More

    ಶಿಕ್ಷಣ ಸಚಿವರ ತವರಲ್ಲಿ ಪ್ರಥಮ ಪಿಯು ಪ್ರಶ್ನೆ ಪತ್ರಿಕೆ ಲೀಕ್ ?

    ತುಮಕೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತವರು ಜಿಲ್ಲೆಯಲ್ಲೇ ಪ್ರಥಮ ಪಿಯು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.

    ಪರೀಕ್ಷೆಗೂ ಮುಂಚೆಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಹಿನ್ನೆಲೆಯಲ್ಲಿ ಮಂಗಳವಾರದ ಪರೀಕ್ಷೆಯನ್ನು ಮಾ.6ಕ್ಕೆ ಮುಂದೂಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೋಮವಾರ ಸಂಜೆ ಆದೇಶ ಹೊರಡಿಸಿದ್ದಾರೆ.

    ಫೆ.20ರಿಂದ ಪರೀಕ್ಷೆ ಆರಂಭವಾಗಿದ್ದು, ಮಾ.4ರವರೆಗೆ ನಡೆಯಬೇಕಿತ್ತು. ಸೋಮವಾರ ಕನ್ನಡ ವಿಷಯ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.

    19 ನೋಡಲ್ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗಿದ್ದು, ಅಲ್ಲಿಂದ ಕಾಲೇಜುಗಳಿಗೆ ತಲುಪಿಸುವ ಕೆಲಸ ಸಾಗಿತ್ತು. ಈ ಪತ್ರಿಕೆಗಳನ್ನು ಗೌಪ್ಯವಾಗಿರಿಸುವಂತೆ ಎಲ್ಲ ಕಾಲೇಜಿನ ಪ್ರಾಚಾರ್ಯರಿಗೆ ಪಿಯು ಉಪನಿರ್ದೇಶಕ ಗಂಗಾಧರ್ ಆದೇಶಿಸಿದ್ದಾರೆ.

    ಸೈಬರ್‌ಕ್ರೈಂ ಠಾಣೆಗೆ ದೂರು: ಇಂಗ್ಲಿಷ್ ಪತ್ರಿಕೆ ಸೋರಿಕೆ ಆಗಿರುವ ಮೂಲ ಎಲ್ಲಿಂದ ಎಂಬುದನ್ನು ಪತ್ತೆ ಹಚ್ಚಲು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ಅವರು ಸೈಬರ್‌ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ಸ್ಕ್ರೀನಿಂಗ್ ಕಮಿಟಿ ರಚನೆ!: ತನಿಖೆ ನಡೆಸಲು ಇಲಾಖೆ ಮಟ್ಟದಲ್ಲಿ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ. ಗುಬ್ಬಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಕೃಷ್ಣಮೂರ್ತಿ, ತ್ರಿವೇಣಿ, ನೇ.ರಂ.ನಾಗರಾಜು ಒಳಗೊಂಡ ಮೂವರ ಸದಸ್ಯರ ಸಮಿತಿ ಪರಿಶೀಲಿಸಿ ವರದಿ ನೀಡಲಿದೆ.

    ಕೊರಟಗೆರೆ ಮೂಲ?: ರಾಜ್ಯದಲ್ಲಿ ಎಲ್ಲಾದರೂ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಅಂದರೆ ಮೊದಲು ತುಮಕೂರು ಜಿಲ್ಲೆಯತ್ತ ಬೊಟ್ಟು ಮಾಡಲಾಗುತ್ತಿತ್ತು. ಈ ದಂಧೆಯ ಕಿಂಗ್‌ಪಿನ್ ಶಿವಕುಮಾರ್ ಸಾವನ್ನಪ್ಪಿದ್ದು, ಈಗ ಮತ್ತೆ ಪಿಯು ಪ್ರಥಮ ವರ್ಷದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಮಕ್ಕಳಲ್ಲಿ, ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಬಾರಿ ಪತ್ರಿಕೆ ಸೋರಿಕೆ ಮೂಲವು ಕೊರಟಗೆರೆ ಎನ್ನಲಾಗುತ್ತಿದೆ.

    ವ್ಯಾಟ್ಸ್ ಆ್ಯಪ್‌ಗಳಲ್ಲಿ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆ ಹರಿದಾಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದ ಪರೀಕ್ಷೆಯನ್ನು ಮಾ.6ಕ್ಕೆ ಮುಂದೂಡಲಾಗಿದೆ. ಉಳಿದ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ. ಅಲ್ಲದೆ, ಸೈಬರ್ ಕ್ರೈಂ ಠಾಣೆಗೂ ದೂರು ನೀಡಲಾಗಿದ್ದು ಇಲಾಖೆ ಹಂತದ ತನಿಖೆಗೂ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ.
    | ಗಂಗಾಧರ್ ಉಪನಿರ್ದೇಶಕ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts