More

    ಫುಟಪಾತ್​ ಅಂಗಡಿ ನಿರ್ಮಾಣಕ್ಕೆ ತೀವ್ರ ವಿರೋಧ : ಕರ್ನಾಟಕ ರಿಪಬ್ಲಿಕ್​ ಸೇನೆ-ವ್ಯಾಪಾರಿಗಳ ಮಧ್ಯೆ ಜಟಾಪಟಿ

    ಬಂಗಾರಪೇಟೆ ಗ್ರಾಮಾಂತರ: ತಾಲೂಕಿನ ಕಾಮಸಮುದ್ರದಲ್ಲಿ ಮಂಗಳವಾರ ರಸ್ತೆ ಬದಿಯಲ್ಲಿ ಫುಟಪಾತ್ ಅಂಗಡಿಗಳ ನಿರ್ಮಾಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಿಪಬ್ಲಿಕನ್​ ಸೇನಾ ಮುಖಂಡರು ಹಾಗೂ ಗ್ರಾಮಸ್ಥರ ನಡುವೆ ಪರ&ವಿರೋಧದ ಮಾತಿನ ಜಟಾಪಟಿ ನಡೆಯಿತು.


    ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಪಂನಿಂದ ಸರ್ಕಾರಿ ಬಸ್​ ನಿಲ್ದಾಣದ ಪಕ್ಕದಲ್ಲಿ ಹಾಗೂ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್​ಗೆ ಅಂಟಿಕೊಂಡಂತೆ ಫುಟಪಾತ್​ಗಳಲ್ಲಿ ಸುಮಾರು 50ಕ್ಕೂ ಹೆಚ್ಚು ತೆರೆದ ಅಂಗಡಿಗಳನ್ನು ನಿರ್ಮಿಸಲಾಗಿದ್ದು, ರಸ್ತೆ ಬದಿಯಲ್ಲಿ ಹತ್ತಾರು ಬಡವರು ತರಕಾರಿ ಸೇರಿ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇವರು ಮಳೆ, ಬಿಸಿಲಿಗೆ ತೀವ್ರ ಸಂಕಷ್ಟ ಎದುರಿಸುತ್ತಿರುವುದನ್ನು ಗಮನಿಸಿದ ಗ್ರಾಪಂ ಅಧ್ಯೆ ಕಾವೇರಿ ಆದಿನಾರಾಯಣ ಸಣ್ಣ ಅಂಗಡಿಗಳನ್ನು ನಿರ್ಮಿಸಿದ್ದಾರೆ. ಅಂಗಡಿಗಳಿಗೆ ಗ್ರಾಪಂನಿಂದ ಮುಂಗಡವಿಲ್ಲ, ಇದರ ಬದಲಾಗಿ ಪ್ರತಿ ವರ್ಷಕ್ಕೊಮ್ಮೆ ಗುತ್ತಿಗೆ ನೀಡುತ್ತಿದ್ದು, ಪ್ರತಿ ದಿನ 10 ರೂ.ಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಇದರಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಸಂತಸವಾಗಿದ್ದು, ಬಹುತೇಕ ಅಂಗಡಿಗಳಲ್ಲಿ ಬಡವರು ವ್ಯಾಪಾರ ಮಾಡುತ್ತಿದ್ದಾರೆ.


    ಕರ್ನಾಟಕ ರಿಪಬ್ಲಿಕನ್​ ಸೇನಾ ಜಿಲ್ಲಾಧ್ಯಕ್ಷ ಜಿ.ಚಿಕ್ಕನಾರಾಯಣ ನೇತೃತ್ವದಲ್ಲಿ ಫುಟಪಾತ್​ ಅಂಗಡಿಗಳನ್ನು ನಿರ್ಮಾಣ ಮಾಡಿರುವುದರಿಂದ ಸಾರ್ವಜನಿಕರು ವ್ಯಾಪಾರ ಮಾಡಲು, ವಾಹನ ಸವಾರರಿಗೆ ತೊಂದರೆಯಾಗಿದೆ. ಕಾಮಸಮುದ್ರ ಹೃದಯ ಭಾಗದಲ್ಲಿ ಸರ್ಕಾರಿ ಪ್ರೌಢ ಶಾಲೆಯಿದ್ದು, ಈ ಶಾಲೆಯ ಕಾಂಪೌಂಡ್​ಗೆ ಅಂಟಿಕೊಂಡಂತೆ ಅಕ್ರಮ ಪುಟ್​ಪಾತ್​ ಅಂಗಡಿಗಳನ್ನು ನಿರ್ಮಿಸಿರುವುದರಿಂದ ವಿದ್ಯಾರ್ಥಿಗಳಿಗೆ ವ್ಯಾಪಾರದ ಜಗಳದಲ್ಲಿ ತೊಂದರೆಯಾಗುತ್ತಿದೆ ಎಂದು ಕಾಮಸಮುದ್ರ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.


    ಈ ವಿಷಯ ತಿಳಿಯುತ್ತಿದ್ದಂತೆ ಫುಟಪಾತ್​ ಅಂಗಡಿಯವರು ಹಾಗೂ ಕಾಮಸಮುದ್ರ ಗ್ರಾಪಂ ಅಧ್ಯೆ ಕಾವೇರಿ ಆದಿನಾರಾಯಣ ಮತ್ತು ಇತರ ಸದಸ್ಯರೊಂದಿಗೆ ಜಮಾವಣೆಗೊಂಡಿದ್ದರು. ಫುಟಪಾತ್ ಅಂಗಡಿಗಳ ಬಳಿಯಿಂದ ಗ್ರಾಪಂ ಕಚೇರಿಯವರೆಗೂ ಕರ್ನಾಟಕ ರಿಪಬ್ಲಿಕನ್​ ಸೇನಾ ಜಿಲ್ಲಾಧ್ಯಕ್ಷ ಜಿ.ಚಿಕ್ಕನಾರಾಯಣ ತಮಟೆ ಚಳವಳಿಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು. ಎರಡೂ ಕಡೆಯವರೂ ಜೈಕಾರಗಳನ್ನು ಹಾಕುತ್ತ್ತ ಪ್ರತಿಭಟನೆ ಮಾಡಿದರು.


    ಅಂಗಡಿಗಳಿಂದ ನಮಗೆ ಅನುಕೂಲವಾಗಿದ್ದು, ಕರ್ನಾಟಕ ರಿಪಬ್ಲಿಕನ್​ ಸೇನೆ ಮುಖಂಡರು ಪ್ರತಿಭಟನೆ ಮಾಡುವುದು ನಿಜಕ್ಕೂ ಖಂಡನೀಯ ಎಂದು ರಸ್ತೆ ಬದಿ ವ್ಯಾಪಾರಿಗಳು ಅಳಲು ತೋಡಿಕೊಂಡರು.

    ಕರ್ನಾಟಕ ರಿಪಬ್ಲಿಕನ್​ ಸೇನಾ ಜಿಲ್ಲಾಧ್ಯಕ್ಷ ಜಿ.ಚಿಕ್ಕನಾರಾಯಣ, ಪ್ರಧಾನ ಕಾರ್ಯದರ್ಶಿ ಪಿ.ನಾರಾಯಣ ಮಾತನಾಡಿ, ರಸ್ತೆ ಬದಿಯಲ್ಲಿ ಅಕ್ರಮವಾಗಿ ಕಟ್ಟಿರುವ ಫುಟಪಾತ್ ಅಂಗಡಿಗಳನ್ನು ಕಾನೂನು ವಿರುದ್ಧವಾಗಿ ನಿರ್ಮಿಸಲಾಗಿದೆ. ಗ್ರಾಪಂಗೆ ಅಧಿಕಾರವಿದೆ ಎಂದು ಏನು ಬೇಕಾದರೂ ಮಾಡಬಹುದೆಂದರೆ ಅದು ತಪ್ಪಾಗಲಿದೆ. ನಾವು ಪ್ರತಿಭಟನೆ ಮಾಡುತ್ತಿರುವುದಕ್ಕೆ ಈ ಭಾಗದ ರಾಜಕಾರಣಿಗಳು ದುರುದ್ದೇಶದಿಂದ ಹೋರಾಟಗಾವನ್ನು ದಮನ ಮಾಡಲು ಒತ್ತಡಗಳನ್ನು ಹೇರುತ್ತಿದ್ದಾರೆ. ನಮ್ಮ ಹೋರಾಟಕ್ಕೆ ವಿರುದ್ಧವಾಗಿ ಜನರನ್ನು ಸೇರಿಸಿ ವಿರೋಧ ವ್ಯಕ್ತಪಡಿಸುವುದಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಗ್ರಾಪಂ ಮಾಜಿ ಅಧ್ಯಕ್ಷ ಆದಿನಾರಾಯಣ ಕುಟ್ಟಿ ಮಾತನಾಡಿ, ಅಂಗಡಿಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ರಸ್ತೆ ಬದಿ ವ್ಯಾಪಾರಿಗಳ ಕಷ್ಟಗಳನ್ನು ನೋಡಿ ಬೇಸರಗೊಂಡು ಅವರ ಅನುಕೂಲಕ್ಕಾಗಿ ಮೇಲ್ಛಾವಣಿ ಹಾಕಿಕೊಡಲಾಗಿದೆ ಎಂದರು.


    ಗ್ರಾಪಂ ಅಧ್ಯೆ ಕಾವೇರಿ ಆದಿನಾರಾಯಣ, ಉಪಾಧ್ಯೆ ಮಹಾಲಕ್ಷ್ಮಿ, ತಾಪಂ ಮಾಜಿ ಸದಸ್ಯ ಜೆಸಿಬಿ ನಾರಾಯಣಪ್ಪ, ಗ್ರಾಪಂ ಸದಸ್ಯ ಸೈಯದ್​ ಅಜಮತ್ತುಲ್ಲಾ, ಡಿ.ಎಂ.ಶ್ರೀನಿವಾಸ್​, ಕೆ.ಪಿ.ನಾಗರಾಜ್​, ಬಾಬು, ಮುನೀರ್​, ಜಿ.ಎಂ.ಶ್ರೀನಿವಾಸ್​, ಬೋಡಗುರ್ಕಿ ಪಾರ್ಥಸಾರಥಿ, ವೆಂಕಟೇಶ್​, ಗೋವಿಂದಪ್ಪ, ಮಂಜುನಾಥ್​, ವಿಎಸ್ಸೆಸ್ಸೆನ್​ ಉಪಾಧ್ಯಕ್ಷ ರಂಗನಾಥಾಚಾರಿ, ಸೀತಾರಾಮಪ್ಪ, ಜಿ.ವಿ.ಶ್ರೀನಿವಾಸಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts