More

    ಬಾಕಿ ಕೊಡುವವರೆಗೂ ಕಬ್ಬು ಸಾಗಿಸುವುದಿಲ್ಲ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ರೈತರ ಎಚ್ಚರಿಕೆ

    ಹಳಿಯಾಳ: ಕಳೆದ ವರ್ಷದ ಪ್ರತಿ ಟನ್ ಕಬ್ಬಿನ ಹೆಚ್ಚುವರಿ 150 ರೂ. ಹಾಗೂ 2016-17ನೇ ಸಾಲಿನ ಪ್ರತಿ ಟನ್ ಕಬ್ಬಿನ ಹೆಚ್ಚುವರಿ 305 ರೂ. ಸೇರಿ ಒಟ್ಟು 455 ರೂ. ಗಳನ್ನು ರೈತರ ಖಾತೆಗೆ ಜಮೆ ಮಾಡದಿದ್ದಲ್ಲಿ ಹಳಿಯಾಳದ ಹುಲ್ಲಟ್ಟಿಯಲ್ಲಿನ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ರೈತರು ಈ ವರ್ಷ ಕಬ್ಬು ಸಾಗಿಸುವುದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಮತ್ತು ಹಳಿಯಾಳ ಘಟಕ ಘೊಷಿಸಿದೆ.

    ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಕಾರ್ಯ ವ್ಯಾಪ್ತಿಯ ಹಳಿಯಾಳ, ಕಲಘಟಗಿ, ದಾಂಡೇಲಿ, ಜೊಯಿಡಾ, ಅಳ್ನಾವರ, ಧಾರವಾಡ ಹಾಗೂ ಮುಂಡಗೋಡ ತಾಲೂಕುಗಳ ಕಬ್ಬು ಬೆಳೆಗಾರರ ಸಭೆಯನ್ನು ಪಟ್ಟಣದ ಮರಾಠಾ ಭವನದಲ್ಲಿ ಗುರುವಾರ ಕರೆಯಲಾಗಿತ್ತು. ಸಭೆಯಲ್ಲಿ ನೂರಾರು ರೈತರು ತಮ್ಮ ಅಭಿಪ್ರಾಯ ಮಂಡಿಸಿದರು.

    ಕಳೆದ ವರ್ಷ ಕಬ್ಬಿನ ಬಾಕಿ ಹಣ ರೈತರಿಗೆ ಸಂದಾಯ ಮಾಡಬೇಕು. ಕಟಾವು ಮತ್ತು ಸಾಗಾಣಿಕೆ (ಎಚ್​ಟಿ) ದರ ಪರಿಷ್ಕರಣೆ ಹಾಗೂ ಆ ಸಾಲಿನ ಕಬ್ಬಿಗೆ ದರ ನಿಗದಿ ಪಡಿಸುವಂತೆ ಆಗ್ರಹಿಸಿ ಸುಮಾರು 2 ತಿಂಗಳು ಅಹೋರಾತ್ರಿ ಹೋರಾಟ, ಉಪವಾಸ ಸತ್ಯಾಗ್ರಹ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿತ್ತು. ಆಗ ಕಾರವಾರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೊಜಿಸಿದ್ದ ಸಕ್ಕರೆ ಆಯುಕ್ತರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 150 ರೂ. ಹೆಚ್ಚುವರಿ ಹಣ ನೀಡುವಂತೆ ಹಳಿಯಾಳದ ಸಕ್ಕರೆ ಕಾರ್ಖಾನೆಗೆ ಆದೇಶಿಸಲಾಗಿತ್ತು. ಆದರೆ, ಆ ಹಣವನ್ನು ಇದುವರೆಗೂ ರೈತರಿಗೆ ನೀಡದಿರುವುದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

    ಅಸಮಾಧಾನ: ಕಳೆದ ವರ್ಷ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಲಾಯಿತು. ಅಂದು ಹತ್ತಾರು ಸುಳ್ಳು ಪ್ರಕರಣಗಳನ್ನು ರೈತರ ಮೇಲೆ ಹಾಕಲಾಗಿದ್ದು, ಇಂದು ಈ ಪ್ರಕರಣಗಳಿಗಾಗಿ ನ್ಯಾಯಾಲಯದಲ್ಲಿ ಬಹುಪಾಲು ಸಮಯ ವ್ಯರ್ಥವಾಗುತ್ತಿದೆ ಎಂದು ರೈತರು ಅಸಮಾಧಾನ ಹೊರಹಾಕಿದರು.

    ಸಭೆಯ ನಿರ್ಣಯಗಳನ್ನು ಕಬ್ಬು ಬೆಳೆಗಾರರ ಸಂಘದ ಪ್ರಮುಖರಾದ ಎನ್​ಎಸ್ ಜಿವೋಜಿ ಮಂಡಿಸಿದರು. ಪ್ರಮುಖರಾದ ಸಂದೀಪಕುಮಾರ ಬೋಬಾಟಿ, ಶಂಕರ ಕಾಜಗಾರ, ಎಂ.ವಿ. ಘಾಡಿ, ಸುರೇಶ ಶಿವಣ್ಣವರ, ಅಶೋಕ ಮೇಟಿ, ಕಲಘಟಗಿಯ ವಸಂತ ಡಾಕಪ್ಪನವರ, ನಿಜಗುಣಿ ಕೆಲಗೇರಿ, ಅಳ್ನಾವರದ ಭರತ ಪಾಟೀಲ್, ರಾಮದಾಸ ಬೆಳಗಾಂವಕರ, ಸಾತುರಿ ಗೊಡಿಮನಿ ಇತರರು ಇದ್ದರು.

    ನಿರ್ಣಯಗಳು

    1) ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೆಪ್ಟೆಂಬರ್​ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಿಳಿಸಿದಂತೆ ಸಕ್ಕರೆ ಕಾರ್ಖಾನೆಯವರು ತೂಕ ಮತ್ತು ಅಳತೆ ಯಂತ್ರವನ್ನು ಹೊರಗೆ ಹಾಕಬೇಕು.

    2) ರಾಜ್ಯದಲ್ಲಿಯೇ ಅತೀ ಹೆಚ್ಚು ಕಟಾವು ಮತ್ತು ಸಾಗಾಣೆ (ಎಚ್​ಟಿ) 893 ರೂ. ದರ ಪಡೆಯುತ್ತಿದ್ದು ಇದನ್ನು ಕಾರ್ಖಾನೆ ನಿಲ್ಲಿಸಬೇಕು ಹಾಗೂ ಸರ್ಕಾರದ ನಿಯಮದಂತೆ ದರ ಆಕರಣೆ ಮಾಡಬೇಕು.

    3) ಕಳೆದ ವರ್ಷದ ಹೆಚ್ಚುವರಿ 150 ರೂ. ಹಾಗೂ 2016-17ನೇ ಸಾಲಿನ 305 ರೂ. ಬಾಕಿ ಹಣ ರೈತರಿಗೆ ಕೂಡಲೇ ಜಮೆ ಮಾಡಬೇಕು.

    4) ರೈತರ ಆದ್ಯತಾ ಪಟ್ಟಿ ಪ್ರಕಟಿಸಬೇಕು. ರೈತರಿಂದ ಪಡೆಯುವ ಹೆಚ್ಚುವರಿ ಹಣ ಲಗಾನಿಗೆ ಲಗಾಮು ಹಾಕಬೇಕು.

    5) ಪ್ರಸ್ತುತ ಸಾಲಿನ ಟನ್ ಕಬ್ಬಿಗೆ 3500 ರೂ. ನಿಗದಿಪಡಿಸಲಿ. ರೈತರು ಹಾಗೂ ಕಾರ್ಖಾನೆಯವರ ದ್ವೀಪಕ್ಷಿಯ ಒಪ್ಪಂದ ಆದ ಬಳಿಕವೇ ಪ್ರಸ್ತುತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆ ಚಾಲನೆ ನೀಡಲಿ.

    6) ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೂ ಯಾವುದೇ ಕಾರಣಕ್ಕೂ ಕಾರ್ಖಾನೆಗೆ ಹಳಿಯಾಳದ ರೈತರು ಕಬ್ಬು ಸಾಗಾಣೆ ಮಾಡುವುದಿಲ್ಲ ಎಂದು ಒಕ್ಕೊರಲಿನಿಂದ ನಿರ್ಣಯ ಕೈಗೊಳ್ಳಲಾಯಿತು.

    ಕಾಳಿ ನೀರಿಗಾಗಿ ಹೋರಾಟಕ್ಕೆ ತೀರ್ಮಾನ

    ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿಯ ಕಾಳಿ ನದಿ ನೀರನ್ನು ಬೇರೆ ಜಿಲ್ಲೆಗೆ ನೀಡಲಾಗಿದೆ. ಆದರೆ, ಹಳಿಯಾಳಕ್ಕೆ ನೀರು ದೊರೆಯುತ್ತಿಲ್ಲ, ಕಾಳಿ ನದಿ ನೀರಾವರಿ ಯೋಜನೆ ಕಳೆದ 6 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ಬಾರಿ ಬರಗಾಲದಿಂದ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಪ್ರಸ್ತುತ ಕಾಳಿನ ದಿ ನೀರಿಗಾಗಿಯೂ ಹೋರಾಟ ಆರಂಭಿಸಲು ಸಭೆಯಲ್ಲಿ ತೀರ್ವನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts