More

    4 ತಿಂಗಳು ಮೀನುಗಾರಿಕೆ ಕಷ್ಟ,ಯಾಂತ್ರಿಕ ಮೀನುಗಾರರ ಬದುಕು ತತ್ತರ

    ಅವಿನ್ ಶೆಟ್ಟಿ, ಉಡುಪಿ / ಮಂಗಳೂರು
    ಕರೊನಾ ಲಾಕ್‌ಡೌನ್ ಅವಧಿ ಮೇ3 ವರೆಗೆ ವಿಸ್ತರಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಯಾಂತ್ರಿಕೃತ ಮೀನುಗಾರಿಕೆ ಮೇ 31ಕ್ಕೆ ಮುಕ್ತಾಯವಾಗುತ್ತದೆ.ನಂತರ ಎರಡು ತಿಂಗಳು ಮಳೆಗಾಲ,ಮೀನುಗಾರಿಕೆ ನಿಷೇಧ. ಈ ನಡುವೆ ಯಾಂತ್ರಿಕೃತ ಮೀನುಗಾರಿಕೆಗೆ ಅವಕಾಶ ಸಿಕ್ಕರೂ, ಕಾರ್ಮಿಕರ ಕೊರತೆ ಕಾಡಲಿದೆ.ಹೀಗಾಗಿ ಇನ್ನು ನಾಲ್ಕು ತಿಂಗಳು ಮೀನುಗಾರಿಕೆ ಬಗ್ಗೆ ಏನು ಹೇಳಲು ಸಾಧ್ಯ ಇಲ್ಲ.
    ಮೊದಲೇ ಮೀನಿಲ್ಲದೆ ಕಂಗೆಟ್ಟಿದ್ದ ಮೀನುಗಾರರಿಗೆ ಸಾಲ, ಸಂಕಟ ಹೆಚ್ಚಾಗುತ್ತಿದೆ. ಋತು ಅಂತ್ಯದ ಎರಡುವರೆ ತಿಂಗಳಲ್ಲಿ ಉತ್ತಮವಾಗಿ ಇಳುವರಿ ನಿರೀಕ್ಷೆಯಲ್ಲಿರುವಾಗಲೇ ಕರೊನಾ ಬದುಕನ್ನೇ ಕಸಿದುಕೊಂಡಿದೆ.
    ಮಾ.20ರಿಂದ ಮೀನುಗಾರಿಕೆ ಸ್ಥಗಿತಗೊಂಡಿದ್ದು ,ಒಟ್ಟಾರೆ ಕರಾವಳಿ ಜಿಲ್ಲೆಯಲ್ಲಿ ಇನ್ನೂ 4 ತಿಂಗಳು ಮೀನುಗಾರಿಕೆ ಸಂಪೂರ್ಣ ಸ್ತಬ್ದಗೊಳ್ಳುವ ಸಾಧ್ಯತೆಯಿದೆ. ಅಂದಾಜು 1000 ಕೋಟಿ ರೂ.ನಷ್ಟ ಉಂಟಾಗಲಿದೆ ಎನ್ನುತ್ತಾರೆ ಮೀನುಗಾರ ಮುಖಂಡರು.

    ಮೀನುಗಾರಿಕೆ ಬೋಟುಗಳೆಷ್ಟು?: ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 4350 ಟ್ರಾಲ್‌ಬೋಟ್‌ಗಳು ಮೀನುಗಾರಿಕೆಯಲಿವೆ. 9652 ಮೋಟಾರೀಕತ ನಾಡದೋಣಿ, 272 ಪರ್ಸಿನ್ ಬೋಟುಗಳು, ಹಾಗೂ 9254 ದೋಣಿಗಳಿದ್ದು, ಲಕ್ಷಕ್ಕೂ ಅಧಿಕ ಮೀನುಗಾರರು ಇದ್ದಾರೆ. ಇದಕ್ಕೆ ಪೂರಕವಾಗಿ ಟೆಂಪೋ, ರಿಕ್ಷಾ, ಲಾರಿ ಚಾಲಕರು, ಐಸ್‌ಪ್ಲಾಂಟ್, ಮೆಕ್ಯಾನಿಕ್, ಇಲೆಕ್ಟ್ರಿಶಿಯನ್, ಬಡಗಿಗಳು, ಫಿಶ್‌ಮಿಲ್, ಮೀನು ಸಂಸ್ಕರಣ ಘಟಕ, ಕಟ್ಟಿಂಗ್ ಶೆಡ್, ಮಹಿಳಾ ಮೀನುಗಾರರು ಸಹಿತ ಸಾವಿರಾರು ಮಂದಿ ಕಾರ್ಮಿಕ ವರ್ಗ ಮೀನುಗಾರಿಕೆ ವಲಯವನ್ನು ಪರೋಕ್ಷವಾಗಿ ಅವಲಂಬಿಸಿದೆ.

    ಅವಧಿ ಮುಗಿದರೂ ಮೀನುಗಾರಿಕೆ ಕಷ್ಟ: ಲಾಕ್‌ಡೌನ್ ಕೊನೆಗೊಂಡರೂ ಈ ವರ್ಷ ಇನ್ನೂ ಆಳ ಸಮುದ್ರ ಮೀನುಗಾರಿಕೆ ಮುಂದುವರಿಸುವ ಮನಃಸ್ಥಿತಿಯಲ್ಲಿ ಮಂಗಳೂರಿನ ಬೋಟ್ ಮಾಲೀಕರು ಇಲ್ಲ.
    ದೂರದ ಊರುಗಳಿಗೆ ಕಳುಹಿಸಲಾದ ಕಾರ್ಮಿಕರನ್ನು ಕರೆತಂದು ಉಳಿದ ಅವಧಿಯಲ್ಲಿ ಮೀನುಗಾರಿಕೆ ನಡೆಸಿದರೂ ಲಾಭ ಗಳಿಸುವ ಧೈರ್ಯ ಮಾಲೀಕರಿಗಿಲ್ಲ. ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಈಗಾಗಲೇ ಆರಂಭಗೊಂಡಿದೆ. ಜತೆಗೆ ಮುಂದಿನ ತಿಂಗಳೊಳಗೆ ಅನುಮತಿ ದೊರೆತರೆ ಸಣ್ಣ ಟ್ರಾಲ್ ಬೋಟ್ ಕಡಲಿಗಿಳಿದರೆ ಒಂದಿಷ್ಟು ಲಾಭ ಗಳಿಸಬಹುದು ಎನ್ನುವುದು ಮೀನುಗಾರ ಮುಖಂಡರ ನಿರೀಕ್ಷೆ. ಆದರೆ ಮಂಗಳೂರಿನಲ್ಲಿರುವ ಸಣ್ಣ ಟ್ರಾಲ್ಬೋಟ್‌ಗಳ ಸಂಖ್ಯೆ ಸುಮಾರು 30 ಮಾತ್ರ.

    ಯಾಂತ್ರಿಕ ಮೀನುಗಾರರ ಪರಿಸ್ಥಿತಿ ತೀರ ಸಂಕಷ್ಟಕ್ಕೆ ಸಿಲುಕಿದೆ. ಮೀನುಗಾರರ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು.
    – ಕೃಷ್ಣ ಎಸ್.ಸುವರ್ಣ, ಅಧ್ಯಕ್ಷ, ಮಲ್ಪೆ ಮೀನುಗಾರ ಸಂಘ

    ಮೀನುಗಾರಿಕಾ ಚಟುವಟಿಕೆಗೆ ಸಂಬಂಧಿಸಿದ ಎಲ್ಲ ಸಾಲಗಳಿಗೆ ಸರ್ಕಾರ ಕನಿಷ್ಠ 5-6 ತಿಂಗಳ ಬಡ್ಡಿ ಮನ್ನಾ ಮಾಡಬೇಕು. ರೈತರಿಗೆ ಪರಿಹಾರ ನೀಡುವ ರೀತಿಯಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಲೈಲ್ಯಾಂಡ್, ಪರ್ಸೀನ್, ನಾಡದೋಣಿ, ಟ್ರಾಲ್‌ಬೋಟ್‌ಗಳನ್ನು ಪರಿಗಣಿಸಿ ಪರಿಹಾರ ನೀಡಬೇಕು.
    -ಯಶಪಾಲ್ ಎ. ಸುವರ್ಣ, ಅಧ್ಯಕ್ಷ, ದಕ್ಷಿಣಕನ್ನಡ, ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್.

    ಈ ವರ್ಷದ ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣ ನಷ್ಟದಲ್ಲಿ ಕೊನೆಗೊಳ್ಳುತ್ತಿದೆ. ಬೋಟ್‌ಗಳಿಗೆ 40 ಲಕ್ಷ ರೂ. ತನಕ ಸಾಲ ಮಾಡಿರುವ ಮಾಲೀಕರು ಮಾಸಿಕ 70 ಸಾವಿರ ರೂ. ತನಕ ಸಾಲದ ಕಂತು ಪಾವತಿಸುವ ಕಷ್ಟದಲ್ಲಿದ್ದಾರೆ. ಲಾಕ್‌ಡೌನ್ ನಿರ್ಬಂಧ ತೆರವಾದರೂ ಈ ವರ್ಷ ಆಳ ಸಮುದ್ರ ಮೀನುಗಾರಿಕೆ ಮರು ಆರಂಭಿಸುವ ಕುರಿತು ಯಾವ ಮಾಲೀಕರೂ ಆಸಕ್ತರಾಗಿದ್ದಂತೆ ಕಾಣುತ್ತಿಲ್ಲ.
    -ದಿವಾಕರ ಉಳ್ಳಾಲ, ಉಪಾಧ್ಯಕ್ಷರು, ಟ್ರಾಲ್‌ಬೋಟ್ ಮೀನುಗಾರರ ಸಂಘ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts