More

    88 ಎಕರೆ ಅರಣ್ಯ ಭೂಮಿ ಮರುಸ್ವಾಧೀನ, 40 ಎಕರೆ ಜಾಗದಲ್ಲಿ ನಳನಳಿಸುತ್ತಿವೆ 3 ಸಾವಿರ ಗಿಡಗಳು

    ಹರೀಶ್ ಮೋಟುಕಾನ

    ಮಂಗಳೂರು: ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಅತಿಕ್ರಮಿಸಿ ಖಾಸಗಿ ವ್ಯಕ್ತಿಯೊಬ್ಬರು ಗೇರು ಕೃಷಿ ಮಾಡುತ್ತಿದ್ದ ಭೂಮಿಯಲ್ಲಿ ಈಗ ಹೆಬ್ಬಲಸು, ನೆಲ್ಲಿ, ಬೀಟೆ, ನೇರಳೆ, ಮಾವು ಮೊದಲಾದ ಹದಿನೈದಕ್ಕೂ ಅಧಿಕ ಜಾತಿಯ 3 ಸಾವಿರ ಗಿಡಗಳ ಸುಂದರ ನೆಡುತೋಪು ನಳನಳಿಸುತ್ತಿದೆ!

    ಮಂಗಳೂರು ವಲಯದ ತೆಂಕ ಎಡಪದವು ಗ್ರಾಮದ ಮಡಪಾಡಿ ಎಂಬಲ್ಲಿ ಸರ್ವೇ ನಂಬ್ರ 100/4ರಲ್ಲಿ ಅರಣ್ಯ ಇಲಾಖೆಗೆ ಸೇರಿದ 88.04 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಆಕ್ರಮಿಸಿಕೊಂಡಿದ್ದರು. ಆ ಜಾಗವನ್ನು 2019-20ನೇ ಸಾಲಿನಲ್ಲಿ ಅರಣ್ಯ ಇಲಾಖೆ ಮರು ಸ್ವಾಧೀನ ಪಡೆದುಕೊಂಡು 40 ಎಕರೆ ಜಾಗದಲ್ಲಿ 3 ಸಾವಿರ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದೆ.

    ಜಾಗದ ಸುತ್ತಲೂ ಸಣ್ಣ ಕಣಿವೆ ತೋಡಿ ಗಿಡಗಳನ್ನು ನೆಡಲಾಗಿದೆ. 2019ರಲ್ಲಿ ನೆಡಲಾಗಿದ್ದ 3 ಸಾವಿರ ಗಿಡಗಳ ಪೈಕಿ 200 ಗಿಡಗಳು ಸತ್ತಿದ್ದವು. ಈ ವರ್ಷ ಆ ಜಾಗದಲ್ಲಿ ಮತ್ತೆ ಗಿಡಗಳನ್ನು ನೆಡಲಾಗಿದೆ. ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಇಲಾಖೆ ಸಿಬ್ಬಂದಿ ಆಗಾಗ ಸ್ಥಳಕ್ಕೆ ಭೇಟಿ ನೀಡಿ ನಿಗಾ ವಹಿಸುತ್ತಿದ್ದಾರೆ.

    ಅರಣ್ಯ ಇಲಾಖೆಗೆ ಮಡಪಾಡಿ ಪ್ರದೇಶದಲ್ಲಿ ಎಷ್ಟು ಜಾಗ ಇದೆ ಮತ್ತು ಯಾವ ಸ್ಥಿತಿಯಲ್ಲಿದೆ ಎನ್ನುವ ಸ್ಪಷ್ಟ ಮಾಹಿತಿ ಎರಡು ವರ್ಷದ ಹಿಂದಿನ ತನಕ ಇರಲಿಲ್ಲ. ಜನಸಂಪರ್ಕ ಸಭೆಯಲ್ಲಿ ಆ ಭಾಗದ ಶಾಸಕ ರಾಜೇಶ್ ನಾಯ್ಕ ಅವರು ವಸತಿ ರಹಿತರಿಗೆ ಸರ್ವೇ ನಂ.100/ 4ರಲ್ಲಿ ಮನೆ ನಿರ್ಮಿಸಲು ಉದ್ದೇಶಿಸಿ, ಅರಣ್ಯ ಇಲಾಖಾಧಿಕಾರಿಗಳಿಗೆ ಆ ಖಾಲಿ ಜಾಗವನ್ನು ಪರಿಶೀಲಿಸಲು ತಿಳಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ 88.04 ಎಕರೆ ಮೀಸಲು ಅರಣ್ಯ ಜಾಗ ಇರುವುದು ಗಮನಕ್ಕೆ ಬಂದಿತ್ತು. ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿರುವುದು ಗೊತ್ತಾಗಿತ್ತು. ತಕ್ಷಣ ಅವರಿಗೆ ಅರಣ್ಯ ಇಲಾಖೆ ಜಾಗವನ್ನು ಬಿಟ್ಟು ಕೊಡುವಂತೆ ಸೂಚಿಸಲಾಯಿತು.

    ಮಂಗಳೂರು ವಲಯದಲ್ಲಿ ಎಲ್ಲಿಯೂ ಮೀಸಲು ಅರಣ್ಯ ಇಲ್ಲದ ಕಾರಣ, ಜಾಗವನ್ನು ಭವಿಷ್ಯದ ದೃಷ್ಟಿಯಿಂದ ಅರಣ್ಯ ಇಲಾಖೆಗೆ ಉಳಿಸಿಕೊಡುವಂತೆ ಇಲಾಖೆ ಅಧಿಕಾರಿಗಳು ಶಾಸಕರಿಗೆ ಮನವಿ ಮಾಡಿದ್ದರು. ಅದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿದ್ದರಿಂದ ಇಂದು ಸುಂದರವಾದ ನೆಡುತೋಪು ನಿರ್ಮಾಣವಾಗಿದೆ.

    ಹೊರ ವಲಯದಲ್ಲಿ ಅಧಿಕ ಗಿಡ: ನಗರ ಪ್ರದೇಶದಲ್ಲಿ ಗಿಡಗಳನ್ನು ನೆಡುವಾಗ ಇರುವ ಉತ್ಸಾಹ ಅದನ್ನು ಕಾಪಾಡುವಲ್ಲಿ ಇರುವುದಿಲ್ಲ. ವಿವಿಧ ಕಾರಣಗಳಿಗೆ ಮರಗಳನ್ನು ಬೆಳೆಯಲು ಬಿಡುತ್ತಿಲ್ಲ. ಹಾಗಾಗಿ ನಗರದಲ್ಲಿ ಮರಗಳ ಸಂಖ್ಯೆ ಕಡಿಮೆ. ಗ್ರಾಮಾಂತರ ಭಾಗದಲ್ಲಿ ಶೇ.90ರಷ್ಟು ಗಿಡಗಳು ಉಳಿದು, ಬೆಳೆದು ದೊಡ್ಡದಾಗುತ್ತಿದೆ. ಗಂಜಿಮಠ ಕೆಐಎಡಿಬಿ ರಸ್ತೆ ಬದಿಯಲ್ಲಿ ಎರಡು ವರ್ಷದ ಹಿಂದೆ ಇಲಾಖೆ ನೆಟ್ಟ 900 ಗಿಡಗಳು ಹುಲುಸಾಗಿ ಬೆಳೆದಿವೆ. ಕೆಂಜಾರು, ವಾಮಂಜೂರು, ಕೈಕಂಬ ಮೊದಲಾದ ಕಡೆ ನೆಟ್ಟ ಗಿಡಗಳು ದೊಡ್ಡದಾಗಿವೆ.

    ತೆಂಕ ಎಡಪದವು ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ 15 ಹೆಕ್ಟೇರ್ ಜಾಗದಲ್ಲಿ ಕಳೆದ ವರ್ಷ ನೆಡುತೋಪು ಮಾಡಲಾಗಿದೆ. ವಿವಿಧ ಜಾತಿಯ 3 ಸಾವಿರ ಗಿಡಗಳು ಬೆಳೆಯುತ್ತಿವೆ. ನಗರಕ್ಕಿಂತ ಹೊರ ವಲಯದಲ್ಲಿ ಗಿಡ ನೆಡಲು ಇಲಾಖೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
    -ಪಿ.ಶ್ರೀಧರ್, ಮಂಗಳೂರು ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts