More

    ಅವಧಿ ಪೂರ್ವ ಮೀನುಗಾರಿಕೆ ಬಂದ್, ಶೇ.60ರಷ್ಟು ಬೋಟುಗಳು ಲಂಗರು

    ಹರೀಶ್ ಮೋಟುಕಾನ/ಗೋಪಾಲಕೃಷ್ಣ ಪಾದೂರು ಮಂಗಳೂರು

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕೆ ಅವಧಿಗೆ ಮೊದಲೇ ಶೇ.60ರಷ್ಟು ಸ್ಥಗಿತಗೊಂಡಿದೆ.
    ಸಾಮಾನ್ಯವಾಗಿ ಬೋಟುಗಳು ಲಂಗರು ಹಾಕುವುದು ಜೂನ್ ತಿಂಗಳಲ್ಲಿ. ಆದರೆ ಈ ಬಾರಿ ಜನವರಿ ಮೊದಲ ವಾರವೇ ಸಾವಿರಾರು ಬೋಟ್‌ಗಳು ಮಂಗಳೂರಿನ ದಕ್ಕೆ ಹಾಗೂ ಮಲ್ಪೆ ಮೀನುಗಾರಿಕಾ ಬಂದರುಗಳಲ್ಲಿ ಠಿಕಾಣಿ ಹೂಡಿವೆ.

    ಸಮುದ್ರದಲ್ಲಿ ಮೀನುಗಳ ಅಭಾವ, ನಾಲ್ಕು ತಿಂಗಳಿನಿಂದ ಸಿಗದ ಡೀಸೆಲ್ ತೆರಿಗೆ ವಿನಾಯಿತಿ, ಡೀಸೆಲ್ ದರ ಏರಿಕೆ, ಕಾರ್ಮಿಕರ ವೇತನ, ಬಲೆ, ರೋಪ್, ಕಬ್ಬಿಣದ ಸಾಮಗ್ರಿಗಳು, ಐಸ್ ದರ ಏರಿಕೆ ಸೇರಿದಂತೆ ಇತರ ನಿರ್ವಹಣೆ ಖರ್ಚುಗಳ ಹೆಚ್ಚಳ ಮೀನುಗಾರಿಕೆ ಸ್ಥಗಿತಕ್ಕೆ ಪ್ರಮುಖ ಕಾರಣಗಳು.
    ಇತ್ತೀಚಿನ ವರ್ಷಗಳಲ್ಲಿ ಮೀನುಕ್ಷಾಮ ಹಿನ್ನೆಲೆಯಲ್ಲಿ ಜೀವನವೇ ಕಷ್ಟವಾಗಿರುವ ನಡುವೆಯೇ ಕರೊನಾ ಲಾಕ್‌ಡೌನ್‌ನಿಂದ ಮೀನುಗಾರರೂ ನಷ್ಟಕ್ಕೊಳಗಾಗಿದ್ದರು. ಈಗ ಗಾಯದ ಮೇಲೆ ಬರೆ ಎಂಬಂತೆ ಮೀನುಗಾರಿಕೆಯೇ ಸ್ಥಗಿತಗೊಳ್ಳುತ್ತಿದೆ.

    ಲಾಭ ತಾರದ ಮೀನುಗಾರಿಕೆ: ದ.ಕ.ಜಿಲ್ಲೆಯಲ್ಲಿ 30 ಸಾವಿರ ವೃತ್ತಿನಿರತ ಮೀನುಗಾರರಿದ್ದಾರೆ. 1134 ಪರ್ಸೀನ್ ಮತ್ತು ಟ್ರಾಲ್, 1396 ಗಿಲ್‌ನೆಟ್, 531 ಸಾಂಪ್ರದಾಯಿಕ ಬೋಟ್‌ಗಳಿವೆ. ಉಡುಪಿ ಜಿಲ್ಲೆಯಲ್ಲಿ ಪರ್ಸಿನ್, ಆಳಸಮುದ್ರ ಮೀನುಗಾರಿಕೆ, ನಾಡದೋಣಿ ಸೇರಿ ಒಟ್ಟು 1800ಕ್ಕೂ ಅಧಿಕ ಬೋಟ್‌ಗಳಿವೆ. ಆದರೆ ಮೀನಿನ ಕೊರತೆ, ನಿರ್ವಹಣಾ ವೆಚ್ಚ ಹೆಚ್ಚಳದಿಂದ ಮೀನುಗಾರಿಕೆ ನಷ್ಟದ ಹಾದಿಯಲ್ಲಿರುವುದರಿಂದ ಅನಿವಾರ್ಯವಾಗಿ ಸಾವಿರಾರು ಬೋಟುಗಳು ಬಂದರು ಸೇರಿವೆ.

    ಆಳ ಸಮುದ್ರ ಮೀನುಗಾರರು ತಿಂಗಳಿಗೆ ಮೂರು ಟ್ರಿಪ್ ಮೀನುಗಾರಿಕೆ ಮಾಡುತ್ತಾರೆ. ಪ್ರತೀ ಟ್ರಿಪ್‌ಗೆ 6 ಸಾವಿರ ಲೀ. ಡೀಸೆಲ್ ಖರ್ಚಾಗುತ್ತದೆ. ಮೂರು ಟ್ರಿಪ್‌ಗೆ 18 ಸಾವಿರ ಲೀ.ಡೀಸೆಲ್ ಬೇಕು. ಸರ್ಕಾರ 9 ಸಾವಿರ ಲೀ.ಸಬ್ಸಿಡಿ ನೀಡುತ್ತಿದೆ. ಈ ಬಾರಿ ಅಕ್ಟೋಬರ್ ತಿಂಗಳಿನಿಂದ ಈ ಹಣ ಸಿಕ್ಕಿಲ್ಲ. ಒಂದು ಟ್ರಿಪ್‌ನಲ್ಲಿ 7 ಲಕ್ಷ ರೂ.ಮೌಲ್ಯದ ಮೀನು ಸಿಕ್ಕರೆ ವೆಚ್ಚ ನಿಭಾಯಿಸಬಹುದು. ಸಕಾಲದಲ್ಲಿ ಸಿಗದ ಕಾರಣ ಮೀನುಗಾರಿಕೆ ಸ್ಥಗಿತ ಮಾಡಿದ್ದೇವೆ ಎಂದು ದೋಣಿ ಮಾಲೀಕ ಮುಸ್ತಾಕ್ ಕುದ್ರೋಳಿ ತಿಳಿಸಿದ್ದಾರೆ.

    ನಾಡದೋಣಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ 180 ಲೀ. ಸೀಮೆಎಣ್ಣೆ ಸಿಗುತ್ತಿತ್ತು. ಆದರೆ ಈ ಬಾರಿ ಸಿಕ್ಕಿದ್ದು ಅರ್ಧದಷ್ಟು ಪ್ರಮಾಣ ಮಾತ್ರ. ಹೆಚ್ಚುವರಿ ಸೀಮೆಎಣ್ಣೆಯೂ ಸಿಗಲಿಲ್ಲ. ನಾಡದೋಣಿ ಮೀನುಗಾರರೂ ಕಷ್ಟ ಅನುಭವಿಸುವಂತಾಗಿದೆ. 4 ತಿಂಗಳಿನಿಂದ ಡೀಸೆಲ್ ತೆರಿಗೆ ವಿನಾಯಿತಿ ಸಿಕ್ಕಿಲ್ಲ. ಮತ್ಸೃಕ್ಷಾಮದ ಜತೆ ಇಂಧನ ದುಬಾರಿಯಾಗಿರುವುದರಿಂದ ಅನಿವಾರ್ಯವಾಗಿ ಬೋಟ್‌ಗಳನ್ನು ಲಂಗರು ಹಾಕಿದ್ದೇವೆ ಎಂದು ಉಡುಪಿ ಮೀನುಗಾರರು ಹೇಳುತ್ತಾರೆ.

    ಮೀನಿಗೆ ಬರ, ಏರಿದ ದರ
    ಮೀನುಗಾರಿಕೆ ಭಾಗಶಃ ಸ್ಥಗಿತಗೊಂಡ ಪರಿಣಾಮ, ದಕ್ಕೆಯಲ್ಲೇ ಅಂಜಲ್‌ಗೆ 400 ರೂ.ನಿಂದ 650 ರೂ, ಮಾಂಜಿ 800ರಿಂದ 1000 ರೂ, ಬಂಗುಡೆ 180ರಿಂದ 250 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು 50 ರೂ.ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ. ಹೊಟೇಲ್‌ಗಳಲ್ಲಿ ಒಂದು ತುಂಡು ಅಂಜಲ್ ದರ 350 ರೂ. ಪ್ರತಿದಿನ ಮೀನು ಸೇವಿಸುವವರಿಗೆ ದುಬಾರಿ ದರದ ಬಿಸಿ ತಟ್ಟಿದೆ. ಮಂಗಳೂರಿನ ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಮಹಿಳೆಯರೇ ಮೀನು ಮಾರಾಟ ಮಾಡುತ್ತಾರೆ. ಮೀನಿನ ಬರ ಮುಂದುವರಿದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸ್ಟೇಟ್‌ಬ್ಯಾಂಕ್‌ನಲ್ಲಿ ಮೀನು ಮಾರಾಟ ಮಾಡುವ ರಜನಿ. ಇನ್ನೊಂದೆಡೆ, ಕರಾವಳಿಗೆ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಿಂದ ಮೀನು ಪೂರೈಕೆ ಆಗುತ್ತದೆ. ಸಾಗಾಟ ವೆಚ್ಚ ಹೆಚ್ಚಾದ ಕಾರಣ, ಮೀನಿನ ರೇಟ್ ಜಾಸ್ತಿ.

    ಕುಂದಿದ ಬೇಡಿಕೆ, ರಫ್ತು ಸ್ಥಗಿತ
    ಕರಾವಳಿಯಿಂದ ವಿದೇಶಗಳಿಗೆ ಮೀನಿನ ರಫ್ತು ಶೇ.80ರಷ್ಟು ಸ್ಥಗಿತಗೊಂಡಿದೆ. 2019ರಲ್ಲಿ ಮಂಗಳೂರು 12, ಉಡುಪಿ 10, ಉತ್ತರ ಕನ್ನಡ 3 ಸೇರಿದಂತೆ ಒಟ್ಟು 25 ಕಾರ್ಖಾನೆಗಳಿಂದ 1600 ಕೋಟಿ ರೂ.ಮೌಲ್ಯದ ಮೀನು ರಫ್ತಾಗಿತ್ತು. ಕೋವಿಡ್ ಬಳಿಕ 15ಕ್ಕೂ ಅಧಿಕ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಕಪ್ಪೆ ಬೊಂಡಾಸ್, ಬೊಂಡಾಸ್, ಅಂಜಲ್, ಬಂಗುಡೆ ಮೊದಲಾದ ರಫ್ತಾಗುತ್ತಿದ್ದ ಮೀನುಗಳಿಗೆ ಕರೊನಾ ಬಳಿಕ ವಿದೇಶದಲ್ಲಿ ಬೇಡಿಕೆ ಕಡಿಮೆಯಾಗಿದೆ.

    ಇಂದು ನಿಯೋಗ ಸಿಎಂ ಭೇಟಿ
    ಮಂಗಳೂರು, ಉಡುಪಿಯ ಪರ್ಸಿನ್, ಟ್ರಾಲ್‌ಬೋಟ್ ಮೀನುಗಾರರ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ರಘುಪತಿ ಭಟ್ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ, ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರನ್ನು ಭೇಟಿ ಆಗಲಿದೆ. ರಿಯಾಯಿತಿ ದರದ ಡೀಸೆಲ್ ಹಣ ನಾಲ್ಕು ತಿಂಗಳಿನಿಂದ ಪಾವತಿಗೆ ಬಾಕಿ, ಮೂರನೇ ಹಂತದ ಬಂದರು ವಿಸ್ತರಣೆ ಜೆಟ್ಟಿ ನಿರ್ಮಾಣ, ಡ್ರೆಜ್ಜಿಂಗ್ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು, ಬಜೆಟ್‌ನಲ್ಲಿ ಮೀನುಗಾರಿಕೆಗೆ ಆದ್ಯತೆ ನೀಡುವಂತೆ ಒತ್ತಾಯಿಸುವುದು ಭೇಟಿಯ ಉದ್ದೇಶ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ತಿಳಿಸಿದರು.

    ಮೀನು ಸಂತತಿ ನಾಶಕ್ಕೇನು ಕಾರಣ?
    ಮೀನುಗಾರಿಕಾ ಬೋಟ್‌ಗಳ ಸಂಖ್ಯೆ ಹೆಚ್ಚಳ, ಕೈಗಾರಿಕೆಗಳ ಮಾಲಿನ್ಯ ನೀರು ಸಮುದ್ರ ಸೇರುವುದು ಹಾಗೂ ತಾಪಮಾನ ಏರಿಕೆ ಮೀನುಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬುದು ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಹಾಗೂ ಪ್ರಾಧ್ಯಾಪಕ ಡಾ.ಎ.ಸೆಂಥಿಲ್‌ವೇಲ್ ಅಭಿಪ್ರಾಯ. ಬೋಟ್‌ಗಳ ಸಂಖ್ಯೆ ಹೆಚ್ಚಾದರೆ, ಎಲ್ಲರಿಗೂ ಹೇರಳ ಪ್ರಮಾಣದಲ್ಲಿ ಮೀನು ಸಿಗಲಾರದು. ಸರ್ಕಾರ ಲೈಸೆನ್ಸ್ ನೀಡುವಾಗ ಎಚ್ಚರಿಕೆ ವಹಿಸಬೇಕು. ಸರ್ಕಾರದ ಕಾನೂನು ಸಮುದ್ರದಲ್ಲಿ ಪಾಲನೆಯಾಗುತ್ತಿಲ್ಲ. ಇಲಾಖೆಯಲ್ಲಿ ಅಗತ್ಯ ಸೌಲಭ್ಯಗಳಿಲ್ಲ. ಅವೈಜ್ಞಾನಿಕ ಮೀನುಗಾರಿಕೆ ತಡೆ ಸಾಧ್ಯವಾಗುತ್ತಿಲ್ಲ. ಹಸಿರು ಪರಿಸರ ನಾಶದಿಂದ ತಾಪಮಾನ ಹೆಚ್ಚಿ, ಸಮುದ್ರದ ನೀರು ಬಿಸಿಯಾಗುತ್ತಿದೆ. ಬಂಗುಡೆ, ಬೂತಾಯಿ ಮೊದಲಾದ ಮೀನುಗಳ ಸಂತತಿಗೆ ಇದು ಮಾರಕ ಎನ್ನುತ್ತಾರೆ ಡಾ.ಎ.ಸೆಂಥಿಲ್‌ವೇಲ್.

    ಗಡಿ ಮೀರಿದರೆ ದಂಡ!
    ಮಲ್ಪೆ, ಮಂಗಳೂರು ಸಹಿತ ರಾಜ್ಯದ ಮೀನುಗಾರರು ಕೇರಳ ಅಥವಾ ಗೋವಾ ವ್ಯಾಪ್ತಿಗೆ ಹೋದರೆ ಬೋಟ್‌ನಲ್ಲಿರುವ ಮೀನಿನ 5 ಪಟ್ಟು ದಂಡ ವಿಧಿಸಲಾಗುತ್ತಿದೆ. ಆದರೆ ಬೇರೆ ರಾಜ್ಯದ ಮೀನುಗಾರರು ನಮ್ಮ ಕರಾವಳಿಯಲ್ಲಿ ಮುಕ್ತವಾಗಿ ಮೀನು ಹಿಡಿಯುತ್ತಾರೆ. ಇದರಿಂದ ಸ್ಥಳೀಯರಿಗೆ ಮೀನು ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ನೀಡಿದ ಮನವಿ ಪ್ರಯೋಜನವಾಗಿಲ್ಲ. ಡೀಸೆಲ್ ತೆರಿಗೆ ವಿನಾಯಿತಿ ಮನವಿಗೂ ಸ್ಪಂದನೆ ಲಭಿಸಿಲ್ಲ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ.

    ಮೀನುಗಾರರಿಗೆ ಲಾಭಕ್ಕಿಂತ ಈ ಕಾಲದಲ್ಲಿ ಖರ್ಚು ಹೆಚ್ಚು. ಹೆಚ್ಚಿನವರು ಮೀನುಗಾರಿಕೆಗೆ ಹೋಗುತ್ತಿಲ್ಲ. ಡೀಸೆಲ್ ಸಬ್ಸಿಡಿ ಮೊತ್ತ ಬಿಡುಗಡೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುತ್ತದೆ. ಬಾಕಿ ಮೊತ್ತ ಒಂದೇ ಬಾರಿಗೆ ಶೀಘ್ರ ಸಿಗುವ ನಿರೀಕ್ಷೆ ಇದೆ.
    – ಪಾರ್ಶ್ವನಾಥ್, ಉಪನಿರ್ದೇಶಕ, ಮೀನುಗಾರಿಕಾ ಇಲಾಖೆ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts