More

    ಕೃಷಿ ಕಾಯ್ದೆಗಳ ಬಿಕ್ಕಟ್ಟು: 29ರಂದು ಸರ್ಕಾರದ ಜತೆ ಸಭೆ

    ನವದೆಹಲಿ: ಕೃಷಿ ಸಂಬಂಧಿತ ಮೂರು ಹೊಸ ಕಾಯ್ದೆಗಳ ಕುರಿತು ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಮಾತುಕತೆಗೆ ಬರುವಂತೆ ಕೇಂದ್ರ ಸರ್ಕಾರ ನೀಡಿದ್ದ ಆಹ್ವಾನವನ್ನು ಪ್ರತಿಭಟನಾನಿರತ ರೈತ ಸಂಘಟನೆಗಳು ಶನಿವಾರ ಒಪ್ಪಿಕೊಂಡಿವೆ. ಈ ಕುರಿತು ಸುಮಾರು 40 ರೈತ ಸಂಘಟನೆಗಳು ಜಂಟಿಯಾಗಿ ಸರ್ಕಾರಕ್ಕೆ ಪತ್ರ ರವಾನಿಸಿದ್ದು, ಡಿಸೆಂಬರ್ 29ರಂದು (ಮಂಗಳವಾರ) ಬೆಳಗ್ಗೆ 11ಕ್ಕೆ ಸಭೆಗೆ ಬರುವುದಾಗಿ ತಿಳಿಸಿವೆ. ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಒಮ್ಮತ ಮೂಡದ ಕಾರಣ ಡಿ. 9ರಂದು 6ನೇ ಸುತ್ತಿನ ಸಭೆ ರದ್ದಾದ ಬಳಿಕ ಈ ಸಭೆ ನಿಗದಿಯಾಗಿದೆ. ಸಭೆಗೆ ಬರಲು ಕೆಲ ಷರತ್ತುಗಳನ್ನೂ ವಿಧಿಸಿರುವ ರೈತರು, ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಅಂಶ ಸಭೆಯ ಅಜೆಂಡಾದ ಪಟ್ಟಿಯಲ್ಲಿ ಮೊದಲಿರಬೇಕು ಎಂದು ಹೇಳಿದ್ದಾರೆ.

    ರೈತ ಸಂಘಟನೆಗಳು ಶನಿವಾರ ಸಭೆ ನಡೆಸಿ ಸರ್ಕಾರದ ಜತೆ ಮಾತುಕತೆ ನಡೆಸುವ ನಿರ್ಧಾರಕ್ಕೆ ಬಂದವು. ವಾಯುಮಾಲಿನ್ಯದ ಸುಗ್ರೀವಾಜ್ಞೆಗೆ ತಿದ್ದುಪಡಿ ತರುವುದು ಸಭೆಯ ಅಜೆಂಡಾಗಳಲ್ಲಿ ಒಂದಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ತಮಗೆ ನೀಡಿದ್ದ ಆಹ್ವಾನದಲ್ಲಿ ರೈತರ ಸಮಸ್ಯೆಗಳನ್ನು ಗೌರವಯುತವಾಗಿ ಆಲಿಸುವುದಾಗಿ ಹೇಳಿದ್ದೀರಿ. ಹಾಗಿದ್ದರೆ ರೈತರ ಬೇಡಿಕೆಗಳ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುವುದನ್ನು ಬಿಡಿ ಮತ್ತು ಪ್ರತಿಭಟನಾ ನಿರತ ರೈತರ ವಿರುದ್ಧ ನಕಾರಾತ್ಮಕ ಪ್ರಚಾರ ಮಾಡಲು ಇಡೀ ಸರ್ಕಾರಿ ವ್ಯವಸ್ಥೆಯನ್ನು ಬಳಸುವುದನ್ನು ನಿಲ್ಲಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.

    ಸುದೀರ್ಘ ಹೋರಾಟಕ್ಕೆ ಸಿದ್ಧರಾಗಿದ್ದೇವೆ: ನಾವು ಮಾತುಕತೆಗೆ ಬರುತ್ತೇವೆ. ಆದರೆ, ಪ್ರಧಾನಿಯವರ ಶುಕ್ರವಾರದ ಭಾಷಣ ಗಮನಿಸಿದರೆ ಸರ್ಕಾರ ನೂತನ ಕೃಷಿ ಕಾಯ್ದೆ ಹಿಂಪಡೆಯುವ ಮನಸ್ಥಿತಿಯಲ್ಲಿಲ್ಲ. ಹೀಗಾಗಿ ಸುದೀರ್ಘ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ರೈತ ಸಂಘಟನೆಗಳು ಹೇಳಿವೆ. ಸಮಾಲೋಚನೆಯಿಲ್ಲದೆ ಕಾಯ್ದೆಗಳನ್ನು ತಂದು ಈಗ ಅವು ನಮ್ಮ ಒಳಿತಿಗಾಗಿ ಎನ್ನುತ್ತಾರೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಜಗಮೋಹನ್ ಸಿಂಗ್ ಹೇಳಿದ್ದಾರೆ.

    ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಆಯವ್ಯಯ ಕಳೆದ ಆರು ವರ್ಷಗಳಲ್ಲಿ 6 ಪಟ್ಟು ಹೆಚ್ಚಾಗಿದೆ. ಎಂಎಸ್​ಪಿ ದರದಲ್ಲಿ ಬೆಳೆ ಖರೀದಿಗೆ ಮಾಡಲಾಗಿರುವ ವೆಚ್ಚ 2009-14ಕ್ಕೆ ಹೋಲಿಸಿದರೆ 2014-19ರಲ್ಲಿ ಶೇ.85ರಷ್ಟು ಹೆಚ್ಚಳವಾಗಿದೆ. ಎಲ್ಲ ಪ್ರಮುಖ ಬೆಳೆಗಳ ಎಂಎಸ್​ಪಿ ದರ ಶೇ.40ರಿಂದ ಶೇ.70 ಹೆಚ್ಚಳವಾಗಿದೆ.
    | ಹರ್ದೀಪ್ ಸಿಂಗ್ ಪುರಿ ಕೇಂದ್ರ ಸಚಿವ

    ಹೊಸ ವರ್ಷಾಚರಣೆಯನ್ನು ದೆಹಲಿ ಹಾಗೂ ದೇಶದ ಇತರ ಭಾಗಗಳ ಜನರು ಪ್ರತಿಭಟನಾನಿರತ ರೈತರ ಜತೆಗೆ ಆಚರಿಸಬೇಕು.
    | ದರ್ಶನ್ ಪಾಲ್ ರೈತ ಮುಖಂಡ

    ಎನ್​ಡಿಎ ತೊರೆದ ಆರ್​ಎಲ್​ಪಿ: ಹೊಸ ಕೃಷಿ ಕಾಯ್ದೆಗಳ ಬಗ್ಗೆ ಕೇಂದ್ರದ ನಿಲುವು ಮತ್ತು ರೈತರ ಪ್ರತಿಭಟನೆಯನ್ನು ಸರ್ಕಾರ ನಿಭಾಯಿಸುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ರಾಷ್ಟ್ರ ಲೋಕತಾಂತ್ರಿಕ ಪಕ್ಷ (ಆರ್​ಎಲ್​ಪಿ) ಎನ್​ಡಿಎ ತೊರೆಯುವುದಾಗಿ ಶನಿವಾರ ಘೋಷಿಸಿದೆ. ‘ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಾವು ಎನ್​ಡಿಎ ತೊರೆದಿದ್ದೇವೆ. ಮುಂಗಾರು ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತರುವಾಗ ಕರೊನಾ ಸೋಂಕಿನ ಕಾರಣ ನನ್ನನ್ನು ಅಧಿವೇಶನದಿಂದ ಹೊರಗಿಡಲಾಗಿತ್ತು. ನಾನು ಅಲ್ಲಿದ್ದಿದ್ದರೆ ಸದನದಲ್ಲೇ ಮಸೂದೆಗಳನ್ನು ಹರಿದು ಎಸೆಯುತ್ತಿದ್ದೆ. ನಾವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಆರ್​ಎಲ್​ಪಿ ಮುಖ್ಯಸ್ಥ ಮತ್ತು ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದಾರೆ. ಶಿರೋಮಣಿ ಅಕಾಲಿ ದಳದ ನಂತರ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎನ್​ಡಿಎ ತೊರೆದ ಎರಡನೇ ಪಕ್ಷ ಆರ್​ಎಲ್​ಪಿ ಆಗಿದೆ.

    ರಾಜೀನಾಮೆ: ಕೃಷಿ ಕಾಯ್ದೆಗಳು ಹಾಗೂ ರೈತರ ಪ್ರತಿಭಟನೆಯ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಪಂಜಾಬ್​ನ ಮಾಜಿ ಸಂಸದ ಹರಿಂದರ್ ಸಿಂಗ್ ಖಲ್ಸಾ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

    ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!

    ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts