More

    ತಾರಸಿ ತರಕಾರಿ ತೋಟಕ್ಕೆ ಡಿಮ್ಯಾಂಡ್!

    ಬೆಳಗಾವಿ:ಋತುಮಾನ ಅನುಸಾರವಾಗಿ ಕೆಲವೊಮ್ಮೆ ತೀವ್ರ ಹೆಚ್ಚಾಗುವ ಬೆಲೆ ಏರಿಕೆ ಬಿಸಿ, ಪೌಷ್ಟಿಕ ಆಹಾರದ ಹಸಿವು, ಕೃಷಿ ಹವ್ಯಾಸ ಉಳಿಸಿಕೊಳ್ಳುವ ಹಂಬಲದಿಂದಾಗಿ ಜನರು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಾಳಿಗೆ ತೋಟ (ಟೆರೇಸ್ ಗಾರ್ಡನ್) ಮೊರೆ ಹೋಗುತ್ತಿದ್ದಾರೆ.
    45 ಸಾವಿರ ಜನರಿಗೆ ತರಬೇತಿ: ನಗರೀಕರಣ ಮತ್ತು ಕೈಗಾರಿಕೀಕರಣದ ಕಾರಣಗಳಿಂದಾಗಿ ಪೌಷಿಕ ಆಹಾರದ ಕೊರತೆ ಎದುರಿಸುತ್ತಿರುವ ಜನರು ಸಾವಯವ ಪದ್ಧತಿಯ ತಾರಸಿ ತೋಟ, ಕೈತೋಟದಲ್ಲಿ ಟೊಮೆಟೊ, ಹಸಿಮೆಣಸು, ಬದನೆಕಾಯಿ, ಬೆಂಡೆಕಾಯಿ, ಬೀನ್ಸ್, ತೊಗರಿ, ಸಿಹಿಗುಂಬಳ, ಹಾಗಲಕಾಯಿ, ಹಿರೇಕಾಯಿ, ಸೀಮೆ ಬದನೆ, ಆಲೂಗಡ್ಡೆ ಮುಂತಾದ ಕಾಯಿಪಲ್ಲೆ ಬೆಳೆಯಲು ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ತಾರಸಿ ತೋಟಗಾರಿಕೆಗಾಗಿ ಸುಮಾರು 45 ಸಾವಿರ ನಾಗರಿಕರು ತರಬೇತಿ ಪಡೆದುಕೊಂಡಿದ್ದಾರೆ. ರಾಜ್ಯದ 2.50 ಲಕ್ಷ ಜನರು ತಾರಸಿ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ವರ್ಷದಿಂದ ವರ್ಷಕ್ಕೆ ಬೇಡಿಕೆ ವೃದ್ಧಿ: ಈ ಹಿಂದೆ ರಾಜ್ಯ ಸರ್ಕಾರವು ತಾರಸಿ ತೋಟಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮ ಜಾರಿಗೊಳಿಸಿತ್ತು. ಸಾವಿರಾರು ಜನರಿಗೆ ತೋಟಗಾರಿಕೆ ತರಬೇತಿ ನೀಡಿ ಟೊಮೆಟೊ, ಬದನೆ, ಮೆಣಸಿನಕಾಯಿ ಗಿಡಗಳು ಮತ್ತು ಬೀಜಗಳು, ಮಣ್ಣು ಮಿಶ್ರಿತ ಗೊಬ್ಬರ ಸೇರಿ 500 ರೂ. ಮೊತ್ತದ ಕಿಟ್ ಉಚಿತವಾಗಿ ನೀಡಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಸರ್ಕಾರವು ಈ ಕಾರ್ಯಕ್ರಮ 2020ರಿಂದಲೇ ಸ್ಥಗಿತಗೊಳಿಸಿದೆ. ಆದರೆ, ತಾರಸಿ ತೋಟಗಾರಿಕೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

    ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆ: ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಪ್ರೋತ್ಸಾಹಿಸುವ, ಪರಿಸರ ಜತೆಗೆ ಸಂಪರ್ಕ ಸಾಧಿಸಲು, ತಮ್ಮ ಮನೆಗಳ ತಾರಸಿಯಲ್ಲಿ ಹಣ್ಣುಗಳು ಮತ್ತು ತರಕಾರಿ ಬೆಳೆಯುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರವು 2023-24ನೇ ಸಾಲಿನ ಬಜೆಟ್‌ನಲ್ಲಿ ‘ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ’ ಎಂಬ ಯೋಜನೆ ೋಷಣೆ ಮಾಡಿತ್ತು. ಇದೀಗ ಪ್ರಾಯೋಗಿಕವಾಗಿ ಮಹಾನಗರ ಪ್ರದೇಶಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಆ ಯೋಜನೆ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    2.50 ಲಕ್ಷ ಜನ ತಾರಸಿ ತೋಟಗಾರಿಕೆಯಲ್ಲಿ ಬಿಜಿ

    ರಾಜ್ಯದಲ್ಲಿ ಕರೊನಾ ಲಾಕ್‌ಡೌನ್, ತರಕಾರಿ ಬೆಲೆ ಏರಿಕೆಯಿಂದಾಗಿ ತಾರಸಿ ತೋಟಗಾರಿಕೆ ಹೆಚ್ಚು ಬೇಡಿಕೆ ಬಂದಿದೆ. 2020 ರಿಂದ 2023ರ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಸುಮಾರು 2.50 ಲಕ್ಷ ಜನರು ತಾರಸಿ ತೋಟ, ಕೈತೋಟ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲಿ ಆಸಕ್ತಿ ಇದ್ದೂ ಮಾಡಲಾಗದವರು ಅದೇ ಹವ್ಯಾಸವನ್ನು ತಾರಸಿ ತೋಟಗಾರಿಕೆಯಲ್ಲಿ ತೊಡಗುವ ಮೂಲಕ ಮುಂದುವರಿಸುತ್ತಿದ್ದಾರೆ. ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

    ಪ್ರಸಕ್ತ ದಿನಗಳಲ್ಲಿ ಪೌಷ್ಟಿಕ ಆಹಾರಕ್ಕಾಗಿ ಸಾವಯವ ತಾರಸಿ ತೋಟ, ಕೈತೋಟಕ್ಕೆ ಹೆಚ್ಚಿನ ಬೇಡಿಕೆ ಇರುವುದು ನಿಜ. ತೋಟಗಾರಿಕೆ ಇಲಾಖೆ ಪ್ರತಿ ವರ್ಷ 300 ಜನರಿಗೆ ತಾರಸಿ ತೋಟಗಾರಿಕೆ ಕುರಿತು ತರಬೇತಿ ನೀಡುತ್ತಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಎಂಬ ಯೋಜನೆ ಜಾರಿಗಾಗಿ ವಿದ್ಯಾರ್ಥಿಗಳ ಪಟ್ಟಿ ನೀಡಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪ್ರಕೃತಿಯೊಂದಿಗೆ ಬೆಸೆಯಲು ತೋಟಗಾರಿಕೆ ವಿಷಯ ಅನುವು ಮಾಡಿಕೊಡುತ್ತದೆ.
    | ಮಹಾಂತೇಶ ಮುರಗೋಡ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts