More

    ಫಿಲಂ ಸಿಟಿ ಅಲ್ಲಿ ಅಥವಾ ಇಲ್ಲಿ ಬೇಕು ಎನ್ನುವುದನ್ನು ಬಿಟ್ಟು ಮೊದಲು ಸೂಕ್ತ ಸ್ಥಳದಲ್ಲಿ ಕಾಮಗಾರಿ ಆರಂಭಿಸಿ

    ಬೆಂಗಳೂರು: ಫಿಲಂ ಸಿಟಿ ನಿರ್ಮಾಣಕ್ಕೆ ಸರ್ಕಾರ ಬಜೆಟ್​ನಲ್ಲಿ 500 ಕೋಟಿ ರೂಪಾಯಿ ಹಣ ಘೋಷಿಸಿದೆ. ಈಗ ಚಿತ್ರ ನಗರವನ್ನು ಅಲ್ಲಿ ಅಥವಾ ಇಲ್ಲಿ ಮಾಡಬೇಕು ಎನ್ನುವುದನ್ನು ಬಿಟ್ಟು ಶೀಘ್ರವೇ ಚಿತ್ರ ನಗರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹಿರಿಯ ನಟ ವಿ.ರವಿಚಂದ್ರನ್​ ಹೇಳಿದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    ವಾಣಿಜ್ಯ ಮಂಡಳಿಯ ಲೋಗೋ ಬಿಡುಗಡೆ ಮಾಡುವುದು ದೊಡ್ಡದಲ್ಲ. ಚಿತ್ರ ನಗರ ನಿರ್ಮಾಣಕ್ಕೆ ಸರ್ಕಾರ ಕೊಟ್ಟಿರುವ ಹಣವನ್ನು ಬಿಡುಗಡೆ ಮಾಡಿಸಿಕೊಂಡು ಕಾಮಗಾರಿ ಆರಂಭಿಸಬೇಕು. ಇದು ಮುಖ್ಯ. ವಾಣಿಜ್ಯ ಮಂಡಳಿ ಅಂದಾಗ ನನಗೆ ಹಳೆ ಸ್ನೇಹಿತರು ಹಾಗೂ ನನ್ನ ಅಪ್ಪ ನೆನಪಾಗುತ್ತಾರೆ. ನಾನು ನಿಂತಿರುವ ಸ್ಥಳ ನಮ್ಮ ಅಪ್ಪನದು ಅವರು ಕೊಟ್ಟ ಜಾಗ ಎಂದು ಭಾವುಕರಾದರು.

    ನಟ ಜಗ್ಗೇಶ್​ ಮಾತನಾಡಿ, 1944ರಲ್ಲಿ ಇದು ಮೈಸೂರು ಚಲನಚಿತ್ರ ವಾಣಿಜ್ಯ ಮಂಡಳಿಯಾಗಿತ್ತು. ಹಿರಿಯ ನಟರಾದ ವಿಷ್ಣುವರ್ಧನ್​, ಅಂಬರೀಷ್​ ಸೇರಿದಂತೆ ಹಲವು ನಟರ ಪರಿಕಲ್ಪನೆಯಲ್ಲಿ ವಾಣಿಜ್ಯ ಮಂಡಳಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಕೊಟ್ಟಿದೆ. ಸರ್ಕಾರ ಫಿಲಂ ಸಿಟಿಗೆ ಹಣ ಘೋಷಣೆ ಮಾಡಿರುವುದು ಕೇವಲ ಒಬ್ಬರಿಂದ ಅಲ್ಲ. ಎಲ್ಲ ಹಿರಿಯ ನಟರ ಶ್ರಮ ಇದರ ಹಿಂದೆ ಇದೆ. ಹೀಗಾಗಿ ಒಬ್ಬರಿಂದ ಹಣ ಬಿಡುಗಡೆಯಾಯಿತು ಎನ್ನುವ ಸಂದೇಶ ರವಾನೆಯಾಗುವುದು ಬೇಡ ಎಂದರು.

    ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅತಿಥಿಗಳ ಆಹ್ವಾನಿಸುವುದಕ್ಕೆ ಮೊದಲು ವಾಣಿಜ್ಯ ಮಂಡಳಿಯಲ್ಲಿ ಹಿರಿಯ ನಟರ ಸಭೆ ಕರೆದು ಚರ್ಚೆ ನಡೆಸಬೇಕಾಗಿತ್ತು. ರವಿಚಂದ್ರನ್​, ಶಿವರಾಜ್​ ಕುಮಾರ್​ ಸೇರಿದಂತೆ ಹಲವು ಹಿರಿಯರು ನಮ್ಮ ನಡುವೆ ಇದ್ದಾರೆ. ಇದನ್ನು ಬಿಟ್ಟು ಅವರಿಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನಟ ಜಗ್ಗೇಶ್​ ಆಕ್ಷೇಪ ವ್ಯಕ್ತಪಡಿಸಿದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಲಾಂಛನ ಬಿಡುಗಡೆ ಮಾಡಿದರು. ಮಾಜಿ ಸಚಿವೆ ಹಾಗೂ ಹಿರಿಯ ನಟಿ ಜಯಮಾಲ, ನಟ ಉಪೇಂದ್ರ, ಕುಮಾರ್​ ಬಂಗಾರಪ್ಪ, ಸಾ.ರಾ.ಗೋವಿಂದು ಹಾಗೂ ಇತರರು ಇದ್ದರು. (ದಿಗ್ವಿಜಯ ನ್ಯೂಸ್​)

    ಫಿಲಂ ಸಿಟಿಯ ಕೆಲಸಗಳು ಬೇಗ ಆರಂಭವಾಗಲಿ: ಚೇಂಬರ್​ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts