More

    ಫಾಸ್ಟಾೃಗ್ ಕಡ್ಡಾಯ, ಸಂಚಾರ ಹೀನಾಯ

    ಹಿರೇಬಾಗೇವಾಡಿ: ಸೋಮವಾರ ಮಧ್ಯರಾತ್ರಿಯಿಂದ ಎಲ್ಲ ಟೋಲ್ ನಾಕಾಗಳಲ್ಲಿ ಫಾಸ್ಟಾೃಗ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ಇಲ್ಲಿನ ಸುಂಕ ವಸೂಲಾತಿ ಕೇಂದ್ರದಲ್ಲಿ ಮಂಗಳವಾರ ವಾಹನ ಸವಾರರು ಪರದಾಡುವಂತಾಗಿದೆ.

    ಹಿರೇಬಾಗೇವಾಡಿ ಸುಂಕ ವಸೂಲಿ ಕೇಂದ್ರ ದುಬಾರಿ ಕೇಂದ್ರ ಎಂಬ ಅಪಖ್ಯಾತಿ ಹೊಂದಿದೆ. ಫಾಸ್ಟಾೃಗ್ ಸೌಲಭ್ಯ ಹೊಂದದ ವಾಹನ ಹಾಗೂ ಲಾರಿ ಚಾಲಕರಿಗೆ ಮುಂದೆ ಸಾಗಲು ಬಿಡದ ಕಾರಣ ಹಾಗೂ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ
    ಟೋಲ್ ಅಧಿಕಾರಿಗಳ ವಿರುದ್ಧ ವಾಹನ ಸವಾರರು ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು.

    ಲಾಗಿನ್ ಸಮಸ್ಯೆ: ಅಸಮಾಧಾನದ ನಡುವೆಯೇ ವಾಹನದ ಮಾಲೀಕರು ಕೊನೆಗಳಿಗೆಯಲ್ಲಿ ಟೋಲ್ ಬಳಿಯೇ ಇರುವ ಕೇಂದ್ರಕ್ಕೆ ತರಾತುರಿಯಲ್ಲಿ ತೆರಳಿ ವಾಹನಗಳಿಗೆ ಫಾಸ್ಟಾೃಗ್ ವ್ಯವಸ್ಥೆ ಮಾಡಿಕೊಂಡರು. ಆದರೆ, ಸುಂಕವಸೂಲಾತಿ ಕೇಂದ್ರದ ಬಳಿ ಬಂದರೆ, ಸರ್ವರ್ ಲಾಗಿನ್ ಆಗದ ಕಾರಣ ಹಲವು ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

    ವಾಪಾಸ್ ತೆರಳಿದ ಕ್ಯಾಬ್: ಧಾರವಾಡ ಕಡೆಯಿಂದ ಬೆಳಗಾವಿ ಕಡೆ ಬರುತ್ತಿದ್ದ ಕ್ಯಾಬ್ ಚಾಲಕ ಫಾಸ್ಟಾೃಗ್ ಸೌಲಭ್ಯವಿಲ್ಲದ ಕಾರಣ ಹಾಗೂ ದುಪ್ಪಟ್ಟು ಹಣ ನೀಡದೆ ವಾಹನದಲ್ಲಿದ್ದ ಪ್ರಯಾಣಿಕರನ್ನು ಟೋಲ್‌ಗೇಟ್ ಬಳಿಯೇ ಇಳಿಸಿ ಮರಳಿ ಧಾರವಾಡಕ್ಕೆ ತೆರಳಿದ. ಇದರಿಂದ ಕ್ಯಾಬ್‌ನಲ್ಲಿದ್ದ ಪ್ರಯಾಣಿಕರು ತಮ್ಮ ಗ್ರಾಮಗಳತ್ತ ನಡೆದೇ ಸಾಗುವಂತಾಯಿತು.

    ಅಧಿಕಾರಿಗಳಿಗೆ ಹಿಡಿಶಾಪ: ಹಿರೇಬಾಗೇವಾಡಿ ಟೋಲ್ ಕೇಂದ್ರದ ಬಳಿ ಫಾಸ್ಟಾೃಗ್ ಸೌಲಭ್ಯ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ವಾಹನಗಳು ಗಂಟೆಗೂ ಅಧಿಕ ಕಾಲ ಟೋಲ್ ಗೇಟ್ ಬಳಿ ನಿಲ್ಲುವಂತಾಯಿತು. ಬೆಳಗಾವಿಯಿಂದ ಪ್ರಯಾಣಿಕರನ್ನು ತುಂಬಿಕೊಂಡು ಕಡೂರಿಗೆ ಮದುವೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

    ಸಕಾಲಕ್ಕೆ ಮದುವೆಗೆ ತೆರಳಲು ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಸೂಕ್ತ ತಯಾರಿಯಿಲ್ಲದೆ ಜಾರಿಗೆ ತಂದ ಫಾಸ್ಟ್ಯಾಗ್ ನಿಯಮ ಹಲವಾರು ಅವಾಂತರಗಳಿಗೆ ಕಾರಣವಾಗಿದ್ದಲ್ಲದೆ, ವಾಹನ ಚಾಲಕರು, ಪ್ರಯಾಣಿಕರ ಅಕ್ರೋಶಕ್ಕೆ ಕಾರಣವಾಗಿದೆ.

    ಸಮಸ್ಯೆ ತೋಡಿಕೊಂಡ ಲಾರಿ ಚಾಲಕ: ಕಬ್ಬು ತುಂಬಿಕೊಂಡು ಸಕ್ಕರೆ ಕಾರ್ಖಾನೆಗೆ ತೆರಳುತ್ತಿದ್ದ ಟ್ರಕ್ ಚಾಲಕರೊಬ್ಬರಿಗೆ ಇಲ್ಲಿನ ಟೋಲ್ ಪ್ಲಾಜಾದಲ್ಲಿ ಫಾಸ್ಟ್ಯಾಗ್ ಅಳವಡಿಸದ ಹಿನ್ನೆಲೆಯಲ್ಲಿ ದುಪ್ಪಟ್ಟು ಹಣ ತುಂಬ ಬೇಕಾದ ಪರಿಸ್ಥಿತಿ ಬಂದೊದಗಿತ್ತು. ಈ ವೇಳೆ ‘ವಿಜಯವಾಣಿ’ ಅವರನ್ನು ಮಾತನಾಡಿಸಿದಾಗ, ‘ನಮಗೆ ಟ್ರಕ್ ಮಾಲೀಕರು ಟೋಲ್‌ಗೋಸ್ಕರ ಅಷ್ಟೇ ಹಣ ನೀಡಿರುತ್ತಾರೆ. ಈಗ ದುಪ್ಪಟ್ಟು ಹಣ ನೀಡಿದರೆ ನಾವು ಮುಂದಿನ ಎಲ್ಲ ಟೋಲ್ ದಾಟಿ ಕಾರ್ಖಾನೆಗೆ ಕಬ್ಬು ಸಾಗಿಸುವುದಾದರೂ ಹೇಗೆ? ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಿಕೊಳ್ಳಬೇಕು ಎಂದು
    ಅಳಲು ತೋಡಿಕೊಂಡರು.

    ಹಿರೇಬಾಗೇವಾಡಿ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿರುವ ವೈಟ್ ಬೋರ್ಡ್ ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಂಡರೂ ಎಂದಿನಂತೆ ಹಿಂದಿನ ನಿಯಮದ ಪ್ರಕಾರ 275 ರೂ. ಮಾಸಿಕ ಪಾಸ್ ಮೂಲಕ ಟೋಲ್ ದಾಟಿ ಹೋಗಬಹುದು. ಇನ್ನು ಸ್ಥಳೀಯ ಹಿರೇಬಾಗೇವಾಡಿ ಗ್ರಾಮದ ವೈಟ್‌ಬೋರ್ಡ್ ವಾಹನಗಳಿಗೆ ಸದ್ಯದ ಮಟ್ಟಿಗೆ ಹಿಂದಿನ ನಿಯಮದ ಪ್ರಕಾರ ಉಚಿತವಾಗಿ ಟೋಲ್ ಪಾಸ್ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ.
    | ಸುಂದರ ಮ್ಯಾಗೇರಿ, ಟೋಲ್ ಪ್ಲಾಜಾ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts