More

    ಬಿಜೆಪಿಯಿಂದ ಮೇಲ್ಮನೆ ಘನತೆಗೆ ಕಪ್ಪು ಚುಕ್ಕೆ

    ಶಿವಮೊಗ್ಗ: ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಗೆ ಮೂಲ ಕಾರಣ ಬಿಜೆಪಿ. ಮೇಲ್ಮನೆಯನ್ನು ಅಧೋಗತಿಗೆ ತಳ್ಳಿದ ಕೀರ್ತಿ ಅವರಿಗೆ ಸಲ್ಲಬೇಕು. ಈ ಘಟನೆ ಇಡೀ ದೇಶಕ್ಕೆ ಕಪ್ಪು ಸಂದೇಶ ರವಾನೆ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಕಿಡಿಕಾರಿದರು.

    ಮೊದಲ ಹೆಂಡತಿ ಬದುಕಿರುವಂತೆಯೇ ಎರಡನೇ ಮದುವೆ ಆದ ಪರಿಸ್ಥಿತಿ ಬಿಜೆಪಿಯದ್ದಾಗಿದೆ. ಸಭಾಪತಿ ಇರುವಾಗಲೇ ಉಪ ಸಭಾಪತಿಯನ್ನು ತಂದು ಕೂರಿಸಿದ್ದು ಸರಿಯಲ್ಲ. ಅಲ್ಲದೆ ಬಾಗಿಲು ಮುಚ್ಚಿ ದುರ್ನಡತೆ ಪ್ರದರ್ಶಿಸಿರುವುದು ಅಕ್ಷ್ಯು ಎಂದು ಶುಕ್ರವಾರ ಬೇಸರ ವ್ಯಕ್ತಪಡಿಸಿದರು.

    ಘಟನೆಗೆ ಕಾನೂನು ಮಂತ್ರಿ ಮಾಧುಸ್ವಾಮಿ ಅವಕಾಶ ಕೊಡಬಾರದಿತ್ತು. ಎಂಟತ್ತು ದಿನ ವಿಳಂಬ ಆಗುತ್ತಿತ್ತು ಬಿಟ್ಟರೆ ಬೇರೇನು ಆಗುತ್ತಿರಲಿಲ್ಲ. ಆದರೂ ಬಿಜೆಪಿ ನಾಯಕರು ಘಟನೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಗಲಾಟೆಗೆ ಪ್ರಮುಖ ಕಾರಣರಾದ ಡಿಸಿಎಂ ಅಶ್ವತ್ಥನಾರಾಯಣ್ ಮತ್ತು ಸಚಿವ ಮಾಧುಸ್ವಾಮಿ ಅವರು ತಕ್ಷಣವೇ ತಮ್ಮ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಉಪಸಭಾಪತಿ ಧಮೇಗೌಡ ಅವರನ್ನು ಪೀಠದಿಂದ ಎಳೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಭಾಪತಿ ಸಭೆಗೆ ಬರುವ ಮುನ್ನವೇ ಬಾಗಿಲು ಮುಚ್ಚುತ್ತಾರೆ. ಇದೇನು ವೀರಪ್ಪನ್ ಸರ್ಕಾರನಾ? ಎಂದು ಪ್ರಶ್ನಿಸಿದರು. ಉಪಸಭಾಪತಿಗಳನ್ನು ಎಳೆದಾಡಿದ್ದು ತಪ್ಪು. ಆದರೆ ಅಪರಾಧವಲ್ಲ. ಈ ಘಟನೆಗೆ ಪ್ರಚೋದನೆ ಬಿಜೆಪಿಯಿಂದ ನಡೆದಿದೆ. ಕಾನೂನು ಬಾಹಿರವಾಗಿ ಸಭಾಪತಿ ಸ್ಥಾನದಲ್ಲಿ ಉಪಸಭಾಪತಿ ಕೂರುವುದು ಸರಿಯಲ್ಲ ಎಂದರು.

    ಸಭೆಯಲ್ಲಿ ಮೂರು ಕಾಯ್ದೆಗಳನ್ನು ಪಾಸ್ ಮಾಡಲು ಬಿಜೆಪಿ ಯೋಜಿಸಿತ್ತು. ಸಭೆಯಲ್ಲಿ ಒಂದೇ ಕಾಯ್ದೆ ಮಂಡನೆಗೆ ಅವಕಾಶ ಕೋರಬೇಕಿತ್ತು. ಆದರೆ ಎರಡು-ಮೂರು ಮಸೂದೆ ಪಾಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು.

    ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಧಾನ ಕಾರ್ಯದರ್ಶಿ ಬಾಬು, ಕಾರ್ಪೆರೇಟರ್ ಎಚ್.ಸಿ.ಯೋಗೀಶ್, ಮುಖಂಡ ಯು.ಶಿವಾನಂದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts