More

    ಮತ್ತೆ ಐವರು ಆರೋಪಿಗಳ ಸೆರೆ, ಕ್ರಿಮಿನಲ್ ಗ್ಯಾಂಗ್‌ನ ಮೂವರ ಕೊಲೆಗೆ ಸಂಚು ಪ್ರಕರಣ

    ಮಂಗಳೂರು: ಕ್ರಿಮಿನಲ್ ಗ್ಯಾಂಗ್‌ನ ಮೂವರ ಕೊಲೆಗೆ ಸಂಚು ರೂಪಿಸಿದ್ದ ಆಪಾದನೆಯಡಿ ಐವರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

    ಆಕಾಶಭವನ ಶರಣ್‌ನ ತಮ್ಮ ಧೀರಜ್ ಯಾನೆ ಕುಟ್ಟ ಆಕಾಶಭವನ(26), ಮಧ್ಯಪ್ರದೇಶದ ರಾಜೇಶ್ ಥೋಮರ್ ಯಾನೆ ರಾಜ್ಬೀರ್(31), ಬಜ್ಪೆ ಆದ್ಯಪಾಡಿಯ ರಾಕೇಶ್ ಕಂಬಳಿ ಯಾನೆ ರಾಕಿ (25), ಎಕ್ಕಾರಿನ ರಾಜೇಶ್ ಆಚಾರ್ಯ(38), ಆಕಾಶಭವನದ ಸಾಗರ್(23) ಬಂಧಿತರು.

    ನಗರದ ಮತ್ತೊಂದು ಕ್ರಿಮಿನಲ್ ಗ್ಯಾಂಗ್‌ನಲ್ಲಿ ಸಕ್ರಿಯರಾಗಿರುವ ರೌಡಿಗಳಾದ ಪ್ರದೀಪ್ ಮೆಂಡನ್, ಮಂಕಿಸ್ಟಾೃಂಡ್ ವಿಜಯಾ, ಗೌರೀಶ್ ಯಾನೆ ಗೌರಿ ಎಂಬುವರನ್ನು ಕೊಲೆ ಮಾಡಲು ಬಂಧಿತರು ಸಂಚು ಹೂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕುಲಶೇಖರ ಕಟ್ಟೆ ಬಳಿ ಮಾ.17ರಂದು ನಡೆದ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ, ಚಂದ್ರ ಯಾನೆ ಚಂದ್ರಹಾಸ ಪೂಜಾರಿ, ಪ್ರಜ್ವಲ್ ಯಾನೆ ಹೇಮಚಂದ್ರ, ಸಂತೋಷ್ ಪೂಜಾರಿ ಯಾನೆ ನಾಯಿ ಸಂತು ಎಂಬುವರು ನೀಡಿದ ಮಾಹಿತಿ ಅನ್ವಯ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಒಂಬತ್ತು ಮಂದಿ ಆರೋಪಿಗಳೂ ರೌಡಿ ಆಕಾಶಭವನದ ಶರಣ್ ಯಾನೆ ರೋಹಿದಾಸ್‌ನ ಸಹಚರರು ಎನ್ನಲಾಗಿದೆ.

    ಮಧ್ಯಪ್ರದೇಶದ ರಾಜೇಶ್ ಥೋಮರ್ ಎಂಬಾತ ಈ ಗ್ಯಾಂಗ್‌ಗೆ ಮಾರಕಾಸ್ತ್ರ ಪೂರೈಕೆ ಮಾಡಿದ್ದ. ಈತ 2016ರಲ್ಲಿ ಕಟೀಲಿನಲ್ಲಿ ನಡೆದ ದರೋಡೆ ಪ್ರಕರಣದಲ್ಲೂ ಆರೋಪಿ. ರಾಕೇಶ್ ಕಂಬಳಿಯ ಮೇಲೆ ಮಣಿಪಾಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ರಾಜೇಶ್ ಆಚಾರ್ಯನ ಮೇಲೆ ಬಜ್ಪೆ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದೆ.

    ಬಂಧಿತ ಐವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

    ಪರಸ್ಪರ ದ್ವೇಷ ಕಾರಣ: ಆಕಾಶಭವನ ಶರಣ್‌ನ ಎದುರಾಳಿ ಗ್ಯಾಂಗ್‌ನಲ್ಲಿರುವ ಬಜಾಲ್ ಕುಂಟಲ ನಿವಾಸಿ ಗೌರೀಶ್ ಸುಜೀತ್ ಗೌರಿ(30)ಯ ಮೇಲೆ ಮಂಗಳೂರು ಗ್ರಾಮಾಂತರ-2, ಕಾವೂರು-4, ಬರ್ಕೆ-3, ಉಳ್ಳಾಲ-1, ಕಂಕನಾಡಿ ನಗರ -2 ಸಹಿತ 11 ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಬರ್ಕೆ, ಕಾವೂರು, ಕಂಕನಾಡಿ ನಗರ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಶೀಟರ್ ತೆರೆಯಲಾಗಿದೆ. ಈತನು ಮೊದಲು ಆಕಾಶಭವನ ಶರಣ್ ಗ್ಯಾಂಗ್‌ನಲ್ಲಿದ್ದ. ಬಳಿಕ ಹಣಕಾಸಿನ ವೈಮನಸ್ಸಿನಿಂದ ಆ ಗ್ಯಾಂಗ್‌ನಿಂದ ಹೊರಬಂದು ತನ್ನದೇ ಆದ ಗ್ಯಾಂಗ್ ಕಟ್ಟಿಕೊಟ್ಟಿಕೊಂಡಿದ್ದ. ಹಾಗಾಗಿ ಇವರ ಮಧ್ಯೆ ವೈಮನಸ್ಸು ಉಂಟಾಗಿದ್ದು, ಪರಸ್ಪರ ಕೊಲೆ ಮಾಡಲು ಸ್ಕೆಚ್ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಜೈಲಿನಿಂದಲೇ ಗ್ಯಾಂಗ್ ರಚನೆ: ಶರಣ್ ಜೈಲಿನಲ್ಲಿದ್ದುಕೊಂಡು ತನ್ನ ಗ್ಯಾಂಗ್ ಕಟ್ಟಿದ್ದ. ಅಲ್ಲದೆ ಶ್ರೀಮಂತರನ್ನು ಬೆದರಿಸಿ ಹಫ್ತಾ ವಸೂಲಿ, ಹಣಕಾಸಿನ ಡೀಲ್, ಮಾದಕ ವಸ್ತು ಸಾಗಾಟ, ಮರಳು ದಂಧೆ ಇತ್ಯಾದಿ ಅಕ್ರಮ ಚಟುವಟಿಕೆಗಳ ಮೂಲಕ ಹಣ ಗಳಿಸುವ ಉದ್ದೇಶ ಹೊಂದಿದ್ದ. ನಗರದ ಎಲ್ಲ ಗ್ಯಾಂಗ್‌ಗಳೂ ತನ್ನ ಕೈಕೆಳಗೆ ಇರಬೇಕು ಎಂದು ಬಯಸಿದ್ದ. ಅದಕ್ಕಾಗಿ ತನ್ನ ಎದುರಾಳಿ ಗ್ಯಾಂಗನ್ನು ಮಟ್ಟ ಹಾಕಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts