More

    ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

    ಕೋವಿಡ್ 19 ವೈರಸ್ ಜನರ ಆರೋಗ್ಯದ ಮೇಲಷ್ಟೆ ಅಲ್ಲ, ಜಗತ್ತಿನ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಸ್ವಾತಂತ್ರ್ಯಾನಂತರದ ಭಾರತ ಇದೀಗ 5ನೆ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಡೇಟಾ ಪ್ರಕಾರ ಭಾರತ 1947ರಿಂದೀಚೆಗೆ 1958, 1966, 1973 ಮತ್ತು 1980ರಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸಿದೆ.

    ಆರ್ಥಿಕ ಹಿಂಜರಿತ ಎಂದರೆ ದೇಶದಲ್ಲಿ ಆರ್ಥಿಕ ಚಟುವಟಿಕೆಗಳ ಪ್ರ,ಮಾಣ ಕುಸಿತ ಕಂಡು ಮಾರಾಟ, ಆದಾಯ ಮತ್ತು ಉದ್ಯೋಗ ಪ್ರಮಾಣದಲ್ಲೂ ಇಳಿಕೆಯಾಗುವಂಥ ವಿದ್ಯಮಾನ. ಭಾರತ ಇದುವರೆಗೆ ಅಂತಹ ನಾಲ್ಕು ನೆಗೆಟಿವ್ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. 1958ನೇ ಇಸವಿಯಲ್ಲಿ ಜಿಡಿಪಿ ಬೆಳವಣಿಗೆ ಶೇಕಡ – 1.2 ಆಗಿದ್ದರೆ, 1966ರಲ್ಲಿ ಇದು ಶೇಕಡ – 3.6 ಆಗಿತ್ತು. ಇದೇ ರೀತಿ, 1973ರಲ್ಲಿ ಶೇಕಡ -0.32 ಆಗಿದ್ದರೆ, 1980ರಲ್ಲಿ ಶೇಕಡ -5.2 ಆಗಿತ್ತು.

    1958ರಲ್ಲಿ ಬಾಕಿಪಾವತಿ ಸಮಸ್ಯೆ   ಬಾಕಿ ಪಾವತಿಯ ಸಮಸ್ಯೆ ಬಹುವಾಗಿ ದೇಶದ ಆರ್ಥಿಕತೆಯನ್ನು 1957ರಲ್ಲಿ ಬಹುವಾಗಿ ಕಾಡಿತ್ತು. ಪರಿಣಾಮ ಗೋಚರಿಸಿದ್ದು 1958ರಲ್ಲಿ. ದುರ್ಬಲ ಮುಂಗಾರು ಕೃಷಿ ಉತ್ಪಾದನೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿತ್ತು. ಆ ವರ್ಷ ಭಾರತ 60 ಲಕ್ಷ ಟನ್ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡಿತ್ತು. ಇದು ಭಾರತದ ಟ್ರೇಡ್ ಡೆಫಿಸಿಟ್ ಅನ್ನು ಹೆಚ್ಚಿಸಿದ್ದಲ್ಲದೆ, ವಿದೇಶಿ ವಿನಿಮಯ ಮೀಸಲನ್ನು ಅರ್ಧಕ್ಕರ್ಧ ಇಳಿಸಿತ್ತು.

    1966ರಲ್ಲಿ ಕಾಡಿದ್ದು ಬರ   ನೆರೆಯ ಚೀನಾ ಜತೆಗೆ 1962ರಲ್ಲಿ, ಪಾಕಿಸ್ತಾನದ ಜತೆಗೆ 1965ರಲ್ಲಿ ಯುದ್ಧ ಏರ್ಪಟ್ಟಿತ್ತು. ಈ ಯುದ್ಧಗಳು ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿತ್ತು. ಅದರ ಬೆನ್ನಿಗೆ ಭಾರತವನ್ನು ಕಾಡಿದ್ದು ಬರ. 1966ರಲ್ಲಿ ಆಹಾರ ಧಾನ್ಯ ಉತ್ಪಾದನೆ ಶೇಕಡ 20 ಕುಸಿತ ಕಂಡಿತ್ತು. ದೇಶದ ಜನತೆಯ ಹಸಿವು ನೀಗಿಸಲು ಭಾರತ ಮತ್ತೆ ವಿದೇಶಿ ಆಹಾರ ಧಾನ್ಯಗಳ ಮೊರೆ ಹೋಗಬೇಕಾಗಿ ಬಂತು.

    1973ರಲ್ಲಿ ಇಂಧನ ಬಿಕ್ಕಟ್ಟು    ಇಡೀ ಜಗತ್ತೇ ಇಂಧನ ಬಿಕ್ಕಟ್ಟು ಎದುರಿಸಿದ ವರ್ಷ ಇದು. ಆರ್ಗನೈಸೇಷನ್​ ಆಫ್ ಅರಬ್ ಪೆಟ್ರೋಲಿಯಂ ಎಕ್ಸ್​ಪೋರ್ಟಿಂಗ್ ಕಂಟ್ರೀಸ್​(ಒಎಪಿಇಸಿ) ತೈಲ ನಿಷೇಧ ಅಥವಾ ಆಯಿಲ್ ಎಂಬಾರ್ಗೋ ಹೇರಿತ್ತು. ಎಂಬಾರ್ಗೊ ಎಂದರೆ ಒಂದು ನಿರ್ದಿಷ್ಟ ದೇಶದ ಜತೆಗೆ ತೈಲ ವಹಿವಾಟಿಗೆ ನಿಷೇಧ ಹೇರುವಂಥದ್ದು. ಇಸ್ರೇಲ್ ಅನ್ನು ಬೆಂಬಲಿಸುವ ರಾಷ್ಟ್ರಗಳನ್ನು ಒಎಪಿಇಸಿ ಗುರಿ ಮಾಡಿ ಈ ನಿಷೇಧವನ್ನು ಹೇರಿತ್ತು. ಪರಿಣಾಮ ತೈಲ ಬೆಲೆ ಶೇಕಡ 400 ಏರಿಕೆ ಕಂಡಿತ್ತು. ಭಾರತ ಆಮದು ಮಾಡಿಕೊಳ್ಳುತ್ತಿದ್ದ ತೈಲ ದರ 1972ರಲ್ಲಿ 414 ಮಿಲಿಯನ್ ಡಾಲರ್ ಇದ್ದದ್ದು 1973ರಲ್ಲಿ 900 ಮಿಲಿಯನ್ ಡಾಲರ್​ಗೆ ಏರಿತು. ಹಾಗೆ ಸಂಕಷ್ಟ ಎದುರಾಯಿತು.

    ಇದನ್ನೂ ಓದಿ: ಐವರಲ್ಲಿ ಒಬ್ಬರಿಗೆ ಕೋವಿಡ್ 19 ರಿಸ್ಕ್​ ಭಾರಿ ಅಪಾಯಕಾರಿ- ಲ್ಯಾನ್ಸೆಟ್ ಗ್ಲೋಬಲ್​ ಹೆಲ್ತ್​ ವರದಿ

    1980ರಲ್ಲಿ ತೈಲಾಘಾತ    ಜಗತ್ತಿಗೆ ಎರಡನೇ ಭಾರಿ ತೈಲಾಘಾತ ಉಂಟಾಗಿದ್ದು 1980ರಲ್ಲಿ. ಇದು ಇರಾನಿಯನ್ ಕ್ರಾಂತಿ ಕಾರಣ ತೈಲ ಉತ್ಪಾದನೆ ಕುಸಿತ ಕಂಡು ಉಂಟಾದ ಆಘಾತವಾಗಿತ್ತು. ತರುವಾಯ ಇರಾನ್​-ಇರಾಕ್ ಯುದ್ಧ ಏರ್ಪಟ್ಟ ಕಾರಣ ತೈಲ ಸಂಕಷ್ಟ ಇನ್ನಷ್ಟು ಹೆಚ್ಚಾಯಿತು. ಈ ಸನ್ನಿವೇಶದಿಂದಾಗಿ ಭಾರತಕ್ಕೆ ಮತ್ತೆ ಬಾಕಿ ಪಾವತಿ ಸಮಸ್ಯೆ ಉಂಟಾಯಿತು.

    2020ರ ಕೋವಿಡ್​19 ಸಂಕಷ್ಟ  ಭಾರತದಲ್ಲಿ ಚೀನಾ ಮೂಲದ ಕೋವಿಡ್ 19 ವೈರಸ್ ಸಂಕಷ್ಟ ಈ ವರ್ಷಾರಂಭದಲ್ಲಿ ಕಾಣಿಸಿಕೊಂಡಿದೆ. ಮಾರ್ಚ್ 24ರಿಂದ ಲಾಕ್​ಡೌನ್ ಘೋಷಣೆ ಮಾಡಿದ ನಂತರದಲ್ಲಿ ದೇಶದ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತು. ಪರಿಣಾಮ ಜಿಡಿಪಿ ಬೆಳವಣಿಗೆ ಕುಸಿಯಿತು. ನಿರುದ್ಯೋಗ ಪ್ರಮಾಣ ಸೇರಿ ಇನ್ನೂ ಹಲವು ಸಮಸ್ಯೆಗಳು ಒಂದೊಂದಾಗಿ ಉಂಟಾಗಿದ್ದು ಇದರ ಆಳ-ಅಗಲ ಇನ್ನಷ್ಟೇ ವೇದ್ಯವಾಗಬೇಕಿದೆ.

    VIDEO : ಜೂನ್ 21ಕ್ಕೆ ಸೂರ್ಯಗ್ರಹಣ- ಒಂದಿಷ್ಟು ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts