More

    ಕಟ್ಟುನಿಟ್ಟಿನ ನಿಯಮ ಜಾರಿ ಹಿನ್ನೆಲೆ; ಪಟಾಕಿ ಮಾರಾಟ ವ್ಯಾಪಾರ ಕಳಾಹೀನ!

    ರಾಮ ಕಿಶನ್​ ಕೆ.ವಿ.
    ಬೆಂಗಳೂರು: ದೀಪಾವಳಿ ಎಂದರೆ ಪಟಾಕಿ ಸಂಭ್ರಮ ಸಾಮಾನ್ಯ. ಆದರೆ, ಪರಿಸರ ಮಾಲಿನ್ಯದ ಜಾಗೃತಿ, ರಾಸಾಯನಿಕ ಸ್ಫೋಟಕಗಳ ಮಾರಾಟ ನಿಷೇಧ, ಅತ್ತಿಬೆಲೆಯಲ್ಲಿನ ಪಟಾಕಿ ತಯಾರಿಕಾ ಕೇಂದ್ರದಲ್ಲಿ ಈಚೆಗೆ ಸಂಭವಿಸಿದ ಸ್ಫೋಟ… ಹೀಗೆ ಬೇರೆಬೇರೆ ಕಾರಣಗಳಿಗೆ ಪಟಾಕಿ ಖರೀದಿಗೆ ಜನ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿನ ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ಕಳೆಗುಂದಿದೆ. ಆದಾಗ್ಯೂ ಬೆಂಗಳೂರು ಹೊರವಲಯದ ಹೊಸೂರಿನಲ್ಲಿ ಪಟಾಕಿ ಖರೀದಿ ಜೋರಾಗಿದೆ ಎಂಬ ಅಂಶ ‘ವಿಜಯವಾಣಿ’ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಕಂಡುಬಂದಿದೆ.

    ಜನರು ಹೆಚ್ಚು ಖರ್ಚು ಮಾಡಿ ತರಹೇವಾರಿ ಪಟಾಕಿ ಖರೀದಿಸಲು ಆಸಕ್ತಿ ತೋರುತ್ತಿಲ್ಲ. ಬದಲಾಗಿ, ಸಣ್ಣ ಗಾತ್ರದ ಅಪಾಯಕಾರಿಯಲ್ಲದ ಸಿಡಿಮದ್ದುಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಬಹುತೇಕ ಮಂದಿ ಹಣತೆ, ಗೂಡು ದೀಪಗಳನ್ನು ಬಳಸಿಕೊಂಡು ಬೆಳಕಿನ ಹಬ್ಬ ಆಚರಣೆ ಮಾಡುವುದೇ ಲೇಸು ಎಂಬ ಮನಸ್ಥಿಗೆ ಬಂದಿದ್ದಾರೆ.

    ಸುಪ್ರೀಂಕೋರ್ಟ್​ನ ಆದೇಶದನ್ವಯ ಹಸಿರು ಪಟಾಕಿ ಹೊರತುಪಡಿಸಿ, ಉಳಿದ ಸಿಡಿಮದ್ದು ಮಾರಾಟವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿದೆ. ನ.15ರ ವರೆಗೆ ರಾತ್ರಿ 8 ಗಂಟೆಯಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಸಮಯ ನಿಗದಿಪಡಿಸಿದೆ. ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ನಗರದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ನಿಧಾನವಾಗಿ ಜನಜಾಗೃತಿ ಮೂಡುತ್ತಿದೆ. ಮಲ್ಲೇಶ್ವರದ ಮಳಿಗೆಗಳಲ್ಲಿ ಜನರು ಇದು ಹಸಿರು ಪಟಾಕಿಯೋ ಅಥವಾ ಮದ್ದಿನ ಪಟಾಕಿಯೋ ಎಂದು ಖಾತರಿಯಾದ ನಂತರವೇ ಖರೀದಿ ಮಾಡುತ್ತಿದ್ದ ದೃಶ್ಯ ಕಂಡುಬಂತು.

    ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಪಟಾಕಿ ಮಾರಾಟ ಮಾಡಲು ಪೊಲೀಸ್​ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಪರವಾನಗಿ ನೀಡಿದ ಅಂಗಡಿಗಳಲ್ಲಿ ಹಸಿರು ಪಟಾಕಿಗಳು ಮಾತ್ರ ಮಾರಾಟವಾಗುತ್ತಿವೆ. ಆದರೆ, ನಗರದ ಹೊರವಲಯದ ಕೆಲವು ಅಂಗಡಿಗಳಲ್ಲಿ ಕದ್ದು ಮುಚ್ಚಿ ನಿಷೇಧಿತ ರಾಸಾಯನಿಕ ಪಟಾಕಿಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪಕ್ಕದ ತಮಿಳುನಾಡಿನಿಂದ ಸರಬರಾಜಾಗಿರುವ ಈ ಸಿಡಿಮದ್ದುಗಳನ್ನು ಖರೀದಿಸಲು ಬೆಂಗಳೂರು ಸೇರಿ ಬೇರೆಬೇರೆ ಸ್ಥಳಗಳಲ್ಲಿ ಜನ ಮುಗಿಬೀಳುತ್ತಿದ್ದಾರೆ. ನಗರದ ವ್ಯಾಪಾರಿಗಳು ವ್ಯಾಪಾರ ಕಡಿಮೆ ಎನ್ನುತ್ತಿದ್ದರೆ, ಹೊರವಲಯದ ಹೊಸೂರು, ಅತ್ತಿಬೆಲೆ, ಚಂದಾಪುರ ಭಾಗದಲ್ಲಿ ವ್ಯವಹಾರ ಜೋರಾಗಿದೆ. ಪಟಾಕಿ ಖರೀದಿಸಲು ನಗರದ ಮಂದಿ ತಂಡೋಪತಂಡವಾಗಿ ಹೊರವಲಯದಲ್ಲಿರುವ ಅಂಗಡಿಗಳತ್ತ ಕಾರು, ಬೈಕ್​ಗಳಲ್ಲಿ ತೆರಳುತ್ತಿದ್ದಾರೆ.

    ಬೆಲೆ ದುಬಾರಿ

    ಕಟ್ಟುನಿಟ್ಟಿನ ನಿಯಮ ಜಾರಿ ಹಿನ್ನೆಲೆ ದುಬಾರಿ ಬೆಲೆಯ ಪಟಾಕಿಗಳನ್ನು ಖರೀದಿಸಲು ಜನರು ಆಸಕ್ತಿ ತೋರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಹಾಕಿದ ಬಂಡವಾಳ ಬರುವುದರಲ್ಲಿ ಅನುಮಾನ ಇಲ್ಲ. ಆದರೆ, ದೊಡ್ಡ ಮೊತ್ತದ ಲಾಭ ಅನುಮಾನ ಎಂದು ಪಟಾಕಿ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

    ಪಟಾಕಿ ಬ್ಯಾನ್​ ಆಗಿಲ್ಲ

    ಸರ್ಕಾರ ಹಸಿರು ಪಟಾಕಿ ಸಿಡಿಸಲು ಅವಕಾಶ ಕೊಟ್ಟಿದೆಯೇ ಹೊರತು, ಮಾರಾಟವನ್ನು ನಿಷೇಧ ಮಾಡಿಲ್ಲ. ಆದರೆ ಕೆಲ ಜನರು ಈ ಬಾರಿ ದೀಪಾವಳಿಗೆ ಸಿಡಿಮದ್ದು ಬ್ಯಾನ್​ ಆಗಿದೆ ಎಂದು ಭಾವಿಸಿದ್ದಾರೆ. ಹೀಗಾಗಿ ಪಟಾಕಿ ಖರೀದಿಗೆ ಅಂಗಡಿಗಳತ್ತ ಧಾವಿಸುತ್ತಿಲ್ಲ. ಮಾಹಿತಿ ಕೊರತೆಯಿಂದಾಗಿ ನಮ್ಮ ವ್ಯಾಪಾರಕ್ಕೆ ಈ ಬಾರಿ ಕೊಂಚ ಹೊಡೆತ ಬಿದ್ದಿದೆ ಎಂದು ಚಿಕ್ಕಪೇಟೆಯ ವ್ಯಾಪಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ಮನೆ ಮಂದಿಯೆಲ್ಲ ಸೇರಿಕೊಂಡು ಹಬ್ಬವನ್ನು ಆಚರಿಸುತ್ತಿದ್ದೇವೆ. ಮಗಳ ಖುಷಿಗಾಗಿ ಪಟಾಕಿ ಖರೀದಿಸಿದ್ದೇವೆ.
    -ಪ್ರೀತಮ್​, ಶೇಷಾದ್ರಿಪುರ

    ದೀಪಾವಳಿ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಸೇರಿ ಪಟಾಕಿ ಸಿಡಿಸುವುದೇ ವಿಶೇಷ ಅನುಭವ. ಹೀಗಾಗಿ ಇಷ್ಟದ ಕೆಲ ಪಟಾಕಿಗಳನ್ನು ಖರೀದಿಸಿದ್ದೇನೆ. ಇವೆಲ್ಲವೂ ಹಸಿರು ಪಟಾಕಿಗಳಾಗಿವೆ.
    -ಪ್ರಥಮ್​, ಚಿಕ್ಕಪೇಟೆ

    ಮಲ್ಲೇಶ್ವರ ಮೈದಾನದಲ್ಲಿ ಪಟಾಕಿ ವ್ಯಾಪಾರ ನಡೆಯುತ್ತಿದೆ ಎಂಬ ಬಗ್ಗೆ ತುಂಬ ಜನರಿಗೆ ಮಾಹಿತಿ ಇಲ್ಲ. ಹೀಗಿದ್ದರೂ ವ್ಯವಹಾರಕ್ಕೆ ಹಿನ್ನಡೆಯಾಗಿಲ್ಲ. ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ.
    -ನಳಿನಿ, ಪಟಾಕಿ ವ್ಯಾಪಾರಿ

    ಹಸಿರು ಪಟಾಕಿ ಮಾರುಕಟ್ಟೆಗೆ ಬಂದು ನಾಲ್ಕು ವರ್ಷಗಳು ಕಳೆದಿದ್ದರೂ ಸರ್ಕಾರ ಈಗ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ನಿಷೇಧಿತ ಪಟಾಕಿಗಳನ್ನು ಮಾರುವುದು ಹಾಗೂ ಖರೀದಿಸುವು ತಪು$್ಪ. ಪರವಾನಗಿ ಹೊಂದಿದ ಅಂಗಡಿಗಳಲ್ಲಿ ಹಸಿರು ಪಟಾಕಿಗಳು ಸಿಗುತ್ತಿವೆ. ಅಲ್ಲಿಂದಲೇ ಖರೀದಿಸಿ, ಪ್ರೋತ್ಸಾಹಿಸಿ.
    -ದಿಲೀಪ್​, ಪಟಾಕಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts