More

    ಗ್ರಾಪಂ ನೂತನ ಸದಸ್ಯರಲ್ಲಿ ಚಡಪಡಿಕೆ!

    ಗದಗ: ಗ್ರಾಪಂ ಪಂಚಾಯಿತಿ ಚುನಾವಣೆ ಫಲಿತಾಂಶ ಘೋಷಣೆಯಾಗಿ ಎರಡು ವಾರ ಕಳೆಯುತ್ತಾ ಬಂದರೂ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕ್ರಿಯೆ ಆರಂಭವಾಗಿಲ್ಲ. ಇದರಿಂದ ಸದಸ್ಯರಲ್ಲಿ ಚಡಪಡಿಕೆ ಶುರುವಾಗಿದೆ.

    15 ವರ್ಷಗಳಿಂದ ಮೀಸಲಾತಿ ಸಿಗದಿರುವ ಹಾಗೂ ಇಲ್ಲಿಯವರೆಗೂ ಒಂದೇ ಒಂದು ಸಲ ಮೀಸಲಾತಿ ಬಾರದ ಜಾತಿಯ ಸದಸ್ಯರಿಗೆ ಈಗ ಭಾರಿ ಬೇಡಿಕೆ. ಅಂಥವರನ್ನು ಸೆಳೆದುಕೊಳ್ಳಲು ಕಾಂಗ್ರೆಸ್, ಬಿಜೆಪಿ ಸ್ಥಳೀಯ ಮುಖಂಡರು ಪ್ರಯತ್ನ ನಡೆಸಿದ್ದಾರೆ.

    ಫಲಿತಾಂಶ ಘೋಷಣೆಯಾದ ದಿನದಿಂದಲೇ ಅಧ್ಯಕ್ಷ-ಉಪಾಧ್ಯಕ್ಷ ಯಾರಾಗುತ್ತಾರೆ, ಯಾವ ಮೀಸಲಾತಿ ಬರಬಹುದು, ಯಾರಿಗೆಲ್ಲ ಅವಕಾಶವಿದೆ, ಮೀಸಲಾತಿ ಘೋಷಣೆ ನಂತರ ಏನೆಲ್ಲ ಮಾಡಬೇಕು ಎಂಬ ಕುರಿತು ಕೈ ಹಾಗೂ ಕಮಲದ ಮುಖಂಡರು ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಮೀಸಲಾತಿ ಘೋಷಣೆಯಾದ ಕೂಡಲೇ ಕಾರ್ಯಾಚರಣೆ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಹೆಚ್ಚು ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಬೇಕು ಎಂಬ ಉಮೇದು ಎರಡೂ ಪಕ್ಷದಲ್ಲಿ ಜೋರಾಗಿದೆ.

    ಸಂಕ್ರಾಂತಿ ವೇಳೆಗೆ ನೂತನ ಸದಸ್ಯರ ಸಮ್ಮುಖದಲ್ಲಿಯೇ ಜಿಲ್ಲಾ ಡಳಿತ ಮೀಸಲಾತಿ ಘೋಷಣೆ ಮಾಡಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಮೀಸಲಾತಿ ಸಭೆಯನ್ನು ಮಾಸಾಂತ್ಯಕ್ಕೆ ನಿಗದಿಪಡಿಸಿ ಕೊಂಡಿದ್ದರಿಂದ ಎರಡು ವಾರಗಳಿಂದ ಕಾದು ಕುಳಿತಿದ್ದ ಅನೇಕ ಸದಸ್ಯರಿಗೆ ಬೇಸರ ಉಂಟಾಗಿದೆ. ‘ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆದರೆ, ನಮ್ಮಲ್ಲಿ ಇನ್ನೂ 10-12 ದಿನಗಳನ್ನು ಕಳೆಯಬೇಕು’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಸದಸ್ಯರನ್ನು ಹಿಡಿದಿಡುವುದೇ ಸವಾಲು!

    ಮೀಸಲಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ನೂತನ ಸದಸ್ಯರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿದೆ ಎಂಬ ಮಾತು ವ್ಯಾಪಕವಾಗಿದೆ. ಮುಖ್ಯವಾಗಿ ಸಮ ಸಂಖ್ಯೆಯಲ್ಲಿ ಆಯ್ಕೆಯಾಗಿರುವ ಗ್ರಾಪಂಗಳಲ್ಲಿ ಸದಸ್ಯರಿಗೆ ಬಹುಬೇಡಿಕೆ. ಅಲ್ಲದೆ, ಈವರೆಗೆ ಮೀಸಲಾತಿ ಸಿಗದಿರುವ ಜಾತಿಯ ಸದಸ್ಯರಿದ್ದರಂತೂ ಎಲ್ಲಿಲ್ಲದ ಡಿಮಾಂಡ್.

    ಬಿಜೆಪಿ ಜನಸೇವಕ ಸಮಾವೇಶದ ನಂತರ ಮತ್ತಷ್ಟು ಬಿರುಸಿನ ಚಟುವಟಿಕೆ ಆರಂಭವಾಗಿವೆ. ‘ಅಧಿಕಾರ ಹಿಡಿಯುವುದೇ ಪರಮ ಗುರಿ. ಹೀಗಾಗಿ ಅಗತ್ಯ ಬಿದ್ದರೆ ಅನ್ಯ ಪಕ್ಷಗಳ ಬೆಂಬಲಿತ ಸದಸ್ಯರನ್ನು ಸೆಳೆದು ಗ್ರಾಪಂ ಅಧಿಕಾರ ಹಿಡಿಯಿರಿ’ ಎಂದು ಸಚಿವರೇ ಬಹಿರಂಗ ಹೇಳಿಕೆ ನೀಡಿದ್ದರಿಂದ ಕಸರತ್ತು ಜೋರಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸ್ಥಳೀಯ ಮುಖಂಡರು ಸುಮ್ಮನೆ ಕುಳಿತಿಲ್ಲ. ಬಿಜೆಪಿ ಬೆಂಬಲಿತರನ್ನು ತಮ್ಮತ್ತ ಸೆಳೆದುಕೊಂಡು ಕುರ್ಚಿ ಹಿಡಿಯಲು ತಂತ್ರ ಹೆಣೆದಿದ್ದಾರೆ.

    ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಫೆ. 5ರವರೆಗೆ ಕಾಲಾವಕಾಶವಿದೆ. ಜ. 23ರ ನಂತರ ಪ್ರಕ್ರಿಯೆ ಶುರು ಮಾಡಿ ತಾಲೂಕುವಾರು ಸಭೆ ನಡೆಸಿ ಮೀಸಲಾತಿ ನಿಗದಿಪಡಿಸಲಾಗುವುದು.

    ಡಾ. ಆನಂದ. ಕೆ. ಜಿಪಂ ಸಿಇಒ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts