More

    ಇಂದು ಕೇಂದ್ರ-ರೈತರ ನಿರ್ಣಾಯಕ ಸಭೆ; 8ರಂದು ಭಾರತ ಬಂದ್​ಗೆ ಕರೆ ನೀಡಿದ ರೈತ ಸಂಘಟನೆಗಳು

    ನವದೆಹಲಿ: ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಮುಖಂಡರ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ಮೂರನೇ ಸುತ್ತಿನ ಮಾತುಕತೆ ನಡೆಯಲಿದೆ. ಹೊಸ ಕೃಷಿ ಕಾನೂನುಗಳ ತಿದ್ದುಪಡಿ ಕುರಿತಂತೆ ರೈತರು ನೀಡಿರುವ ಕೆಲವು ಸಲಹೆಗಳನ್ನು ಪರಿಗಣಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಹೇಳಿದ್ದು, ಈ ಸಭೆಯಲ್ಲಿ ಬಿಕ್ಕಟ್ಟನ್ನು ಶಮನಗೊಳಿಸುವುದೇ ಎಂಬ ಕುತೂಹಲ ಗರಿಗೆದರಿದೆ.

    ಈ ನಡುವೆ, ಡಿಸೆಂಬರ್ 8ರಂದು ಭಾರತ ಬಂದ್​ಗೆ ಕರೆ ನೀಡಿರುವ ರೈತ ಸಂಘಟನೆಗಳು, ದೇಶಾದ್ಯಂತ ಹೆದ್ದಾರಿ ಟೋಲ್ ಗೇಟ್​ಗಳನ್ನು ಬಂದ್ ಮಾಡುವುದಾಗಿ ತಿಳಿಸಿವೆ. ಪ್ರತಿಭಟನೆ ಭಾಗವಾಗಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿವೆ. ಬಂದ್​ನಲ್ಲಿ ಭಾರೀ ಜನಸ್ತೋಮ ಸೇರಲಿದೆ ಎಂದು ರೈತ ಸಂಘಟನೆಗಳ ಮುಖಂಡ ಹರಿಂದರ್ ಸಿಂಗ್ ಲಖೋವಾಲ್ ಹೇಳಿದ್ದಾರೆ. ಒಂದು ವೇಳೆ ಮಾತುಕತೆ ವಿಫಲಗೊಂಡಲ್ಲಿ ದೆಹಲಿಗೆ ಆಹಾರೋತ್ಪನ್ನಗಳ ಸರಬರಾಜಿಗೆ ಅಡ್ಡಿಪಡಿಸಲಿದ್ದೇವೆ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

    ಸುಪ್ರೀಂಗೆ ಅರ್ಜಿ: ಈ ಬೆಳವಣಿಗೆಗಳ ಮಧ್ಯೆ, ರೈತ ಸಂಘಟನೆಗಳು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವು ದರಿಂದ ಅನಾರೋಗ್ಯಪೀಡಿತರನ್ನು ತುರ್ತಾಗಿ ಅಸ್ಪತ್ರೆಗೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿಭಟನಾನಿರತ ರೈತರನ್ನು ಸ್ಥಳದಿಂದ ತೆರವುಗೊಳಿಸಲು ಆದೇಶಿಸಬೇಕು ಎಂದು ಸುಪ್ರೀಂಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ರೈತರನ್ನು ಸಮಾಧಾನಪಡಿಸಲು ಕೃಷಿ ಸಚಿವರು ಯತ್ನ ಮುಂದುವರಿಸಿದ್ದು, ಕನಿಷ್ಠ ಬೆಂಬಲ ಬೆಲೆ ನೀತಿ ಬಗ್ಗೆ ಕೇಂದ್ರದ ನಿಲುವು ಸ್ಪಷ್ಟವಾಗಿದ್ದು ಚಿಂತೆ ಬೇಕಿಲ್ಲ. ನಾಳಿನ ಸಭೆಯಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ ಎಂಬ ಭರವಸೆ ಹೊರಹಾಕಿದ್ದಾರೆ.

    ವಿಪಕ್ಷಗಳ ಒತ್ತಡ: ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ವಿಪಕ್ಷಗಳೂ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ರೈತರು ರಾಜಧಾನಿಗೆ ತೆರಳದಂತೆ ತಡೆಯದ ಹರಿಯಾಣ ಸರ್ಕಾರ ದೊಡ್ಡ ತಪ್ಪು ಮಾಡಿದೆ ಎಂದು ಹರಿಯಾಣ ವಿಪಕ್ಷ ನಾಯಕ ಬಿ.ಎಸ್. ಹೂಡಾ ಟೀಕಿಸಿದ್ದಾರೆ. ಸರ್ಕಾರ ಕೂಡಲೇ ಹೊಸ ಕೃಷಿ ಕಾಯೆ ಹಿಂಪಡೆಯಬೇಕು ಮತ್ತು ರೈತರಿಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹೊ್ಲೕಟ್ ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನಾ ನಿರತ ರೈತರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

    ಪ್ರಶಸ್ತಿ ವಾಪಸ್: ರೈತರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ಸಿಗದಿದ್ದಲ್ಲಿ ದೊ್ರೕಣಾಚಾರ್ಯ ಪ್ರಶಸ್ತಿ ಹಿಂದಿರುಗಿಸುವುದಾಗಿ ಭಾರತದ ಮಾಜಿ ಬಾಕ್ಸಿಂಗ್ ಕೋಚ್ ಗುರ್ಬಾಕ್ಸ್ ಸಿಂಗ್ ಸಂಧು ಎಚ್ಚರಿಸಿದ್ದಾರೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪದ್ಮವಿಭೂಷಣ ಪುರಸ್ಕಾರವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಮಾಡಿದ್ದರು. 1982ರ ಏಷ್ಯನ್ ಗೇಮ್್ಸ ಚಿನ್ನದ ಪದಕ ಗೆದ್ದ ಕೌರ್ ಸಿಂಗ್, 1986ರ ಏಷ್ಯನ್ ಗೇಮ್ಸ್​ನಲ್ಲಿ ಪದಕ ಗೆದ್ದಿದ್ದ ಜೈಪಾಲ್ ಸಿಂಗ್ ಅರ್ಜುನ ಪ್ರಶಸ್ತಿ ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ.

    ಕಿಸಾನ್ ಸಂಘ ಒತ್ತಾಯ

    ಆರ್​ಎಸ್​ಎಸ್ ಜತೆ ನಂಟು ಹೊಂದಿರುವ ಭಾರತೀಯ ಕಿಸಾನ್ ಸಂಘವೂ (ಬಿಕೆಎಸ್) ಕೇಂದ್ರದ ಮೇಲೆ ಒತ್ತಡ ಹೇರಿದ್ದು, ಖಾಸಗಿ ಖರೀದಿದಾರರೂ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿದರೆ ಅದನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ನೀತಿ ತರಬೇಕು ಎಂದು ಹೇಳಿದೆ. ರೈತರು ಮತ್ತು ಖಾಸಗಿ ಖರೀದಿದಾರರ ನಡುವಿನ ವಿವಾದ ಬಗೆಹರಿಸುವಿಕೆಗೆ ಸ್ಥಳೀಯ ಜಿಲ್ಲಾಧಿಕಾರಿ ಬಳಿ ತೆರಳುವ ಅವಕಾಶ ಹೊಸ ಕಾನೂನಿನಲ್ಲಿದೆ. ಈ ಬದಲು, ವಿಶೇಷ ಕೃಷಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎನ್ನುವುದು ಬಿಕೆಎಸ್ ಅಭಿಪ್ರಾಯವಾಗಿದೆ.

    ಕೆನಡಾ ಪ್ರಧಾನಿ ಹೇಳಿಕೆಗೆ ಆಕ್ಷೇಪ

    ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೊ ನಡೆಗೆ ಸಂಬಂಧಿಸಿದಂತೆ ಭಾರತ, ಕೆನಡಾ ಹೈಕಮಿಷನರನ್ನು ಕರೆಸಿ ಅಸಮಾಧಾನ ಹೊರ ಹಾಕಿದೆ. ನಿಮ್ಮ ನಾಯಕರು ರೈತರ ಆಂದೋಲನದ ಬಗ್ಗೆ ನೀಡಿದ ಹೇಳಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಬೇಕಿಲ್ಲ ಎಂದು ತಿಳಿ ಸಿದೆ. ಇಂತಹ ಮಾತುಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿವರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts