More

    1.70 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

    ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ತಡೆಗಟ್ಟಲು ಪ್ರಧಾನಮಂತ್ರಿಯವರು ಘೋಷಿಸಿರುವ ಲಾಕ್​ಡೌನ್​ ಶುರುವಾಗಿ 36 ಗಂಟೆಗಳಾಗಿವೆ. ಬಡವರು, ವಲಸಿಗರು, ಮಹಿಳೆಯರು ಮತ್ತು ಇತರೆ ಶ್ರಮಿಕ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಅದೇ ರೀತಿ ಈ ಸೋಂಕು ನಿವಾರಣೆಗಾಗಿ ಹೋರಾಡುತ್ತಿರುವ ಕರೊನಾ ವಾರಿಯರ್ಸ್ ಅವರನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಿಸಿದೆ.

    ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರೋನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿರುವ ಡಾಕ್ಟರ್ಸ್​, ಆಶಾ ಕಾರ್ಯಕರ್ತೆಯರು, ನರ್ಸ್​ಗಳು ಎಲ್ಲರಿಗೂ ಪ್ರತಿಯೊಬ್ಬರಿಗೂ ತಲಾ 50 ಲಕ್ಷರೂಪಾಯಿ ಮೌಲ್ಯದ ಮೆಡಿಕಲ್ ಇನ್ಶೂರೆನ್ಸ್ ಒದಗಿಸುತ್ತಿದ್ದೇವೆ ಎಂದು ಹೇಳಿದರು.

    ಬಡವರಿಗೆ ಗರೀಬ್​ ಕಲ್ಯಾಣ್ ಅನ್ನ ಯೋಜನೆ ಘೋಷಿಸಿದ ಅವರು, 80 ಕೋಟಿ ಬಡವರು ಇದರ ಫಲಾನುಭವಿಗಳು. ಇದರಂತೆ, ಮುಂದಿನ ಮೂರು ತಿಂಗಳು ಕಾಲ ಪ್ರತಿಯೊಬ್ಬರಿಗೂ 5 ಕಿಲೋ ಅಕ್ಕಿ ಅಥವಾ 5 ಕಿಲೋ ಗೋಧಿ, ಜತೆಗೆ ಒಂದು ಕಿಲೋ ಧಾನ್ಯ ಕೂಡ ಸಿಗಲಿದೆ ಎಂದು ಹೇಳಿದರು.

    ನೇರ ನಗದು ವರ್ಗಾವಣೆ ಯೋಜನೆ ಮೂಲಕ 8.69 ಕೋಟಿ ರೈತರಿಗೆ ಏಪ್ರಿಲ್​ ಮೊದಲ ವಾರದಲ್ಲಿ 2,000 ರೂಪಾಯಿಯ ಕಂತು ಪಾವತಿಯಾಗಲಿದೆ. ಅದೇ ರೀತಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಪ್ರಕಾರ 5 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗುವಂತೆ ಪ್ರತಿ ಕೆಲಸಗಾರನಿಗೆ ಹೆಚ್ಚುವರಿಯಾಗಿ 2,000 ರೂಪಾಯಿ ನೀಡಲಾಗುತ್ತದೆ ಎಂದು ಸಚಿವರು ಘೋಷಿಸಿದರು.

    ವಯಸ್ಸಾದವರು, ಅಂಗವಿಕಲರು, ಪಿಂಚಣಿದಾರರು ಸೇರಿ 3 ಕೋಟಿ ಜನರಿಗೆ ಹೆಚ್ಚುವರಿಯಾಗಿ ಏಕ ಕಂತಿನ ಹಣಕಾಸಿನ ನೆರವಿನ ರೂಪದಲ್ಲಿ 1,000 ರೂಪಾಯಿಯನ್ನು ಎರಡು ಕಂತುಗಳಲ್ಲಿ ನೇರ ನಗದು ಯೋಜನೆ ಮೂಲಕ ಪಾವತಿಸಲಾಗುತ್ತದೆ. ಇದು ಮೂರು ತಿಂಗಳ ಅವಧಿಯಲ್ಲಿ ಆಗಲಿದೆ. ಇದೇ ರೀತಿ ಜನಧನ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ತಲಾ 500 ರೂಪಾಯಿ ಪಾವತಿಯಾಗಲಿದೆ ಎಂದು ಹೇಳಿದರು.

    ಉಜ್ವಲ ಸ್ಕೀಮ್ ಮೂಲಕ 8.3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಮೂರು ತಿಂಗಳ ಮಟ್ಟಿಗೆ ಉಚಿತ ಸಿಲಿಂಡರ್​ಗಳನ್ನು ಒದಗಿಸಲಾಗುತ್ತದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಅಂದಾಜು 7 ಕೋಟಿ ಕುಟುಂಬಗಳಿಗೆ ನೆರವಾಗುವಂತೆ 20 ಲಕ್ಷ ರೂಪಾಯಿ ತನಕ ಕೊಲಾಟರಲ್ ಸಾಲವನ್ನು ಒದಗಿಸಲಾಗುತ್ತದೆ ಎಂದು ಹೇಳಿದ ಸಚಿವರು, ಡಿಬಿಟಿ ನಗದು ವರ್ಗಾವಣೆಯ ಪ್ರಕಾರ ಕೃಷಿಕರು, ನರೇಗಾ, ಬಡ ವಿಧವೆಯರು, ಪಿಂಚಣಿದಾರರು, ಅಂಗವಿಕಲರಿಗೆ ನೆರವು ತಲುಪಲಿದೆ. ಇದೇ ರೀತಿ, ಜನ ಧನ ಖಾತೆಗೆ ಉಜ್ವಲ ಯೋಜನೆ, ಮಹಿಳಾ ಸ್ವಸಹಾಯ ಸಂಘದ ಡಿಡಿಯು ಲೈವ್ಲಿಹುಡ್ ಮಿಷನ್ಸ್​, ಇಪಿಎಫ್​​ಒ ಅಧೀನದ ಉದ್ಯೋಗಿಗಳಿಗೆ ಸಿಗಲಿದೆ. ನಿರ್ಮಾಣ ಕಾಮಗಾರಿ ಕೆಲಸದವರು ಮತ್ತು ಜಿಲ್ಲಾ ಮಿನರಲ್ ಕೆಲಸದವರಿಗೂ ನೆರವು ಸಿಗಲಿದೆ ಎಂದರು.

    ಉದ್ಯೋಗದಾತರು ಮತ್ತು ಉದ್ಯೋಗಿಗಳು ಪಾವತಿಸುವ ಇಪಿಎಫ್​ ಅನ್ನು ಮೂರು ತಿಂಗಳ ಮಟ್ಟಿಗೆ ಭಾರತ ಸರ್ಕಾರವೇ ಭರಿಸಲಿದೆ. ಇಬ್ಬರ ಪಾಲು ಸೇರಿದರೆ ಶೇಕಡ 24 ಆಗುತ್ತಿದ್ದು, ಮುಂದಿನ ಮೂರು ತಿಂಗಳು ಈ ಪಾಲನ್ನು ಸರ್ಕಾರವೇ ತುಂಬಲಿದೆ. ಆದರೆ ಇದು ಗರಿಷ್ಠ 100 ಉದ್ಯೋಗಿಗಳು ಇರುವ ಕಂಪನಿ ಅದರಲ್ಲೂ ಶೇಕಡ 90 ಉದ್ಯೋಗಿಗಳು ಮಾಸಿಕ 15,000 ರೂಪಾಯಿಗಿಂತ ಕಡಿಮೆ ವೇತನ ಪಡೆಯುವಂಥವರಿದ್ದರೆ ಮಾತ್ರ ಅನ್ವಯ ಎಂದು ಅವರು ಸ್ಪಷ್ಟಪಡಿಸಿದರು.

    ಜಿಲ್ಲಾ ಮಿನೆರಲ್ ಫಂಡ್​ ಅನ್ನು ಮೆಡಿಕಲ್ ಟೆಸ್ಟಿಂಗ್​ ಮತ್ತು ಸ್ಕ್ರೀನಿಂಗ್ ಹಾಗೂ ಆರೋಗ್ಯ ಸೇವೆ ನಿಗಾಕ್ಕೆ ಬಳಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಲಭ್ಯವಿರುವ 31,000 ಕೋಟಿ ರೂಪಾಯಿ ಫಂಡ್​ನಿಂದ ನಿರ್ಮಾಣ ಕಾಮಗಾರಿ ಕಾರ್ಮಿಕರ ಕಲ್ಯಾಣ, ನೋಂದಾಯಿತ 3.5 ಕೋಟಿ ಕಾರ್ಮಿಕರಿಗೆ ಪ್ರಯೋಜನವಾಗುವಂತ ಕೆಲಸವನ್ನು ರಾಜ್ಯ ಸರ್ಕಾರಗಳು ಮಾಡಬೇಕು. ಇಪಿಎಫ್​ ನಿಯಮ ತಿದ್ದುಪಡಿಗೆ ಸರ್ಕಾರ ಸಿದ್ಧವಿದ್ದು, ಉದ್ಯೋಗಿಗಳು ತಮ್ಮ ಪಿಎಫ್​ನಲ್ಲಿ ಶೇಕಡ 75 ಅಥವಾ ಮೂರು ತಿಂಗಳ ಹಣ ಯಾವುದು ಕನಿಷ್ಠವೋ ಅದನ್ನು ಹಿಂಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts