More

    ಬೀದಿಗಿಳಿದು ರೈತರ ಹೋರಾಟ, ರಸ್ತೆ ತಡೆ

    ಮುಧೋಳ: ಬರದಿಂದ ನದಿ ಪಾತ್ರದ ಗ್ರಾಮಗಳ ರೈತರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಕೂಡಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಬೇಕೆಂದು ಶನಿವಾರ ತಾಲೂಕಿನ ರೈತರು ಸಮೀಪದ ಘಟಪ್ರಭಾ ನದಿ ಪ್ರದೇಶಕ್ಕೆ ತೆರಳಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸಿದರು.

    ಎರಡು ದಿನಗಳ ಮುಂಚೆ ನಗರದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದ ರೈತರು ಕೂಡಲೇ ನದಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

    ರೈತರ ಮನವಿಗೆ ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ರೊಚ್ಚಿಗೆದ್ದ ರೈತರು ಘಟಪ್ರಭಾ ನದಿ ಪ್ರದೇಶಕ್ಕೆ ತೆರಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಬಳಿಕ ರಾಣಾ ಪ್ರತಾಪಸಿಂಹ ವೃತ್ತಕ್ಕೆ ಆಗಮಿಸಿದ ರೈತರು ಬೆಳಗಾವಿ ಜಮಖಂಡಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಹಿಡಕಲ್ ಜಲಾಶಯದಲ್ಲಿ 31 ಟಿಎಂಸಿ ನೀರಿದ್ದರೂ ನಮ್ಮ ಪಾಲಿನ ನೀರನ್ನು ಬಿಡದೆ ಸರ್ಕಾರ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ. ಬರದಿಂದ ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕೃಷಿ ಬೆಳೆಗಳು ನೀರಿಲ್ಲದೆ ಬಾಡುತ್ತಿವೆ. ಇನ್ನಾದರೂ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತು ಘಟಪ್ರಭಾ ನದಿಗೆ ನೀರು ಹರಿಸಬೇಕೆಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಸೋರಗಾವಿ, ಮುಖಂಡ ಸಿಗೂರೆಪ್ಪ ಅಕ್ಕಿಮರಡಿ ಒತ್ತಾಯಿಸಿದರು.

    ಬಳಿಕ ಸ್ಥಳಕ್ಕೆ ತಹಸೀಲ್ದಾರ್ ವಿನೋದ ಹತ್ತಳ್ಳಿ ಹತ್ತಳ್ಳಿ ಭೇಟಿ ನೀಡಿ, ರೈತರೊಂದಿಗೆ ಸಮಾಲೋಚನೆ ನಡೆಸಿ, ಫೆ.13 ರಂದು ನೀರಾವರಿ ಹಾಗೂ ಮೇಲಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ನೀರು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮನವರಿಕೆ ಮಾಡಿದರೂ ಒಪ್ಪದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಹೋರಾಟ ಕೈಬಿಡಲ್ಲ ಎಂದು ಪಟ್ಟುಹಿಡಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ದೂರವಾಣಿಯಲ್ಲಿ ರೈತರೊಂದಿಗೆ ಮಾತನಾಡಿ, ಫೆ. 16ರಂದು ನೀರು ಹರಿಸುವುದಾಗಿ ವಾಗ್ದಾನ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದುಕೊಂಡರು.

    ಮುಖಂಡರಾದ ದುಂಡಪ್ಪ ಯರಗಟ್ಟಿ, ಮುತ್ತಪ್ಪ ಹೊಸಕೋಟಿ, ಕಲ್ಮೇಶ ಹನಗೋಜಿ, ಹಣಮಂತ ಅಡವಿ, ತಿಮ್ಮಣ್ಣ ಬಟಕುರ್ಕಿ, ರುದ್ರೇಶ ಅಡವಿ, ತಿಮ್ಮಣ್ಣ ಬಟಕುರ್ಕಿ, ಬಾಬು ಗೌಡನ್ನವರ, ವೆಂಕಣ್ಣ ನ್ಯಾಮಗೌಡ, ಬಸವರಾಜ ಪರಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts