆ. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಹಿನ್ನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಅಗತ್ಯವಿರುವ ಕೆರೆ, ಕಟ್ಟೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸುವ ಕಾರ್ಯಕೈಗೊಳ್ಳಲಾಗಿದೆ.
    ಡಾ.ಹರ್ಷಕುಮಾರ್ ಚಿಕ್ಕನರಗುಂದ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts