More

    ಎಸಿಪಿ ಕಚೇರಿಯಾಗಲಿದೆ ಸರ್ಕೀಟ್ ಹೌಸ್!

    ಮಂಗಳೂರು: ಕದ್ರಿ ಹಿಲ್ಸ್‌ನಲ್ಲಿರುವ ಸರ್ಕೀಟ್ ಹೌಸ್ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಕಚೇರಿಯಾಗಿ ಮಾರ್ಪಾಡಾಗುತ್ತಿದೆ. ಆದರೆ ಇದು ಶಾಶ್ವತ ಬದಲಾವಣೆ ಅಲ್ಲ. ಮೂರು ದಿನ ಮಾತ್ರ. ಕೇವಲ ಸಿನಿಮಾ ಶೂಟಿಂಗ್‌ಗಾಗಿ..!

    ಇದೇ ಪ್ರಥಮ ಬಾರಿಗೆ ಮಲಯಾಳಂ ಚಿತ್ರ ನಿರ್ದೇಶಕರೊಬ್ಬರು ತಮ್ಮ ಚಿತ್ರದ ಕೆಲವು ದೃಶ್ಯಗಳನ್ನು ಮಂಗಳೂರಿನ ಸರ್ಕೀಟ್ ಹೌಸ್‌ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರುವ ಚಿತ್ರ ತಂಡ ಈಗ ಸರ್ಕೀಟ್ ಹೌಸ್‌ನ ಕಾನ್ಫರೆನ್ಸ್ ಹಾಲ್ ಮತ್ತು ಹೊರಗಿನ ವರಾಂಡದಲ್ಲಿ ಸೆಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.

    ಜನಗಣಮನ ಸಿನಿಮಾ: ಮಲಯಾಳಂನ ಬಹು ನಿರೀಕ್ಷಿತ ‘ಜನಗಣಮನ‘ ಸಿನಿಮಾದ ಶೂಟಿಂಗ್‌ಗಾಗಿ ಸರ್ಕೀಟ್ ಹೌಸ್‌ನಲ್ಲಿ ಸಿದ್ದತೆ ನಡೆದಿದೆ. ಪೃಥ್ವಿರಾಜ್ ಸುಕುಮಾರನ್, ಸೂರಜ್ ವೆಂಜರಮೂಡು, ಸಿದ್ಧಿಕ್ ಮುಖ್ಯಪಾತ್ರದಲ್ಲಿರುವ ಈ ಚಿತ್ರವನ್ನು ಡಿಜೋ ಜೋಸ್ ಅ್ಯಂಟನಿ ನಿರ್ದೇಶಿಸಿದ್ದಾರೆ. ಈ ಸಿನಿಮಾಕ್ಕಾಗಿ ಸರ್ಕಿಟ್ ಹೌಸ್‌ನ ಒಂದು ಹಾಲ್ ಎಸಿಪಿ ಕಚೇರಿಯಾಗಿ ಬದಲಾಗುತ್ತಿದೆ. ಹಾಲ್‌ನ ಹೊರ ಆವರಣದ ವರಾಂಡದ ಒಂದು ಬದಿಯಲ್ಲಿ ದೊಡ್ಡ ಕಿಟಕಿ ಇದ್ದು, ಚಿತ್ರದ ಕಲಾ ತಂಡ ಇನ್ನೊಂದು ಬದಿಯಲ್ಲಿ ಅದೇ ಮಾದರಿಯ ಕೃತಕ ಕಿಟಕಿ ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.

    ಮೊದಲ ಬಾರಿಗೆ ಶೂಟಿಂಗ್: ದ.ಕ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಉಳ್ಳಾಲ ಶ್ರೀನಿವಾಸ ರಾಯರ ದೂರದರ್ಶಿತ್ವದಿಂದ ಮಂಗಳೂರಿನಲ್ಲಿ ಸರ್ಕೀಟ್ ಹೌಸ್‌ನ ನಿರ್ಮಾಣವಾಗಿತ್ತು. ಮಂಗಳೂರು ಪುರಭವನ, ಕೂಳೂರು ಸೇತುವೆ, ಕೆಆರ್‌ಇಸಿ ಕಟ್ಟಡ ನಿರ್ಮಿಸಿ ಖ್ಯಾತಿ ಪಡೆದಿದ್ದ ಗ್ಯಾನನ್ ಡಂಕೆರ್ಲಿ ಇಂಡಿಯಾ ಕೊ.ಮದ್ರಾಸ್ ಎಂಬ ಸಂಸ್ಥೆಗೆ ಕಾಮಗಾರಿ ವಹಿಸಲಾಗಿತ್ತು. 1966ರಲ್ಲಿ ಉದ್ಘಾಟನೆಗೊಂಡ ಸರ್ಕೀಟ್ ಹೌಸ್ ಈಗ ಲೋಕೋಪಯೋಗಿ ಇಲಾಖೆ ಸ್ವಾಮ್ಯದಲ್ಲಿದೆ. ಮಂಗಳೂರಿನ ಬೀಚ್‌ಗಳು, ವಿ.ವಿ.ಕಾಲೇಜು(ಸರ್ಕಾರಿ ಕಾಲೇಜು), ಉಳ್ಳಾಲ ಸೇತುವೆ ಮುಂತಾದೆಡೆ ಕನ್ನಡ ಹಾಗೂ ಪರಭಾಷಾ ಚಿತ್ರಗಳ ಶೂಟಿಂಗ್ ನಡೆದಿದೆ. ಮಲಯಾಳಂ ಚಿತ್ರವೊಂದು ಸರ್ಕೀಟ್ ಹೌಸ್‌ನಲ್ಲಿ ಚಿತ್ರೀಕರಣ ಆಗುತ್ತಿರುವುದು ಇದೇ ಪ್ರಥಮ.

    ಲೋಕೋಪಯೋಗಿ ಇಲಾಖೆ ಬಂಗ್ಲೆಗಳನ್ನು ಸಿನಿಮಾ ಶೂಟಿಂಗ್‌ಗೆ ನೀಡಲು ಅವಕಾಶವಿದೆ. ಮೈಸೂರಿನಲ್ಲಿ ಈಗಾಗಲೇ ನೀಡಲಾಗಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಸರ್ಕೀಟ್ ಹೌಸ್ ನೀಡಲಾಗಿದೆ. ಇದಕ್ಕಾಗಿ ಚಿತ್ರತಂಡ ಇಲಾಖೆಗೆ ನಿಗದಿಪಡಿಸಿದ ಠೇವಣಿ ಮೊತ್ತ ಪಾವತಿಸಬೇಕು. ಪ್ರತಿದಿನ ನಿಗದಿ ಪಡಿಸಿದ ಬಾಡಿಗೆ ನೀಡಬೇಕು. ಈ ಮಧ್ಯೆ ಯಾರಾದರೂ ವಿವಿಐಪಿಗಳ ಪ್ರವಾಸ ನಿಗದಿಯಾದರೆ ತಕ್ಷಣ ತೆರವುಗೊಳಿಸಬೇಕೆಂಬ ಷರತ್ತು ಕೂಡಾ ವಿಧಿಸಲಾಗಿದೆ.
    ಯಶವಂತ್, ಕಾರ್ಯನಿರ್ವಾಹಕ ಅಭಿಯಂತರ, ಪಿಡಬ್ಲುೃಡಿ ಮಂಗಳೂರು

    ‘ಜನಗಣಮನ’ ಚಿತ್ರದ ನಿರ್ದೇಶಕರು ಈ ಹಿಂದೆ ಮಂಗಳೂರಿಗೆ ಬಂದ ಸಂದರ್ಭ ಸರ್ಕೀಟ್ ಹೌಸ್ ವೀಕ್ಷಿಸಿ ಇಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲು ನಿರ್ಧರಿಸಿದ್ದರು. ಸರ್ಕೀಟ್‌ನ ಹೌಸ್‌ನ ಹಾಲ್ ಪೊಲೀಸ್ ಅಧಿಕಾರಿ ಕಚೇರಿಯಾಗಿ ಮಾರ್ಪಾಡು ಮಾಡುತ್ತಿದ್ದೇವೆ. ಒಂದು ವಾರದಿಂದ ಕೆಲಸ ನಡೆಯುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಪೂರ್ಣವಾಗಲಿದೆ. ಮಾ.16ರಿಂದ ಶೂಟಿಂಗ್ ಶುರುವಾಗಲಿದೆ.
    ಸಜಿ ಜೋಸೆಫ್, ಸಿನಿಮಾದ ಕಲಾ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts