More

    ದೇಶದಲ್ಲಿ ಗಣಿಗಾರಿಕೆ ನಿಲ್ಲುವವರೆಗೂ ಹೋರಾಡಿ

    ಚಿತ್ರದುರ್ಗ: ದೇಶದಲ್ಲಿರುವ ಎಲ್ಲ ಗಣಿಗಾರಿಕೆ ಸ್ಥಗಿತವಾಗಬೇಕು. ಜನರು ಆರೋಗ್ಯವಂತರಾಗಿ ಮತ್ತು ನೆಮ್ಮದಿಯಿಂದ ಬದುಕುವಂತಾಗಬೇಕು. ಅಲ್ಲಿಯವರೆಗೂ ಪಟ್ಟುಬಿಡದೆ ಹೋರಾಡಿ ಎಂದು ಹೈಕೋರ್ಟ್ ವಕೀಲ ಎಸ್.ಬಾಲನ್ ಸಲಹೆ ನೀಡಿದರು.

    ಪರಿಸರ ಸಂರಕ್ಷಣಾ ವೇದಿಕೆ, ಗಣಿಬಾಧಿತ ಗ್ರಾಮಗಳ ಸಂರಕ್ಷಣಾ ಸಮಿತಿ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಪಾಯಕಾರಿ ಗಣಿಗಾರಿಕೆಯಿಂದಾಗುವ ಪರಿಸರ ನಾಶ ಮತ್ತು ಜನಸಾಮಾನ್ಯರ ಬದುಕಿಗೆ ಎದುರಾಗುತ್ತಿರುವ ಸವಾಲುಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಚಿತ್ರದುರ್ಗಕ್ಕೆ ಏನು ಲಾಭ?: ಜಿಲ್ಲೆಯ ಗಣಿ ಕಂಪನಿಯೊಂದು ಲೂಟಿ ಮಾಡುತ್ತಿದೆ. ಸ್ಥಳೀಯ ಜನರ ಶ್ರಮ ಕದ್ದು ತಿನ್ನುತ್ತಿದೆ. ಆರೋಗ್ಯ ಹಾಳು ಮಾಡಲಾಗುತ್ತಿದೆ. ಇಲ್ಲಿನ ಸಂಪತ್ತನ್ನು ಹೆಚ್ಚಿನ ಹಣದ ಆಸೆಗಾಗಿ ವಿದೇಶಕ್ಕೆ ಮಾರಾಟ ಮಾಡುತ್ತಿದ್ದು, ಭೂಮಿ ರಕ್ಷಣೆಗೆ ಮುಂದಾಗಬೇಕು ಎಂದ ಅವರು, ಜಿಲ್ಲೆಯ ಪೊಲೀಸ್ ಇಲಾಖೆ ಏಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದರು.

    ಗಣಿ ಎಂಬುದೇ ದೊಡ್ಡ ಮಾಫಿಯಾ. ದೇಶದ ಅತ್ಯಮೂಲ್ಯ ಸಂಪತ್ತನ್ನು ವಿದೇಶಗಳಿಗೆ ಮಾರಿಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ. ಒಂದು ಟ್ರಾೃಕ್ಟರ್ ಲೋಡ್ ಹೆಸರಿನಲ್ಲಿ ನೂರು ಟ್ರಾೃಕ್ಟರ್‌ಗಳಷ್ಟು ಕಳ್ಳ ಸಾಗಾಣಿಕೆಯಾಗುತ್ತಿದೆ. ನಿಯಮ ಉಲ್ಲಂಘಿಸಿ ಭೂ ಒತ್ತುವರಿ ಮಾಡಿಕೊಂಡು ಹಲವೆಡೆ ಮೈನಿಂಗ್ ನಡೆಯುತ್ತಿದೆ ಎಂದು ಆರೋಪ ಮಾಡಿದರು.

    ಕ್ಯಾನ್ಸರ್‌ಗೆ ಆಹ್ವಾನ: ಗಣಿಗಾರಿಕೆ ಧೂಳಿನಿಂದಾಗಿ ವಿಷ ಅನಿಲ ಹೊರಗಡೆ ಬಂದು ಮಾರಾಣಾಂತಿಕ ಕಾಯಿಲೆಗೆ ಕಾರಣವಾಗಿದೆ. ಜನ, ಜಾನುವಾರುಗಳು ಸಾಯುತ್ತಿವೆ. ಆದರೆ, ಮಾಲೀಕರು ಈ ಕುರಿತು ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದರು.

    1999ರಲ್ಲಿ ಕಾನೂನು ಬದಲಾದ ಪರಿಣಾಮ ಗಣಿ ಕಂಪನಿಗಳಿಗೆ ಅವಕಾಶ ಸಿಕ್ಕಿತು. ಸರ್ಕಾರದ ಬದಲು ಖಾಸಗಿ ಒಡೆತನಕ್ಕೆ ಗಣಿ ಕಂಪನಿಗಳು ಬಂದಿತು. ಬಳ್ಳಾರಿ ಜಿಲ್ಲೆಯ ಸಂಪತ್ತನ್ನು ಅನೇಕ ಕಂಪನಿಗಳು ನುಂಗಿವೆ. ನಂತರದ ಹೋರಾಟದಿಂದ ಏನೆಲ್ಲ ಆಯಿತು ಎಂಬುದು ಜನತೆಗೆ ತಿಳಿದಿದೆ ಎಂದರು.

    ಭಾರತದಲ್ಲಿ ಕಂಪನಿಗಳು ಸಂಪೂರ್ಣ ಸ್ಥಗಿತವಾಗಬೇಕಾದರೆ, ಜನಾಂದೋಲನದ ಹೋರಾಟ ಅಗತ್ಯವಿದೆ. ಆಗ ಕ್ಯಾನ್ಸರ್ ಅಷ್ಟೇ ಅಲ್ಲ, ಎಲ್ಲ ಕೆಟ್ಟದ್ದು ತೊಲಗಲಿದೆ ಎಂದು ಸಲಹೆ ನೀಡಿದರು.

    ತಮಿಳುನಾಡಿನ ತೂತುಕುಡಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಜನ ತಿರುಗಿ ಬಿದ್ದ ಪರಿಣಾಮ ಸ್ಥಗಿತಗೊಂಡಿತು. ಒಡಿಸ್ಸಾ, ಬಿಹಾರದಲ್ಲಿ ಅಲ್ಲಿನ ಆದಿವಾಸಿಗಳು ಹೋರಾಟ ಮಾಡಿದ್ದಾರೆ. ಇಲ್ಲಿಯೂ ಅಂತಹ ಮನೋಭಾವದ ಅಗತ್ಯವಿದೆ ಎಂದರು.

    ಚುನಾವಣೆ ವೇಳೆ ಕೊಡುತ್ತಾರೆ ನೋಟು, ನೀವು ಹಾಕುತ್ತೀರಾ ಓಟು, ಬೇಡಿಕೆ ಈಡೇರಿಕೆಗಾಗಿ ಹೋರಾಡಿದರೆ ಪೊಲೀಸರ ಬೂಟು ಅಥವಾ ಲಾಟಿ ಏಟು ಇದು ಜನರ ದುಸ್ಥಿತಿ ಎಂದು ಬೇಸರಿಸಿದರು.

    ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಸಿ.ಕೆ.ಮಹೇಶ್, ಚಿಂತಕ ಜೆ.ಯಾದವರೆಡ್ಡಿ, ಪರಿಸರವಾದಿ ಎಚ್.ಕೆ.ಎಸ್.ಸ್ವಾಮಿ, ಸಾಮಾಜಿಕ ಹೋರಾಟಗಾರರಾದ ಅನ್ನಪೂರ್ಣಾ, ಟಿ.ಶಫೀವುಲ್ಲಾ, ಲಕ್ಷ್ಮಿಕಾಂತ್, ಕೆ.ಹೊಳಿಯಪ್ಪ ಸಕ್ಯ, ಮಂಜುನಾಥ್ ತಾಳಿಕೆರೆ ಇತರರಿದ್ದರು.

    *ಕೋಟ್
    ಗಣಿಗಾರಿಕೆ ಅಪಾಯ ತಂದೊಡ್ಡುವ ಉದ್ಯಮ. ಕಬ್ಬಿಣದ ಅದಿರು ಮಾತ್ರ ತೆಗೆದುಕೊಂಡು ಸೈನೇಡ್ ಒಳಗೊಂಡ ವಿಷಕಾರಿ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಭೂಮಿಯ ಮೇಲ್ಪದರ ಹಾಳು ಮಾಡುತ್ತಾರೆ. ಇಂತಹ ಫಲವತ್ತತೆ ಪುನಃ ಆ ಪ್ರದೇಶದಲ್ಲಿ ಕಾಣಲು ಕನಿಷ್ಠ 500 ವರ್ಷ ಬೇಕು. ಆದ್ದರಿಂದ ಹೋರಾಟದ ಫಲವಾಗಿ ಮಾತ್ರ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯ.
    ಕಲ್ಕುಳಿ ವಿಠ್ಠಲ್ ಹೆಗ್ಡೆ
    ಪರಿಸರವಾದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts