More

    ಕಡತ ವಿಲೇವಾರಿಗೆ ಹಿಡಿದ ಗ್ರಹಣ: ಹಂತ ಕಡಿತಕ್ಕೆ ಮೀನಮೇಷ, ಸುತ್ತಾಟ ಯಥಾಸ್ಥಿತಿ; ಯೋಜನೆಗಳ ಅನುಷ್ಠಾನಕ್ಕೆ ತೊಡಕು..

    | ಮೃತ್ಯುಂಜಯ ಕಪಗಲ್ ಬೆಂಗಳೂರು

    ಆಡಳಿತ ಸುಧಾರಣಾ ಆಯೋಗ-2ರ ವರದಿಯ ಶಿಫಾರಸುಗಳ ಅನುಷ್ಠಾನ ಹಾಗೂ ಆಡಳಿತಕ್ಕೆ ಚುರುಕು, ಅಭಿವೃದ್ಧಿ ವೇಗ ಹೆಚ್ಚಿಸುವ ಉದ್ದೇಶಿತ ಕಡತ ವಿಲೇವಾರಿ ಹಂತ ಕಡಿತಕ್ಕೆ ಗ್ರಹಣ ಹಿಡಿದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಅಪರ ಮುಖ್ಯ, ಪ್ರಧಾನ ಕಾರ್ಯದರ್ಶಿ ಹಂತದ ಅಧಿಕಾರಿಗಳ ಸಭೆ ಎರಡು ಬಾರಿ ನಡೆಸಿ ಸೂಚಿಸಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸಲಾಗಿಲ್ಲ. ಕ್ಷೇತ್ರ ಇಲಾಖೆಗಳು, ಸಚಿವಾಲಯದಲ್ಲಿ ಸಿಬ್ಬಂದಿ ಕೊರತೆ, ಹಿರಿಯ-ಕಿರಿಯ ಅಧಿಕಾರಿಗಳ ಮಧ್ಯೆ ಸಮನ್ವಯದ ವ್ಯತ್ಯಾಸ, ನಿವೃತ್ತರ ಸೇವೆ ಮುಂದುವರಿಕೆ ಮತ್ತು ಹೊರ ಗುತ್ತಿಗೆ ನೇಮಕ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಪರಿಣಾಮಬೀರಿದೆ.

    ಸುತ್ತಾಟ ಯಥಾಸ್ಥಿತಿ: ಡಿಜಿಟಲ್ ಯುಗವು ಸರ್ಕಾರಿ ಕಚೇರಿಗಳ ಕೆಲಸಗಳಿಗೆ ಹೊಸ ಆಯಾಮ ನೀಡಲಿದೆ. ಪ್ರಸ್ತಾವಿತ ಕಡತಗಳ ಮೇಲೆ ಪರಿಶೀಲಿಸಿ, ರ್ಚಚಿಸಿ ಎಂದು ಷರಾ ಬರೆಯುವುದು ಕಡಿಮೆಯಾಗಲಿದೆ ಎಂಬ ಅಂದಾಜು ಸದ್ಯಕ್ಕೆ ತಲೆಕೆಳಗಾಗಿದೆ. ಆದರೆ, ಇ-ಆಫೀಸ್ ಪದ್ಧತಿ ಜಾರಿಗೆ ಮುನ್ನ ಕಾರ್ಯಪಾಲನೆಗೆ ನಿರ್ದಿಷ್ಟ ಮಾರ್ಗಸೂಚಿ ನೀಡಿಲ್ಲ. ಈ ಕಾರಣ ವಿಚಾರಣೆಗೆ ಸಂಬಂಧಿಸಿ ಕಡತ ನಿರ್ವಹಣೆ ಮಾನವ ಚಾಲಿತ, ಇನ್ನುಳಿದ ಕೆಲಸಗಳಿಗೆ ಇ-ಆಫೀಸ್ ಎನ್ನುವಂತಾಗಿದ್ದು, ಪ್ರಸ್ತಾವಿತ ವಿಷಯ ಚರ್ಚೆ ಮತ್ತೊಂದು ಸವಾಲಾಗಿದೆ. ಇದರಿಂದಾಗಿ ಬಿಬಿಎಂಪಿ, ಸಚಿವಾಲಯ ಸೇರಿ ಎಲ್ಲ ಇಲಾಖೆಗಳಲ್ಲಿ ಕಡತಗಳ ಸುತ್ತಾಟ ಯತಾಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತಿದೆ.

    ಹಂತ ಕಡಿತಕ್ಕೆ ಮೀನಮೇಷ: ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ-2ರ ವರದಿಯಂತೆ ಕಡತ ವಿಲೇವಾರಿ ಹಂತ 10ರಿಂದ ನಾಲ್ಕಕ್ಕೆ ಇಳಿಸುವ ಬಗ್ಗೆ ಎರಡು ತಿಂಗಳ ಹಿಂದೆ ಸಭೆ ನಡೆದಿದೆ.

    ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಸಚಿವಾಲಯ ನೌಕರರ ಸಂಘದ ಪದಾಧಿಕಾರಿಗಳ ಸುದೀರ್ಘ ಚರ್ಚೆಯಾಗಿದ್ದು, ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಈ ಪೈಕಿ ಕಿರಿಯ ಸಹಾಯಕರ ಹುದ್ದೆಗಳ ಭರ್ತಿ ಪೂರ್ವ ಪ್ರಕ್ರಿಯೆ, ಶಾಖಾಧಿಕಾರಿ ಮೇಲಿನ ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿವೆ ಎಂದು ಮೂಲಗಳು ತಿಳಿಸಿವೆ. ವಿಜಯಭಾಸ್ಕರ್ ವರದಿಯಲ್ಲಿ ಕಡತ ವಿಲೇವಾರಿಗೆ 10 ಹಂತಗಳಿವೆ ಎಂದಿರುವುದು ಅವೈಜ್ಞಾನಿಕ. ವಿಷಯ ನಿವಾರ್ಹಕರು, ಶಾಖಾಧಿಕಾರಿ, ಒಂದೇ ವೃಂದದ ವ್ಯಾಪ್ತಿ ನಾಲ್ಕು ಅಧಿಕಾರಿಗಳು ಕಡತ ಪರಿಶೀಲಿಸುವುದು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಅಧಿಕಾರಿಗೆ ಒಂದು ಹಂತವೆಂದು ಪರಿಗಣಿಸಿದ್ದಾರೆ ಎಂಬ ಸಮಜಾಯಿಷಿ ನೀಡಲಾಗುತ್ತಿದೆ.

    ಯೋಜನೆಗಳಿಗೆ ಅಡ್ಡಗಾಲು: ಉಪ ಕಾರ್ಯದರ್ಶಿ ಶ್ರೇಣಿ ಅಧಿಕಾರಿಗಳಿಗೆ ಸಣ್ಣ ಮೊತ್ತದ ಆರ್ಥಿಕ ಅನುಮೋದನೆ ಅಧಿಕಾರ ಹಂಚಿಕೆ, ಅನುಮೋದಿತ ಕರಡು ಪ್ರಸ್ತಾವನೆಯು ಅಧೀನ ಕಾರ್ಯದರ್ಶಿ ಹಂತದಲ್ಲೇ ಅಧಿಕೃತ ಆದೇಶಕ್ಕೆ ಅವಕಾಶ ಹೀಗೆ ಹಲವು ಸುಧಾರಣೆಗಳ ಅಗತ್ಯವಿದೆ.

    ಕಡತಗಳ ಬದಲಿಗೆ ಅಧಿಕಾರ ಹಂಚಿಕೆಯಿಂದ ಆಡಳಿತಕ್ಕೆ ಚುರುಕಾಗುತ್ತದೆ. ಅಭಿವೃದ್ಧಿ ಕೆಲಸಗಳ ವೇಗ ಹೆಚ್ಚಲಿದ್ದು, ಈ ಅಂಶ ಪರಿಗಣಿಸಿ ಸರಿಪಡಿಸಲು ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಬಜೆಟ್​ನಲ್ಲಿ ಘೋಷಿತ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲೆಂದು ಕಾಲಮಿತಿಯೊಳಗೆ ಆದೇಶ ಹೊರಬಿದ್ದವು. ಆಡಳಿತ, ತಾಂತ್ರಿಕ ಸಮಸ್ಯೆಯಿಂದ ಕಡತಗಳ ವಿಲೇವಾರಿ ನಿಧಾನವಾಗಿದ್ದು, ಯೋಜನೆಗಳ ಅನುಷ್ಠಾನಕ್ಕೆ ಅಡ್ಡಗಾಲು ಹಾಕಿದೆ ಎಂದು ಮೂಲಗಳು ಹೇಳುತ್ತವೆ.

    ಖಾಲಿಯಿರುವ 2.85 ಲಕ್ಷ ಹುದ್ದೆಗಳ ಭರ್ತಿಯಿಂದ ಕಾರ್ಯಕ್ಷಮತೆ ಹೆಚ್ಚಲಿದೆ. ಅಧಿಕಾರಿಗಳ ಹಂಚಿಕೆಯಾದರೆ ಕಡತ ವಿಲೇವಾರಿ ಹಂತ ತನ್ನಿಂದ ತಾನೇ ಕಡಿತವಾಗಲಿದೆ. ಇ-ಆಫೀಸ್ ಪದ್ಧತಿ ಬಂದ ಮೇಲೆ ಡಬಲ್ ಕೆಲಸಗಳಾಗಿದ್ದು, ಮೊದಲು ಅದನ್ನು ಸರಿಪಡಿಸಬೇಕು.

    | ಪಿ.ಗುರುಸ್ವಾಮಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ

    ಕಾರ್ಯದಕ್ಷತೆ ಮೇಲೆ ಬೆಳಕು: ಸಚಿವಾಲಯ ನೌಕರರು ಕಚೇರಿಗೆ ಹಾಜರಿ ಪ್ರಮಾಣ ಸರಾಸರಿ (ಪ್ರತಿ ದಿನಕ್ಕೆ) 6.2 ರಿಂದ 7.79 ತಾಸುಗಳಾಗಿದ್ದು, ಗೈರು ಹಾಜರಿ ಪ್ರಮಾಣ ಶೇ.6.3 ಇದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ವರದಿಯು ಸಿಬ್ಬಂದಿ ಕಾರ್ಯದಕ್ಷತೆ ಮೇಲೆ ಚೆಲ್ಲಿದೆ.ಸಚಿವಾಲಯದ 7,757 ಸಿಬ್ಬಂದಿ (2014 ರಿಂದ 2019), 44.10 ಲಕ್ಷ ಕೆಲಸದ ದಿನಗಳ ದತ್ತಾಂಶವನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಿದೆ. ಜನವರಿಯಲ್ಲಿ ಕನಿಷ್ಠ ಗೈರು (ಶೇ.28.6), ಏಪ್ರಿಲ್​ನಲ್ಲಿ ಗರಿಷ್ಠ ಗೈರು (ಶೇ.37.4) ಹಾಜರಿಯಿರುತ್ತದೆ ಎಂದು ಇದೇ ವರದಿ ಉಲ್ಲೇಖಿಸಿದೆ.

    ಸಿಎಂ ಸಚಿವಾಲಯದಲ್ಲೇ ವಿಳಂಬ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯದೊತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ಕಡತಗಳು ತಿಂಗಳುಗಟ್ಟಲೆ ಬಾಕಿಯಾಗುತ್ತಿರುವುದು ಶಾಸಕರು ಮತ್ತು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂಗೆ ಹಣಕಾಸು, ಬೆಂಗಳೂರು ಅಭಿವೃದ್ಧಿ ಸೇರಿ ಹಲವು ಇಲಾಖೆಗಳ ಕಾರ್ಯಭಾರ ಇದೆ. ಜತೆಗೆ ಗ್ರಾಮೀಣಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಖಾತೆಯೂ ಸಿಎಂ ಬಳಿ ಇದೆ. ವಾರ್ತಾ ಮತ್ತು ಪ್ರಸಾರ ಇಲಾಖೆ ಜವಾಬ್ದಾರಿಯೂ ಸಿಎಂ ಬಳಿಯೇ ಇದ್ದು, ಚಿತ್ರರಂಗದ ಪ್ರಶಸ್ತಿಗಳು, ಪತ್ರಕರ್ತರಿಗೆ ನೀಡಬೇಕಾಗಿರುವ ಪ್ರಶಸ್ತಿಗಳನ್ನು ಕಳೆದ 3 ವರ್ಷಗಳಿಂದ ಪ್ರದಾನ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಅಷ್ಟೆ ಅಲ್ಲ, ಈ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲು ಸಿಎಂಗೆ ಬಿಡುವಾಗಿಲ್ಲ. ಈ ಇಲಾಖೆಗಳ ಕಡತಗಳು ಸಿಎಂ ಸಚಿವಾಲಯ ಹಂತದಲ್ಲಿಯೇ ನನೆಗುದಿಗೆ ಬೀಳುತ್ತಿವೆ.

    ‘ದೊಡ್ಡ’ದಾದ ಜಾತಿ-ಮೀಸಲಾತಿ ವಿವಾದ, ಐತಿಹಾಸಿಕ ದೇವಸ್ಥಾನದ ಟೆಂಡರೇ ರದ್ದು!

    https://www.vijayavani.net/minor-boy-arrested-for-rape-and-murder-of-minor-girl/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts