More

    ಬೆಳೆ ವಿಮೆಗೆ ಎಫ್​ಐಡಿ ಕಡ್ಡಾಯ, ರೈತರ ಸಮಸ್ಯೆಗೆ ಸ್ಪಂದಿಸಲು ಶಾಸಕ ಮಾನೆ ಸೂಚನೆ

    ಹಾನಗಲ್ಲ: ಬೆಳೆಗಳನ್ನು ವಿಮಾ ವ್ಯಾಪ್ತಿಗೆ ತರಲು ಕೃಷಿ ಜಮೀನಿನ ಪಹಣಿಯಲ್ಲಿ ಹೆಸರು ನಮೂದಾಗಿರುವ ಪ್ರತಿಯೊಬ್ಬ ರೈತರೂ ಪ್ರತ್ಯೇಕವಾಗಿ ಎಫ್.ಐ.ಡಿ. ಪಡೆದುಕೊಳ್ಳಬೇಕಾಗಿದೆ. ಎಫ್.ಐ.ಡಿ. ಇಲ್ಲದೇ ರೈತರು ಬೆಳೆ ವಿಮೆಯಿಂದ ವಂಚಿತರಾಗುತ್ತಿದ್ದು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಪ್ರಭಾರಿ ತಹಸೀಲ್ದಾರ್ ರವಿ ಕೊರವರ ಅವರಿಗೆ ಸೂಚಿಸಿದರು.

    ಶನಿವಾರ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಅಭಿಲಾಷ ಭತ್ತದ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ಮಳೆ ಕಡಿಮೆ ಇರುವುದರಿಂದ 1001 ಮತ್ತು 1010 ಬಿತ್ತನೆ ಬೀಜ ಬಿತ್ತಲು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ ಎಂದು ಕೃಷಿ ಇಲಾಖೆಯ ಎಡಿಎ ಕೆ. ಮೋಹನಕುಮಾರ ಸಭೆಯ ಗಮನಕ್ಕೆ ತಂದಾಗ, ಈ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ತಾಲೂಕಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಬೆಳೆ ವಿಮೆಗೆ ಜು. 31 ಕೊನೆಯ ದಿನವಾಗಿದ್ದು, ಈ ಬಗೆಗೆ ರೈತರಲ್ಲಿ ಮಾಹಿತಿ ನೀಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಪ್ರಸಕ್ತ ವರ್ಷ 58 ಕೊಳವೆ ಬಾವಿ ಕೊರೆಯಿಸಲಾಗಿದ್ದು, 38 ರಲ್ಲಿ ಮಾತ್ರ ನೀರು ದೊರಕಿದೆ ಎಂದು ಇಂಜಿನಿಯರ್ ಎಂ.ಎನ್. ಖಾಜಿ ತಿಳಿಸಿದರು. ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕಾಳಜಿವಹಿಸಬೇಕು ಎಂದು ಶಾಸಕ ಮಾನೆ ತಿಳಿಸಿದರು.

    ವಿದ್ಯಾರ್ಥಿಗಳಿಗೆ ಸಮವಸ್ತ ಹಾಗೂ ಶೂ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗಬೇಕು. ಅವುಗಳ ಗುಣಮಟ್ಟದ ಮೇಲೆ ನಿಗಾವಹಿಸಬೇಕು. ತಾಲೂಕಿನಿಂದ ಬಹಳಷ್ಟು ಶಿಕ್ಷಕರು ವರ್ಗಾವಣೆಗೊಂಡಿದ್ದು, ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಆಗಬಾರದು. ಬೇರೆಡೆಯಿಂದ ಶಿಕ್ಷಕರು ನಮ್ಮ ತಾಲೂಕಿಗೆ ಬರುವವರೆಗೂ ವರ್ಗಾವಣೆಗೊಂಡವರನ್ನು ಬಿಡುಗಡೆಗೊಳಿಸಬೇಡಿ. ಶಿಕ್ಷಕರು ಸ್ಥಳೀಯವಾಗಿ ಮನೆ ಮಾಡಬೇಕು. ಬಸ್ ವಿಳಂಬ ಮತ್ತಿತರ ಕಾರಣ ನೀಡಿ ಶಾಲೆಗೆ ತಡವಾಗಿ ಆಗಮಿಸದಂತೆ ತಿಳಿಸಿ ಎಂದು ಮಾನೆ ತಾಕೀತು ಮಾಡಿದರು.

    ತಾಪಂ ಆಡಳಿತಾಧಿಕಾರಿ ಆರ್.ಪಿ. ಶಿಂತ್ರಿ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ರೋಗಬಾಧೆ ಮಾಹಿತಿ ನೀಡಿ

    ಕಳೆದ ವರ್ಷ ಅಡಕೆ ಮತ್ತು ಮಾವಿನ ಬೆಳೆ ವಿಮೆ ಪರಿಹಾರ ಬಾಕಿ ಮುಂದಿನ 15 ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದರು. ಅಡಕೆಗೆ ರೋಗ ಬಾಧೆ ತಗುಲಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಹತೋಟಿ ಕ್ರಮಗಳ ಕುರಿತು ಸೂಕ್ತ ಮಾಹಿತಿ ನೀಡಿ ಎಂದು ಶಾಸಕ ಮಾನೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts