More

    ಅಗ್ನಿ ಅವಘಡ, ಹೊತ್ತಿ ಉರಿದ ಟೈರ್ ಗೋದಾಮು

    ಬೆಂಗಳೂರು: ಟೈರ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಗೋದಾಮಿನಲ್ಲಿದ್ದ ಟೈಯರ್‌ಗಳು ಹೊತ್ತಿ ಉರಿದು ಲಕ್ಷಾಂತರ ರೂ. ನಷ್ಟವಾಗಿದೆ. ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
    ಚಾಮರಾಜಪೇಟೆಯ ಟಿ.ಆರ್.ಮಿಲ್ ಒಳಗಡೆ ಇರುವ ಟೈರ್ ಗೋದಾಮಿನಲ್ಲಿ ಬೆಳಗ್ಗಿನ ಜಾವ ೪ ಗಂಟೆಗೆ ಕಾಣಿಸಿಕೊಂಡ ಬೆಂಕಿ ಪಕ್ಕದ ಫೈಪ್ ಮತ್ತು ಫ್ಲೈವುಡ್ ಗೋದಾಮಿಗೂ ವ್ಯಾಪಿಸಿದ ಪರಿಣಾಮ ಭಾರಿ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿದ್ದು, ಗೋದಾಮಿನಲ್ಲಿರುವ ವಸ್ತುಗಳು ಸಿಡಿಯಲಾರಂಭಿಸಿವೆ. ಭಾರಿ ಶಬ್ಧದಿಂದಾಗಿ ತಕ್ಷಣ ಅಕ್ಕಪಕ್ಕದ ಮನೆಯ ನಿವಾಸಿಗಳು ಎದ್ದುಬಂದು ನೋಡಿದಾಗ ಬೆಂಕಿ ವ್ಯಾಪಿಸಿರುವುದು ತಿಳಿದಿದೆ. ತಕ್ಷಣ ಸ್ಥಳಕ್ಕೆ ಬಂದ ಗಸ್ತು ಪೊಲೀಸರು, ಅಕ್ಕ ಪಕ್ಕ ಮನೆಯವರು ಎಲ್ಲರೂ ಹೊರಗಡೆ ಬರುವಂತೆ ಅನೌನ್ಸ್ ಮಾಡಿದ್ದಾರೆ. ಹೊರಗಡೆ ಬಂದವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
    ಸತತ ೭ ಗಂಟೆಗಳ ಕಾರ್ಯಾಚರಣೆ:
    ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ೮ ವಾಹನಗಳೊಂದಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಸತತ ೭ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ಯಾಂಕರ್‌ಗಳ ನೀರನ್ನು ತರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಮೇಲ್ನೋಟಕ್ಕೆ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಈ ವೇಳೆ ಕಟ್ಟಡದಲ್ಲಿ ಯಾರು ಇರದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
    ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗೋದಾಮಿನ ಮಾಲೀಕ ರಾಜೇಶ್ ಅಗರ್ವಾಲ್ ಎಂದು ತಿಳಿದು ಬಂದಿದೆ. ಈ ಸಂಬಂಧ ಯಾರೊಬ್ಬರು ದೂರು ನೀಡಿಲ್ಲ. ಮಾಲೀಕರ ವಿಚಾರಣೆಯ ನಂತರ ಎಷ್ಟು ನಷ್ಟ ಉಂಟಾಗಿದೆ ಎಂದು ತಿಳಿದು ಬರಲಿದೆ. ಮಾಲೀಕರು ಗೋದಾಮಿಗೆ ವಿಮೆ ಮಾಡಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಆತಂಕದ ವಾತಾವರಣ:
    ಟೈರ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದಂತೆ ಅಕ್ಕ ಪಕ್ಕ ಪಕ್ಕದ ಗೋದಾಮುಗಳಿಗೂ ವ್ಯಾಪ್ತಿಸಿತ್ತು. ಗೋದಾಮಿನಲ್ಲಿರುವ ವಸ್ತುಗಳು ಸಿಡಿಯಲಾರಂಭಿಸಿದ್ದರಿಂದ ಸ್ಥಳೀಯರು ಬೆಚ್ಚಿ ಬಿದ್ದರು. ದಟ್ಟವಾದ ಹೊಗೆ ಆವರಿಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಅಗ್ನಿ ಅವಘಡ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts