More

    ಬಾರದ ಕೃಷಿ ಹೊಂಡ ಸಹಾಯಧನ

    ಮಂಜುನಾಥ ಅಂಗಡಿ ಧಾರವಾಡ

    ಕೃಷಿ ಹೊಂಡ ನಿರ್ಮಾಣ ರೈತರಿಗೆ ವರದಾನ. ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ನಿರ್ವಿುಸಿಕೊಂಡು ನೀರು ಸಂಗ್ರಹಿಸಿ ಆಪತ್ಕಾಲದಲ್ಲಿ ನೀರಾವರಿ ಮಾಡಿಕೊಳ್ಳುವ ಸದುದ್ದೇಶದಿಂದ ಸರ್ಕಾರ ಕೃಷಿ ಹೊಂಡ ನಿರ್ವಣಕ್ಕೆ ಒತ್ತು ನೀಡಿತ್ತು. ಆದರೆ, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ವಿುಸಿಕೊಂಡಿರುವ ರೈತರು ಸಹಾಯಧನಕ್ಕಾಗಿ ಪರದಾಡುವಂತಾಗಿದೆ.

    ಕೃಷಿ ಇಲಾಖೆ ಜಿಲ್ಲೆಯಲ್ಲಿ 2018- 19ನೇ ಸಾಲಿನಲ್ಲಿ 1,810 ಕೃಷಿ ಹೊಂಡಗಳ ನಿರ್ವಣದ ಗುರಿ ಹೊಂದಿತ್ತು. ಸರ್ಕಾರದ ಸಹಾಯಧನದೊಂದಿಗೆ ನೀರ ನೆಮ್ಮದಿ ತಂದುಕೊಡುವ ಯೋಜನೆಗೆ ರೈತರು ಮುಗಿಬಿದ್ದು ಹೊಂಡಗಳನ್ನು ನಿರ್ವಿುಸಿಕೊಂಡರು. ಆ ವರ್ಷ ಜಿಲ್ಲೆಯಲ್ಲಿ ಗುರಿ ಮೀರಿ 2,111 ಕೃಷಿ ಹೊಂಡಗಳು ನಿರ್ವಣವಾಗಿವೆ. 2019- 20ರಲ್ಲಿ 1,053 ಕೃಷಿ ಹೊಂಡ ನಿರ್ವಣದ ಗುರಿ ಇತ್ತು. ಆದರೆ, ಹಲವು ವರ್ಷಗಳಿಂದ ಬಾಕಿ ಇದ್ದ ಗುರಿಯನ್ನೇ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಗೆ 6.61 ಕೋಟಿ ರೂ. ಸಹಾಯಧನ ಬರಬೇಕಿದ್ದು, ಕೃಷಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಈಡೇರುತ್ತಿಲ್ಲ ಉದ್ದೇಶ: ಮಳೆ ನೀರು ಸಂಗ್ರಹಣೆ ಮತ್ತು ಮರುಬಳಕೆಗೆ ಆದ್ಯತೆ ನೀಡಿ ಕೃಷಿ ಭಾಗ್ಯ ಯೋಜನೆಯನ್ನು 2014- 15ನೇ ಸಾಲಿನಿಂದ ಜಾರಿಗೆ ತರಲಾಗಿದೆ. 2017-18ರಿಂದ ಯೋಜನೆಯ ಸೌಲಭ್ಯವನ್ನು ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ಎಲ್ಲ ಜಿಲ್ಲೆಗಳ ಎಲ್ಲ ತಾಲೂಕುಗಳಿಗೆ ವಿಸ್ತರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು, ಮಳೆ ನೀರಿನ ಸಮರ್ಪಕ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮಪಡಿಸುವುದು ಯೋಜನೆಯ ಉದ್ದೇಶ. ಆದರೆ, ಕೈಯಲ್ಲಿನ ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ವಿುಸಿಕೊಂಡ ರೈತರಿಗೆ ಸಹಾಯಧನ ಕೈಸೇರಲು ವಿಳಂಬವಾಗುತ್ತಿದೆ.

    ನಿರ್ದಿಷ್ಟ ಅಳತೆಯ ಕೃಷಿ ಹೊಂಡ ನಿರ್ವಿುಸಿಕೊಳ್ಳುವ ಸಾಮಾನ್ಯ ರೈತರಿಗೆ ಸರ್ಕಾರ ಶೇ. 80 ಹಾಗೂ ಪ.ಜಾ., ಪ.ಪಂ. ರೈತರಿಗೆ ಶೇ. 90ರಷ್ಟು ಸಹಾಯಧನ ನೀಡುತ್ತದೆ. ಮಳೆಯ ಅನಿಶ್ಚಿತತೆ, ಬರಗಾಲದಿಂದಾಗಿ ರೈತರು ಕೃಷಿ ಹೊಂಡ ನಿರ್ವಣಕ್ಕೆ ಆದ್ಯತೆ ನೀಡಿದ್ದಾರೆ. ಅದಕ್ಕಾಗಿ ಹಣ ಖರ್ಚು ಮಾಡಿದವರು ಸಹಾಯಧನಕ್ಕಾಗಿ ಎದುರು ನೋಡುತ್ತಿದ್ದಾರೆ.

    ಕೊಳವೆಬಾವಿಗಿಂತ ಉಪಯುಕ್ತ: ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ರೈತರು ಕೊಳವೆ ಬಾವಿಗಳ ಮೊರೆ ಹೋಗುತ್ತಾರೆ. ಅಂತರ್ಜಲ ಮಟ್ಟ ದಿನೇದಿನೇ ಕುಸಿಯುತ್ತಿರುವ ಸಂದರ್ಭದಲ್ಲಿ ಸಾವಿರ ಅಡಿ ಆಳದವರೆಗೂ ಕೊಳವೆ ಬಾವಿ ಕೊರೆಯಲು ಅಂದಾಜು 2 ಲಕ್ಷ ರೂ.ವರೆಗೆ ಖರ್ಚು ಮಾಡುತ್ತಾರೆ. ಕೊರೆಸಿದ ಕೊಳವೆ ಬಾವಿ ವಿಫಲವಾದರೆ ಅಥವಾ ಕೆಲ ವರ್ಷಗಳಲ್ಲಿ ಬತ್ತಿ ಹೋದರೆ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಇದನ್ನು ಮನಗಂಡು, ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಕೃಷಿ ಭಾಗ್ಯ ಯೋಜನೆಯಡಿ ಹೊಂಡಗಳ ನಿರ್ವಣಕ್ಕೆ ಆದ್ಯತೆ ನೀಡಿದ್ದರು. ಹೊಲದಲ್ಲಿಯ ಹೊಂಡಗಳಲ್ಲಿ ಸಂಗ್ರಹಗೊಂಡ ನೀರಿನಿಂದ ರೈತರಿಗೆ ಅನುಕೂಲವಾಗಿದೆ.

    ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುರಿ ಮೀರಿ ಕೃಷಿ ಹೊಂಡಗಳನ್ನು ನಿರ್ವಿುಸಿಕೊಂಡಿದ್ದರಿಂದ ಸಹಾಯಧನ ಬಾಕಿ ಉಳಿದಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಂತಹಂತವಾಗಿ ಅನುದಾನ ಬಿಡುಗಡೆಯಾಗಲಿದೆ.

    | ರಾಜಶೇಖರ ಬಿಜಾಪುರ, ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts