More

    ವೈಯಕ್ತಿಕ ದ್ವೇಷಕ್ಕಾಗಿ ಹೋರಾಟ : ಬಿಜೆಪಿ ಸದಸ್ಯರ ಆರೋಪ

    ಮುದ್ದೇಬಿಹಾಳ : ಪಟ್ಟಣದ ಪುರಸಭೆ ಎದುರಿಗೆ 40 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ ಇಬ್ಬರು ಸದಸ್ಯರ ಹೋರಾಟ ದುರುದ್ದೇಶದಿಂದ ಕೂಡಿದೆ ಎಂದು ಪುರಸಭೆಯಲ್ಲಿ ಬಿಜೆಪಿ ಪ್ರತಿನಿಧಿಸುತ್ತಿರುವ ಸದಸ್ಯರು ಆರೋಪಿಸಿದರು.

    ಪಟ್ಟಣದಲ್ಲಿನ ಶಾಸಕ ನಡಹಳ್ಳಿ ಅವರ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಚೆನ್ನಪ್ಪ ಕಂಠಿ, ಬಸವರಾಜ ಮುರಾಳ ಮತ್ತಿತರರು, 2018ರಲ್ಲಿ ನೋಂದಾಯಿಸಲಾದ ಜೈನ ಶ್ವೇತಾಂಬರ ಸಮುದಾಯ ಭವನದ ಜಾಗೆ ಕೊಡುವಂತೆ ಹಿಂದೆ ಶಾಸಕರಿದ್ದ ಸಿ.ಎಸ್. ನಾಡಗೌಡ ಅವರು 2016ರಲ್ಲಿ ಪತ್ರ ಕೊಟ್ಟಿದ್ದಾರೆ. ಬಳಿಕ ಸದರಿ ಜಾಗೆಯನ್ನು ಲೀಸ್ ನೀಡಿದ್ದರ ಬಗ್ಗೆ ಚಂದಪ್ಪ ದಸ್ತಗೀರ ಎಂಬುವರು ತಕರಾರು ಮಾಡಿದ್ದರಿಂದ ರದ್ದುಪಡಿಸಲು ಉಪನೋಂದಣಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

    ಪುರಸಭೆ ಸದಸ್ಯ ಮೈಬೂಬ್ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ಪ ಹರಿಜನ ಅವರು ಮುಖ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿರುವ ಹಿಂದೆ ವೈಯಕ್ತಿಕ ದ್ವೇಷವಿದೆ ಎಂದು ಸದಸ್ಯ ಕಂಠಿ ಆರೋಪಿಸಿದರು.

    ಸದ್ಯದ ಹೋರಾಟಕ್ಕೆ ಬೆಂಬಲಿಸಿರುವವರು ಪುರಸಭೆ ಮಳಿಗೆಯ ಬಾಡಿಗೆ ಪಾವತಿಸದ ಅಂಗಡಿಕಾರರು, ಪುರಸಭೆ ಕಚೇರಿಗೆ ವಿವಿಧ ಕೆಲಸಗಳಿಗೆ ತೆರಳುವರನ್ನು ಕರೆದು ತಮ್ಮ ಜತೆ ಫೋಟೊ ತೆಗೆಸಿಕೊಂಡು ಪತ್ರಿಕೆಗಳಲ್ಲಿ ಹಾಕಿಸುತ್ತಿದ್ದಾರೆ ಎಂದು ದೂರಿದರು.

    ಇನ್ನುಳಿದಂತೆ ಈ ಹೋರಾಟದಲ್ಲಿ ಹುರುಳಿಲ್ಲದ ಅಂಶಗಳನ್ನು ಇಟ್ಟುಕೊಂಡು ಕೂತಿದ್ದು ಅವರ ಮೇಲೂ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಬಿಜೆಪಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯರು ಇದ್ದರು.

    ಸ್ಪಷ್ಟ ಉತ್ತರ ಬರಲಿಲ್ಲ
    ಮುಖ್ಯಾಧಿಕಾರಿ ಪತಿಯ ಹೆಸರಿನಲ್ಲಿ ಹಣ ಪಾವತಿಸಿರುವುದು ಭ್ರಷ್ಟಾಚಾರ ಅಲ್ಲವೆ? ಈ ಬಗ್ಗೆ ಡಿಸಿ ಅವರೇ ಪೌರಾಡಳಿತ ನಿರ್ದೇಶಕರಿಗೆ ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ ತಪ್ಪೆಸಗಿರುವ ಕುರಿತು ತನಿಖಾಧಿಕಾರಿಗಳಿಂದ ವರದಿ ಸಲ್ಲಿಸಿದ ಆಧಾರದ ಮೇಲೆ ಕ್ರಮ ಜರುಗಿಸಲು ಪತ್ರ ಬರೆದಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಬಿಜೆಪಿ ಸದಸ್ಯರಿಂದ ಯಾವುದೇ ಸ್ಪಷ್ಟ ಉತ್ತರ ಬರಲಿಲ್ಲ. ಅಲ್ಲದೆ, ಪತ್ರದ ಕುರಿತು ತಮ್ಮ ಗಮನಕ್ಕೆ ಇಲ್ಲವೆಂದು ವಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts