More

    ಪುಲ್ವಾಮಾ ದಾಳಿಯ ವರ್ಷದ ಬಳಿಕ ಮೊದಲ ಆರೋಪಿ ಬಂಧನ: ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

    ಪುಲ್ವಾಮಾ: ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬರ್​ಗಳಿಂದಾಗಿ 40 ಜನ ಸಿಆರ್​ಪಿಎಫ್​ ಯೋಧರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಜೈಷ್​ ಎ ಮೊಹಮ್ಮದ್​ (JeM) ಸಂಘಟನೆಯ ಉಗ್ರನೊಬ್ಬನನ್ನು ಬಂಧಿಸಿದೆ.

    ಪುಲ್ವಾಮಾ ಬಳಿಯ ಹಜಿಬಲ್​ ಪ್ರದೇಶದವನಾದ ಶಕೀರ್ ಬಶೀರ್ ಮ್ಯಾಗ್ರೆ ಎಂಬಾತನೇ ಪ್ರಕರಣದ ಮೊದಲ ಬಂಧಿತ. ಈತ ಆತ್ಮಹತ್ಯಾ ದಳದ ಅದಿಲ್​ ಅಮಹ್ಮದ್​ ದಾರ್​ನಿಗೆ ವಸತಿ ಮತ್ತು ಇನ್ನಿತರ ಸೌಲಭ್ಯ ಒದಗಿಸಿದ್ದ.

    ಪಾಕಿಸ್ತಾನದ ಉಗ್ರ ಮಹಮ್ಮದ್​ ಉಮರ್​ ಫಾರೂಕ್​ ಎಂಬಾತನಿಂದ ಅದಿಲ್​ ಮ್ಯಾಗ್ರೆಗೆ ಪರಿಚಿತನಾಗಿದ್ದ. ನಂತರ ತಾನೂ ಜೆಇಎಮ್​ನ ಕಾರ್ಯಕರ್ತನಾಗಿದ್ದ.

    ಬಹಳಷ್ಟು ಸಲ ತಾನು ಬಂದೂಕು, ಮದ್ದು ಗುಂಡು, ಹಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಿದ್ದೆ. ಅವುಗಳನ್ನು ಪುಲ್ವಾಮಾ ದಾಳಿಗೆ ಬಳಸಲಾಗಿತ್ತು ಎಂದು ಮ್ಯಾಗ್ರೆ ಆರಂಭಿಕ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.

    ಉಗ್ರರಾದ ಅದಿಲ್​ ದಾರ್​ ಮತ್ತು ಉಮರ್​ ಫಾರುಕ್​ಗೆ 2018ರಿಂದ 2019ರ ಫೆಬ್ರವರಿ ದಾಳಿ ಆಗುವವರೆಗೆ ಮ್ಯಾಗ್ರೆ ತನ್ನ ಮನೆಯಲ್ಲಿ ನೆಲೆ ನೀಡಿದ್ದ. ಜತೆಗೆ ಸ್ಫೋಟಕ ವಸ್ತುಗಳ ತಯಾರಿಕೆಗೆ ಸಹಾಯ ಮಾಡಿದ್ದ. ಫರ್ನಿಚರ್ಸ್​ ಅಂಗಡಿ ಇಟ್ಟುಕೊಂಡಿದ್ದ ಮ್ಯಾಗ್ರೆ, ಉಗ್ರ ಮೊಹಮ್ಮದ್ ಉಮರ್ ಸಲಹೆಯಂತೆ, ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಬೆಂಗಾವಲುಗಳ ಚಲನೆ ನಿಗಾ ಇಟ್ಟಿದ್ದ.

    ಅಲ್ಲದೆ ಸಿಆರ್​ಪಿಎಫ್​ ದಳದ ಚಲನೆಗಳ ಬಗ್ಗೆ ಉಗ್ರರಿಬ್ಬರಿಗೆ ಮಾಹಿತಿ ನೀಡುತ್ತಿದ್ದ. ಜತೆಗೆ ಕಾರಿಗೆ ಬಾಂಬ್​ ಅಳವಡಿಸಲು ಮಾರುತಿ ಇಕೋ ಕಾರ್​ನ್ನು ಬದಲಾಯಿಸಿದ್ದ. ಇದನ್ನು ಎನ್​ಐಎ ತಂಡ ಪತ್ತೆ ಹಚ್ಚಿದೆ.

    ಪುಲ್ವಾಮಾ ದಾಳಿಯಲ್ಲಿ ಮುದ್ದಾಸಿರ್​ ಅಹಮದ್​ ಖಾನ್​, ಪಾಕಿಸ್ತಾನದ ಉಗ್ರ ಮೊಹಮ್ಮದ್​ ಉಮರ್​ ಫಾರೂಕ್​ ಅಲ್ಲದೆ ಸ್ಫೋಟಕಗಳ ವಸ್ತುಗಳ ತಯಾರಕ ಕಮ್ರಾನ್​ ಕೂಡ ಭಾಗಿಯಾಗಿದ್ದರು. ಇವರನ್ನು 2019ರ ಮಾರ್ಚ್​ನಲ್ಲಿ ಕೊಲ್ಲಲಾಗಿತ್ತು. ಕಾರಿನ ಮಾಲೀಕ ಸಜ್ಜಾದ್​ ಅಹ್ಮದ್​ ಮತ್ತು ಖಾರಿ ಯಾಸ್ಸಿರ್​ ಎಂಬುವವರು ಕೂಡ ದಾಳಿಯಲ್ಲಿ ಭಾಗವಹಿಸಿದ್ದಾರೆ.

    ಮ್ಯಾಗ್ರೆನನ್ನು ಜಮ್ಮುವಿನಲ್ಲಿರುವ ಎನ್​ಐಎದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವನನ್ನು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ಎನ್​ಐಎ ವಶಕ್ಕೆ ನೀಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts