More

    ತ್ಯಾಜ್ಯದಿಂದ ಗೊಬ್ಬರ ತಯಾರಿ, ಮೂವರು ಯುವ ಇಂಜಿನಿಯರ್‌ಗಳ ಸಾಹಸ

    ಉಳ್ಳಾಲ: ತ್ಯಾಜ್ಯವಸ್ತುಗಳನ್ನು ಕಂಡಾಗ ಮೂಗಿಗೆ ಕೈ ಹಿಡಿದು ದೂರ ಹೋಗುವವರ ನಡುವೆ ಇಂಜಿನಿಯರಿಂಗ್ ಕಲಿತ ಮೂವರು ಯುವಕರು ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಮೂಲಕ ಮೂರು ಸ್ಥಳೀಯಾಡಳಿತಗಳ ತ್ಯಾಜ್ಯ ನಿರ್ವಹಣೆಗೆ ಆಸರೆಯಾಗಿದ್ದಾರೆ.

    ಉಳ್ಳಾಲ ನಿವಾಸಿಗಳಾದ ಸಫ್ವಾನ್, ಮಾಝಿನ್ ಮತ್ತು ಬಿ.ಸಿ.ರೋಡ್ ನಿವಾಸಿ ಶಾಫಿ ಎಂಬುವರು ಸಾವಯವ ಗೊಬ್ಬರ ತಯಾರಿಸಿ ಸೈ ಎನಿಸಿಕೊಂಡವರು. ಇನೋಳಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 2015ರಲ್ಲಿ ಸಫ್ವಾನ್ ಮತ್ತು ಮಾಝಿನ್ ಮೆಕಾನಿಕಲ್ ಇಂಜಿನಿಯರಿಂಗ್ ಹಾಗೂ ಶಾಫಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆಸ್ಪತ್ರೆಗಳಿಗೆ ಪರಿಕರ ಪೂರೈಕೆ ಸಂಸ್ಥೆ ಹೊಂದಿರುವ ಇವರು ಅದನ್ನೇ ನಂಬಿಕೊಂಡು ಹವಾನಿಯಂತ್ರಿತ ಕೊಠಡಿಯಲ್ಲಿ ಕೂರದೆ ಹಸಿತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಮೂಲಕ ಸ್ಥಳಿಯಾಡಳಿತಗಳಿಗೆ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕೈ ಜೋಡಿಸಿದ್ದಾರೆ.

    ತರಕಾರಿ ಬೆಳೆಗೆ ಬಳಕೆ: ಪಚ್ಚನಾಡಿಯಲ್ಲಿ ತ್ಯಾಜ್ಯ ದುರಂತ ಸಂಭವಿಸಿದ ಬಳಿಕ ಹಸಿತ್ಯಾಜ್ಯ ನಿರ್ವಹಣೆ ಬಗ್ಗೆ ಯೋಚಿಸಿದ್ದಾರೆ. ಈ ಬಗ್ಗೆ ಅಧ್ಯಯನ ಆರಂಭಿಸಿ ಬೆಂಗಳೂರು ಸಹಿತ ಇತರ ಭಾಗದ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಲ್ಲದೆ, ತಾವೇ ಹಸಿತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುವ ವಿಧಾನ ಕಂಡುಕೊಳ್ಳುವ ಬಗ್ಗೆ ಆಸಕ್ತಿ ತೋರಿದರು. ಕಳೆದ ವರ್ಷ ಉಳ್ಳಾಲ ನಗರಸಭೆಯಲ್ಲೇ ಹಸಿತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಯಶಸ್ವಿಯಾಗಿದ್ದು, ಆ ಗೊಬ್ಬರವನ್ನು ನಗರಸಭೆ ಆವರಣದಲ್ಲಿ ತರಕಾರಿ ಬೆಳೆಗೆ ಬಳಸಲಾಗುತ್ತಿದೆ. ಎರಡನೇ ಪ್ರಯತ್ನವಾಗಿ ಸೋಮೇಶ್ವರ ಪುರಸಭೆ ವಾರ್ಡೊಂದರಲ್ಲಿ ಹಸಿತ್ಯಾಜ್ಯ ಬಳಸಿ ಗೊಬ್ಬರ ತಯಾರಿಸಲಾಗುತ್ತಿದ್ದು, ಅದನ್ನೂ ಪುರಸಭೆ ಆವರಣದಲ್ಲಿ ತರಕಾರಿ ಬೆಳೆಗೆ ಬಳಸಲಾಗುತ್ತಿದೆ.

    ಮೂರನೇ ಪ್ರಯತ್ನವಾಗಿ ಎರಡು ತಿಂಗಳ ಹಿಂದೆ ಬಂಟ್ವಾಳದಲ್ಲಿ ಗೊಬ್ಬರ ತಯಾರಿಸಲಾಗಿದ್ದು, ಸ್ಥಳೀಯ ಕೃಷಿಕರಿಂದ ಬೇಡಿಕೆ ಬಂದಿದೆ. ಇದೀಗ ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಕುದ್ರು ಸಣ್ಣ ಜಮೀನಿನಲ್ಲಿ ಸಾವಯವ ಗೊಬ್ಬರ ತಯಾರಿ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಲ್ಲಿ ತಯಾರಾಗುವ ಗೊಬ್ಬರ ಆರಂಭದ ದಿನಗಳಲ್ಲಿ ಸ್ಥಳೀಯ ಕೃಷಿಕರಿಗೆ ಉಚಿತವಾಗಿ ನೀಡುವುದು ನಗರಸಭೆಯ ಉದ್ದೇಶ. ಈವರೆಗೆ ಇವರು ಯಾವುದೇ ಪ್ರತಿಫಲ ಇಲ್ಲದೆ ಸೇವೆ ನೀಡಿದ್ದು, ಮುಂದಕ್ಕೆ ಇದನ್ನೇ ಮೂಲವಾಗಿಸಿಕೊಂಡು ಹಸಿತ್ಯಾಜ್ಯದ ಗೊಬ್ಬರ ಮಾರಾಟದಿಂದ ಆದಾಯ ಗಳಿಸಲು ಯೋಚಿಸಿದ್ದಾರೆ.

    ಒಣಕಸ ಒಪ್ಪಂದ ಪ್ರಗತಿಯಲ್ಲಿ: ಹಸಿತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿದಂತೆ ಒಣಕಸ ವಿಲೇವಾರಿ ನಿಟ್ಟಿನಲ್ಲಿ ಕಂಪನಿಯೊಂದರ ಜತೆ ಒಪ್ಪಂದಕ್ಕೆ ಮುಂದಾಗಿದ್ದಾರೆ. ಗುಜರಿಗೆ ಹೋಗದ ವಸ್ತುಗಳನ್ನು ಬಳಸುವ ಸಂಸ್ಥೆ ಜತೆ ಒಪ್ಪಂದ ನಡೆಸುತ್ತಿದ್ದಾರೆ. ಅದಲ್ಲದೆ ಸ್ವಚ್ಛತೆಗೆ ಕಂಟಕವಾಗಿರುವ ಡಯಾಪರ್ಸ್ ವಿಲೇವಾರಿ ನಿಟ್ಟಿನಲ್ಲೂ ಸಂಸ್ಥೆಯೊಂದರ ಜತೆ ಒಪ್ಪಂದ ನಡೆಸಿ ಒಂದೆರೆಡು ತಿಂಗಳಲ್ಲಿ ಕಾರ್ಯರೂಪಕ್ಕೆ ತರುವ ಯೋಜನೆ ರೂಪಿಸಿದ್ದಾರೆ. ಇದರೊಂದಿಗೆ ವಿವಿಧ ಕಡೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲೂ ಮುಂದಾಗಿದ್ದಾರೆ.

    ಸಂಪನ್ಮೂಲ ವ್ಯಕ್ತಿಗಳನ್ನು ಭೇಟಿಯಾಗಿ ಮಾಹಿತಿ ಮತ್ತು ತರಬೇತಿ ಪಡೆದು ಉಳ್ಳಾಲ, ಸೋಮೇಶ್ವರ ಮತ್ತು ಬಂಟ್ವಾಳದಲ್ಲಿ ಸಾವಯವ ಗೊಬ್ಬರ ತಯಾರಿಸುತ್ತಿದ್ದೇವೆ. ಇಲ್ಲಿನ ಅಧಿಕಾರಿಗಳು ಪ್ರೋತ್ಸಾಹ, ಸಹಕಾರ ನೀಡಿದ್ದಾರೆ. ಒಣಕಸ ನಿರ್ವಹಣೆಗಾಗಿ ಕಂಪನಿಯೊಂದರ ಜತೆ ಮಾತುಕತೆ ನಡೆಸಲಾಗುತ್ತಿದೆ.

    ಸಫ್ವಾನ್ ಉಳ್ಳಾಲ್, ಇಂಜಿನಿಯರ್

    ನಗರ ಪ್ರದೇಶದಲ್ಲಿ ಸಂಗ್ರಹವಾಗುವ ಹಸಿತ್ಯಾಜ್ಯದಿಂದಲೇ ಸಾವಯವ ಗೊಬ್ಬರ ತಯಾರಿಸುವ ಭವಿಷ್ಯದಲ್ಲಿ ಸುಂದರ, ಸುಸ್ಥಿರ ನಗರವನ್ನಾಗಿಸಲು ಉತ್ತಮ ಅವಕಾಶ ಇದೆ. ಆದರೆ ಆರಂಭದ ದಿನಗಳಲ್ಲಿ ಈ ಕಾರ್ಯದಲ್ಲಿ ಕಠಿಣ ಪರಿಶ್ರಮವೂ ಅಗತ್ಯ.

    ಮಾಝಿನ್ ಉಳ್ಳಾಲ್, ಇಂಜಿನಿಯರ್

    ಪಚ್ಚನಾಡಿಯ ಮಂದಾರದಲ್ಲಿ ತ್ಯಾಜ್ಯ ನಿರ್ವಹಣೆ ವೈಫಲ್ಯದಿಂದ ಉಂಟಾದ ದುರಂತಕ್ಕೆ ಪರಿಹಾರ ಕಂಡುಕೊಳ್ಳಲು ಸಾವಯವ ಗೊಬ್ಬರ ತಯಾರಿ ಉತ್ತಮ ವಿಧಾನವಾಗಿದೆ. ಇದನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ಹಸಿತ್ಯಾಜ್ಯ ಸಮಸ್ಯೆ ನಿವಾರಣೆ ಸಾಧ್ಯ.

    ಶಾಫಿ ಬಿ.ಸಿ.ರೋಡು, ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts