More

    ವಿಜಿಕೆಕೆ ಶಿಕ್ಷಕನನ್ನು ವಜಾಗೊಳಿಸಿ

    ಯಳಂದೂರು: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಂಧನಕ್ಕೊಳಗಾಗಿರುವ ಶಿಕ್ಷಕನನ್ನು ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ(ವಿಜಿಕೆಕೆ) ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಲು ತೀರ್ಮಾನಿಸಲಾಯಿತು.


    ತಾಲೂಕಿನ ಯರಕನಗದ್ದೆಯ ಕಾಲನಿಯ ಸೋಲಿಗರ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ಗಿರಿಜನ ಅಭಿವೃದ್ಧಿ ಸಂಘದ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.


    ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ಏ.5ರಂದು ಹಿಂದಿ ಸಹ ಶಿಕ್ಷಕ ಅರುಣ್‌ಕುಮಾರ್ ಲೈಂಗಿಕ ದೌರ್ಜನ್ಯವೆಸಗಿದ್ದನೆಂದು ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಪೋಕ್ಸೋ ಕಾಯ್ದೆಯಡಿ ಏ.13ರಂದು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತ ಬಾಲಕನಿಗೆ ಬುಧವಾರ 1 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈ ಪ್ರಕರಣದ ಕುರಿತು ಜಿಲ್ಲಾ ಗಿರಿಜನ ಅಭಿವೃದ್ಧಿ ಸಂಘದ ಸದಸ್ಯರು ಚರ್ಚೆ ನಡೆಸಿದರು.


    ಶಿಕ್ಷಕ ಅರುಣ್‌ಕುಮಾರ್ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ಕೂಡಲೇ ಸಂಸ್ಥೆಯ ಕೆಲಸದಿಂದ ತೆಗೆದು ಹಾಕಬೇಕು, ಇಲ್ಲವಾದರೆ ಸಂಸ್ಥೆಯ ಮುಂಭಾಗ ಪ್ರತಿಭಟನೆ ನಡೆಸಬೇಕು. ವಿದ್ಯಾರ್ಥಿಗಳನ್ನು ಈ ರೀತಿಯ ಕೆಟ್ಟ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿರುವ ಶಿಕ್ಷಕನ ವಿರುದ್ಧ ಕಠಿಣ ಕ್ರಮವಾಗಬೇಕು ಎಂದರು.


    ಈ ಹಿಂದೆಯೂ ಶಿಕ್ಷಕನ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಆದರೆ ಸ್ಥಳೀಯ ಹಂತದಲ್ಲಿ ಇದನ್ನು ಮುಚ್ಚುವ ಮೂಲಕ ಪ್ರಕರಣ ಬಯಲಿಗೆ ಬರಲಿಲ್ಲ. ಮಾತುಕತೆಯ ಮೂಲಕ ಸಂಧಾನ ಮಾಡಲಾಗಿತ್ತು. ಆದರೆ ಶಿಕ್ಷಕ ಅರುಣ್‌ಕುಮಾರ್ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ ಪರಿಣಾಮ ಬಾಲಕನೇ ನೇರವಾಗಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾನೆ. ಸೋಲಿಗ ಸಮುದಾಯದ ಹೆಣ್ಣು ಮತ್ತು ಗಂಡು ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯ ಬಗ್ಗೆ ಹೆಚ್ಚಿನ ಸುರಕ್ಷಿತ ಕ್ರಮಗಳನ್ನು ವಹಿಸಬೇಕು ಎಂದು ಆಗ್ರಹಿಸಿದರು.


    ಬಳಿಕ ಸಂಘದ ಸದಸ್ಯರು ವಿಜಿಕೆಕೆ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಶಾಲೆಯಲ್ಲಿ ಇದ್ದ ಸಿಬ್ಬಂದಿಯೊಂದಿಗೆ ಮಾತನಾಡಿ, ಸಂಸ್ಥೆಯ ಮುಖ್ಯಸ್ಥರಿಗೆ ಶಿಕ್ಷಕನ್ನು ವಜಾಗೊಳಿಸಬೇಕೆಂದು ತಿಳಿಸಲಾಯಿತು.


    ಸಂಘದ ಅಧ್ಯಕ್ಷ ಎಂ.ಜಡೇಸ್ವಾಮಿ, ಕಾರ್ಯದರ್ಶಿ ಸಿ.ಮಾದೇಗೌಡ, ಜಿಲ್ಲಾ ಸಂಘದ ಅಧ್ಯಕ್ಷ ರಂಗೇಗೌಡ, ಮುಖಂಡರಾದ ಮಹದೇವಯ್ಯ, ಕಾರನ ಕೇತೇಗೌಡ, ಕೇತಮ್ಮ, ಸಣ್ಣತಾಯಮ್ಮ, ಪುಟ್ಟಮ್ಮ, ಶಿವಣ್ಣ ರಾಜಪ್ಪ, ಕಮಲಾ, ಮಾದೇಶ್, ಸಣ್ಣರಂಗೇಗೌಡ, ಬಸವರಾಜು, ರಂಗೇಗೌಡ, ದಾಸೇಗೌಡ, ನಂಜೇಗೌಡ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts