More

    ಹನೂರು ಭಾಗದಲ್ಲಿ ಹೂವು, ತರಕಾರಿ ಇಳುವರಿ ಕ್ಷೀಣ

    ಹನೂರು: ತಾಲೂಕಿನಲ್ಲಿ ಈ ಬಾರಿ ಮಳೆಯಿಲ್ಲದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು, ಇದರಿಂದಾಗಿ ಹೂವು ಹಾಗೂ ತರಕಾರಿ ಇಳುವರಿ ಕ್ಷೀಣಿಸಿದೆ.

    ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನೇ ಅವಲಂಬಿಸಿದ್ದು, ಮಳೆಯಾಶ್ರಿತದಲ್ಲಿ ರಾಗಿ ಹಾಗೂ ಮುಸುಕಿನ ಜೋಳ ಬೆಳೆದರೆ ನೀರಾವರಿ ವ್ಯವಸ್ಥೆಯಲ್ಲಿ ಕಬ್ಬು, ಅರಿಸಿಣ, ಬಾಳೆ, ಮುಸುಕಿನ ಜೋಳ ಮುಂತಾದ ವಾಣಿಜ್ಯ ಬೆಳೆಗಳ ಜತೆಗೆ ತರಕಾರಿ ಹಾಗೂ ಹೂವನ್ನೂ ಬೆಳೆಯುತ್ತಾರೆ. ಇದರಲ್ಲಿ ಹೆಚ್ಚಾಗಿ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕ್ಯಾರೆಟ್, ಬೀನ್ಸ್, ಕೋಸು, ಮೂಲಂಗಿ ಬೆಳೆಯುತ್ತಾರೆ.

    ಅಂತೆಯೇ ಮಣಗಳ್ಳಿ, ಬಂಡಳ್ಳಿ, ಚಿಂಚಳ್ಳಿ, ಅಲುಗುಮೂಲೆ, ಎಲ್ಲೇಮಾಳ, ಅಜ್ಜೀಪುರ ಭಾಗದಲ್ಲಿ ಕೆಲ ರೈತರು ಹೆಚ್ಚಾಗಿ ಕನಕಾಂಬರ ಹಾಗೂ ಚೆಂಡುಮಲ್ಲಿಗೆ ಬೆಳೆಯುತ್ತಾರೆ. ಆದರೆ ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆರೆ-ಕಟ್ಟೆಗಳು ಹಾಗೂ ಚೆಕ್‌ಡ್ಯಾಂಗಳು ಬತ್ತಿ ಹೋಗಿವೆ. ಇದರಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕೃಷಿಗೆ ಹಿನ್ನಡೆಯಾಗಿದೆ. ಪರಿಣಾಮ ತರಕಾರಿ ಹಾಗೂ ಹೂ ಬೆಳೆಯುವವರ ಸಂಖ್ಯೆ ಜತೆಗೆ ನೀರಾವರಿಯ ಅಲಭ್ಯತೆ, ಬಿಸಿಲಿನ ಬೇಗೆಗೆ ಇಳುವರಿಯೂ ಕಡಿಮೆಯಾಗಿದೆ. ಪರಿಣಾಮ ಈವೆರಡರ ಬೆಲೆಯಲ್ಲಿ ಏರಿಕೆಯಾಗಿದೆ.

    ದರ ಏರಿಕೆ: ಮಳೆಯಿಲ್ಲದ ಹಿನ್ನೆಲೆಯಲ್ಲಿ ಕೆಲ ರೈತರು ಹೂ ಬೆಳೆಯುವುದನ್ನು ನಿಲ್ಲಿಸಿದರೆ ಇನ್ನೂ ಕೆಲ ರೈತರು ಹೂ ಬೆಳೆದಿದ್ದರೂ ನೀರಾವರಿ ಸಮಸ್ಯೆ ಹಾಗೂ ಬಿಸಿಲಿನ ಹೊಡೆತಕ್ಕೆ ಇಳುವರಿ ಕಡಿಮೆಯಾಗಿದೆ. ಹೂಗಳ ದರ ಬಿಸಿಲಿನ ಬೇಗೆಯಂತೆ ಜಾಸ್ತಿಯಾಗಿದೆ. ಹಾಗೆಯೇ ಬೀನ್ಸ್, ಕ್ಯಾರೆಟ್, ಕೋಸು ಬೆಲೆಯೂ ಏರಿಕೆಯಾಗಿದೆ.

    ಎಳನೀರಿಗೂ ಬೇಡಿಕೆ: ತಾಲೂಕಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಕೂಲ್ ಪಾರ್ಲರ್‌ಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಇದರಿಂದ ಹಣ್ಣುಗಳ ಬೆಲೆಯಲ್ಲೂ ಕೊಂಚ ಏರಿಕೆ ಕಂಡಿದೆ. ಇನ್ನು ಸೌತೆಕಾಯಿ, ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣನ್ನು ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಮಳೆಯಿಲ್ಲದ ಪರಿಣಾಮ ಎಳನೀರಿನ ಇಳುವರಿಯೂ ಕ್ಷೀಣಿಸಿದೆ. ಇದರಿಂದ ಎಳನೀರಿಗೂ ಬೇಡಿಕೆ ನಿರ್ಮಾಣವಾಗಿದ್ದು, ಕಳೆದ ತಿಂಗಳು 30 ರೂ. ದರದಲ್ಲಿ ಮಾರಾಟವಾಗುತ್ತಿದ್ದ ಎಳನೀರು ಇದೀಗ 40 ರೂ.ಗೆ ಮಾರಾಟವಾಗುತ್ತಿದೆ.
    ಒಟ್ಟಿನಲ್ಲಿ ಈ ಬಾರಿ ತಾಲೂಕಿನಲ್ಲಿ ಮಳೆಯಾಗದ ಪರಿಣಾಮ ಕೃಷಿ ಉತ್ಪನ್ನಗಳ ಇಳುವರಿ ಕಡಿಮೆಯಾಗಿದೆ. ಇದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆಯು ಹೆಚ್ಚಾಗಿದೆ.

    ಈ ಭಾಗದ ಜಮೀನುಗಳಲ್ಲಿ ಬೆಳೆಯುತ್ತಿದ್ದ ಹೂಗಳನ್ನು ಖರೀದಿಸಲಾಗುತ್ತಿತ್ತು. ಆದರೆ ಈ ಬಾರಿ ಮಳೆಯಿಲ್ಲದ ಹಿನ್ನೆಲೆಯಲ್ಲಿ ಇಳುವರಿ ಕಡಿಮೆಯಾಗಿದೆ. ಇದರಿಂದ ಮಾರಾಟ ಮಾಡಲು ಸಮರ್ಪಕವಾಗಿ ಹೂ ಸಿಗುತ್ತಿಲ್ಲ. ಇದರಿಂದ ಬೇಡಿಕೆ ನಿರ್ಮಾಣವಾಗಿದೆ.
    ಮಹೇಶ್ ಹೂವಿನ ವ್ಯಾಪಾರಿ, ಹನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts