More

    ರಾಮ ಮಂದಿರ ಟ್ರಸ್ಟ್ ಮೊದಲ ಸಭೆ: 15 ದಿನದೊಳಗೆ ಮಂದಿರ ನಿರ್ಮಾಣ ದಿನಾಂಕ ಘೋಷಣೆ

    ನವದೆಹಲಿ: ದೆಹಲಿಯ ಗ್ರೇಟರ್​ ಕೈಲಾಶ್​ನಲ್ಲಿ ನಡೆದ ರಾಮ ಮಂದಿರ ಟ್ರಸ್ಟ್​ನ ಮೊದಲ ಸಭೆಯು ಸುದೀರ್ಘ 2 ಗಂಟೆ ಅವಧಿಯ ಬಳಿಕ ಮುಕ್ತಾಯಗೊಂಡಿದ್ದು, ಹದಿನೈದು ದಿನದೊಳಗೆ ಮಂದಿರ ನಿರ್ಮಾಣ ದಿನಾಂಕವನ್ನು ಘೋಷಿಸುವುದಾಗಿ ಮೂಲಗಳು ತಿಳಿಸಿವೆ.

    ಕೇಂದ್ರ ಸರ್ಕಾರದಿಂದ ಟ್ರಸ್ಟ್​ನ ಮುಖ್ಯಸ್ಥರಾಗಿ ನೇಮಕವಾಗಿರುವ ಹಿರಿಯ ವಕೀಲ ಕೆ. ಪರಸರನ್​ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸಭೆ ನಡೆಯಿತು. ಇಂದು ನಡೆದ ಮೊದಲ ಸಭೆಯಲ್ಲಿ ಟ್ರಸ್ಟ್​ ಅಧ್ಯಕ್ಷರಾಗಿ ಮಹಂತ್​ ನೃತ್ಯ ಗೋಪಾಲ್​ ದಾಸ್​, ಸಾಮಾನ್ಯ ಕಾರ್ಯದರ್ಶಿಯಾಗಿ ಛಂಪತ್​ ರೈ, ಖಜಾಂಚಿಯಾಗಿ ಗೋವಿಂದ್​ ಗಿರಿ ಅವರನ್ನು ನೇಮಿಸಲಾಯಿತು.

    ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಪರ ಸುಪ್ರೀಂಕೋರ್ಟ್​ ತೀರ್ಪು ನೀಡಿ, ಟ್ರಸ್ಟ್​ ಒಂದನ್ನು ರಚಿಸುವಂತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಆದೇಶಿಸಿದ ಬೆನ್ನಲ್ಲೇ ಸರ್ಕಾರದ ಟ್ರಸ್ಟ್​ ರಚಿಸಿದೆ.

    ಟ್ರಸ್ಟ್​ನ ಮೊದಲ ಸಭೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭದ ದಿನಾಂಕವನ್ನು ಅಂತಿಮಗೊಳಿಸಿದ್ದು, ಮರು ಪರಿಶೀಲನೆಯ ಬಳಿಕ ಹದಿನೈದು ದಿನದೊಳಗೆ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದ, ಮಂದಿರ ನಿರ್ಮಾಣ ಸಮಿತಿಯನ್ನು ಟ್ರಸ್ಟ್​ ಸ್ಥಾಪಿಸಿದ್ದು, ನಿವೃತ್ತ ಐಎಎಸ್​ ಅಧಿಕಾರಿ ಹಾಗೂ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಸಲಹೆಗಾರ ನೃಪೇಂದ್ರ ಮಿಶ್ರಾ ಅವರು ನೇತೃತ್ವ ವಹಿಸಲಿದ್ದಾರೆ.

    ಹದಿನೈದು ದಿನಗಳ ಬಳಿಕ ಟ್ರಸ್ಟ್​ ಮತ್ತೊಮ್ಮೆ ಅಯೋಧ್ಯೆಯಲ್ಲಿ ಸಭೆ ಸೇರಲಿದ್ದು, ನಿರ್ಮಾಣ ದಿನಾಂಕವನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.

    ಸಭೆಯ ಬಳಿಕ ಮಾತನಾಡಿದ ನ್ರಿತ್ಯ ಗೋಪಾಲ್​ ದಾಸ್​, ಜನರ ಭಾವನೆಯನ್ನು ಗೌರವಿಸಲಾಗುವುದು ಮತ್ತು ಆದಷ್ಟು ಬೇಗ ಮಂದಿ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ರಾಮ ಮಂದಿರದ ಮುಖ್ಯ ಮಾದರಿ ಹಾಗೇ ಉಳಿಯಲಿದೆ. ಅಗಲ ಮತ್ತು ಎತ್ತರವನ್ನು ಹೆಚ್ಚಿಸಲು ಪ್ರಯತ್ನಗಳು ನಡೆದಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ಇದೇ ವೇಳೆ ಮಾತನಾಡಿದ ಛಂಪತ್​ ರೈ, ದೇಣಿಗೆ ನೀಡುವವರಿಗಾಗಿ ಅಯೋಧ್ಯೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾತೆಯನ್ನು ತೆರೆಯಲಾಗುವುದು ಎಂದು ತಿಳಿಸಿದರು.

    ಸಭೆಯಲ್ಲಿ ಕೇಂದ್ರ ಸರ್ಕಾರ ಪ್ರತಿನಿಧಿಗಳು, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿಗಳು ಮತ್ತು ಅಯೋಧ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅನುಜ್​ ಕುಮಾರ್​ ಝಾ ಅವರಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts