More

    ಸಂಚಾರ ನಿಯಮ ಪಾಲಿಸಿ, ಅಪಘಾತ ತಡೆಗಟ್ಟಲು ಸಹಕರಿಸಲಿ

    ಉಪ್ಪಿನಬೆಟಗೇರಿ: ಸಾರ್ವಜನಿಕರು ರಸ್ತೆ ಸಾರಿಗೆ ಸುರಕ್ಷತೆ ನಿಯಮಗಳನ್ನು ಪಾಲಿಸಿ, ಅಪಘಾತಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಧಾರವಾಡ ಗ್ರಾಮೀಣ ಪಿಎಸ್​ಐ ಬಸನಗೌಡ ಮಳೆಪ್ಪನವರ ಹೇಳಿದರು.

    ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ, ಧಾರವಾಡ ಜಿಲ್ಲಾ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಸ್ತೆ ಸಾರಿಗೆ ಸುರಕ್ಷತಾ ಸಪ್ತಾಹದಲ್ಲಿ ಅವರು ಮಾತನಾಡಿದರು. ವಾಹನ ಚಾಲಕರು ರಸ್ತೆಯಲ್ಲಿ ಸಂಚರಿಸುವಾಗ ಜಾಗರೂಕತೆ ವಹಿಸಬೇಕು. ಆದಷ್ಟು ನಿಧಾನವಾಗಿ ವಾಹನ ಚಲಾಯಿಸಬೇಕು. ಹೆಲ್ಮೆಟ್, ಲೈಸೆನ್ಸ್, ಸೀಟ್​ಬೆಲ್ಟ್, ವಾಹನಗಳ ಇನ್ಶೂರೆನ್ಸ್, ಹೊಗೆ ನಿಯಂತ್ರಣ ಪ್ರಮಾಣಪತ್ರ ಸೇರಿ ಇತರೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇತ್ತೀಚೆಗೆ ಯುವಕರು ಬೈಕ್ ಕ್ರೇಜ್​ನಿಂದ ರಸ್ತೆಯಲ್ಲಿ ಮನಬಂದಂತೆ ವಾಹನ ಚಲಾಯಿಸಿ ತಮ್ಮ ಪ್ರಾಣಕ್ಕೆ ಕಂಟಕ ತಂದುಕೊಳ್ಳುತ್ತಿದ್ದಾರೆ. ಇದರಿಂದ ಅಮೂಲ್ಯವಾದ ಜೀವನ ಹಾಳಾಗುವುದರೊಂದಿಗೆ ಪಾಲಕರಿಗೆ ಮತ್ತಷ್ಟು ತೊಂದರೆ ಅನುಭವಿಸುವಂತೆ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಹೆಬ್ಬಳ್ಳಿಯ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಹೆಣ್ಣು ಮಕ್ಕಳ ಶಾಲೆಯ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಸ್ತೆ ಸಾರಿಗೆ ಸುರಕ್ಷತೆ ಸಪ್ತಾಹದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಮೊರಬ, ಸದಸ್ಯ ಮಂಜುನಾಥ ಬಾಸಂದಿ, ಶಿಕ್ಷಕರಾದ ಎನ್.ಎಂ. ಹೂಗಾರ, ಎ.ಚಿ. ಉಮಚಗಿ, ಪೊಲೀಸ್ ಸಿಬ್ಬಂದಿ ಮಂಜುನಾಥ ತಡಹಾಳ, ಕೆ.ಎಸ್. ಕಾಂಬಳೆ, ಮಕ್ಬುಲ್ ಹುಲ್ಲೂರ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts