More

    ಜಿಲ್ಲಾಸ್ಪತ್ರೆಯಲ್ಲಿ ಐದು ಪ್ಯಾರಾಮೆಡಿಕಲ್ ಕೋರ್ಸ್

    ಹಾವೇರಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಐದು ಪ್ಯಾರಾಮೆಡಿಕಲ್ ಕೋರ್ಸ್​ಗಳನ್ನು ಆರಂಭಿಸಲಾಗುತ್ತಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

    ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜ್ ಆರಂಭಕ್ಕೆ ಅವಶ್ಯವಿರುವ ಕೋರ್ಸ್​ಗಳಾದ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್​ರೋಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಎಕ್ಸ-ರೇ ಟೆಕ್ನಾಲಜಿ, ಹೆಲ್ತ್ ಇನ್ಸ್​ಪೆಕ್ಟರ್, ಅಪರೇಷನ್ ಥಿಯೇಟರ್ ಮತ್ತು ಅನಸ್ಥೇಶಿಯಾ ಟೆಕ್ನಾಲಜಿ ಹಾಗೂ ಅಪ್ತಾಮಿಕ್ ಟೆಕ್ನಾಲಜಿ ಕೋಸ್​ಗಳು ಆರಂಭವಾಗಲಿವೆ. ಈ ಭಾಗದ ವಿದ್ಯಾರ್ಥಿಗಳಿಗೆ ಈ ಕೋರ್ಸ್​ಗಳ ಆರಂಭದಿಂದ ಅನುಕೂಲವಾಗಲಿದೆ ಎಂದರು.

    ಪ್ರತಿ ಕೋರ್ಸ್​ಗೆ 20 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಆನ್​ಲೈನ್ ಮೂಲಕ ಈಗಾಗಲೇ ಅರ್ಜಿ ಕರೆಯಲಾಗಿದೆ. ಪ್ಯಾರಾಮೆಡಿಕಲ್ ಬೋರ್ಡ್​ನಿಂದ ಶೀಘ್ರದಲ್ಲಿ ಪ್ರವೇಶ ಕೌನ್ಸೆಲಿಂಗ್ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿ ಕಾಲೇಜ್​ಗೆ ಕಳುಹಿಸಿಕೊಡಲಿದ್ದಾರೆ ಎಂದರು.

    ಈ ಕೋರ್ಸ್​ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಲಭ್ಯವಾಗದಿದ್ದರೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ 2 ವರ್ಷ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 3 ವರ್ಷ ಅವಧಿಯ ತರಬೇತಿ ನೀಡಲಾಗುವುದು. ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ಯಾರಾಮೆಡಿಕಲ್ ಕಾಲೇಜ್​ಗೆ ಹಂತಹಂತವಾಗಿ ಅವಶ್ಯವಿರುವ ಸಿಬ್ಬಂದಿ ನೇಮಿಸಲಾಗುವುದು. ತಾತ್ಕಾಲಿಕವಾಗಿ ಪರ್ಯಾಯ ಸಿಬ್ಬಂದಿ ನಿಯೋಜಿಸಿ ತರಗತಿ ನಡೆಸಲಾಗುವುದು ಎಂದರು.

    ನವೋದಯ ಶಾಲೆ ಆರಂಭಕ್ಕೆ ಹೊಸರಿತ್ತಿಯಲ್ಲಿ ಜಾಗ ಗುರುತಿಸಲಾಗಿದೆ. ಸರ್ಕಾರಿ ಕಾನೂನು ಕಾಲೇಜ್​ಗೆ 5 ಕೋಟಿ ರೂ. ಮಂಜೂರಾಗಿದ್ದು, ಕಟ್ಟಡ ನಿರ್ವಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು.

    ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ನರ್ಸಿಂಗ್ ಕಾಲೇಜ್ ಉಪಪ್ರಾಂಶುಪಾಲ ವಿನಾಯಕ ಕುಲಕರ್ಣಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಶೈಕ್ಷಣಿಕ ವರ್ಷದಿಂದ ಆರಂಭ

    ಸರ್ಕಾರಿ ವೈದ್ಯಕೀಯ ಕಾಲೇಜ್​ನ ಪ್ರಥಮ ವರ್ಷದ ತರಗತಿಗಳು ಈ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿವೆ. ತಾತ್ಕಾಲಿಕವಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ತರಗತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಲ್ಯಾಬ್ ಮತ್ತು ಪ್ರಾಯೋಗಿಕ ತರಗತಿ ನಡೆಸಲು ಜಿಲ್ಲಾಸ್ಪತ್ರೆಯ ಮಹಡಿಯ ಮೇಲೆ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಸಲಾಗಿದೆ ಎಂದು ಶಾಸಕ ಓಲೇಕಾರ ತಿಳಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts