More

    ಲೊಕ್ಕನಹಳ್ಳಿಯಲ್ಲಿ ರೈತರ ಪ್ರತಿಭಟನೆ ಅಂತ್ಯ

    ಹನೂರು: ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿ ಲೊಕ್ಕನಹಳ್ಳಿ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರ ಜತೆಗೂಡಿ ಕಳೆದ 4 ದಿನಗಳಿಂದಲೂ ನಡೆಸುತ್ತಿದ್ದ ಪ್ರತಿಭಟನೆ ಗುರುವಾರ ಬಂದ್ ಮೂಲಕ ಅಂತ್ಯಗೊಂಡಿದೆ. ಫೆ.15 ರಂದು ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ.

    ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಒಡೆಯರಪಾಳ್ಯ, ಪಿ.ಜಿ.ಪಾಳ್ಯ, ಬೋರೆದೊಡ್ಡಿ, ಬೂದಿಪಡಗ, ಆಂಡಿಪಾಳ್ಯ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಜಮೀನಿಗೆ ನುಗ್ಗಿ ಫಸಲನ್ನು ಹಾಳು ಮಾಡುತ್ತಿದ್ದು, ಇತ್ತೀಚೆಗೆ ಹೆಚ್ಚಾಗಿತ್ತು. ಇದರಿಂದ ರೈತರು ನಷ್ಟದಿಂದ ಅನುಭವಿಸುವಂತಾಗಿತ್ತು. ಈ ದಿಸೆಯಲ್ಲಿ ಕಳೆದ 4 ದಿನಗಳಿಂದಲೂ ಲೊಕ್ಕನಹಳ್ಳಿ ಗ್ರಾಮದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಬಿಆರ್‌ಟಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದರು. ಆದರೆ ಯಾವೊಬ್ಬ ಅಧಿಕಾರಿ ಸಹ ಸ್ಥಳಕ್ಕೆ ಆಗಮಿಸಿರಲಿಲ್ಲ.

    ಹೀಗಾಗಿ ಬುಧವಾರ ಹನೂರು ತಾಲೂಕು ಕೇಂದ್ರ ಸೇರಿದಂತೆ ಕೊಳ್ಳೇಗಾಲ, ಯಳಂದೂರು ಹಾಗೂ ಗುಂಡ್ಲುಪೇಟೆಯಲ್ಲೂ ರೈತ ಸಂಘಟನೆ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಅಂಗಡಿ, ಮುಂಗಟ್ಟುಗಳು ಬಂದ್:: ಲೊಕ್ಕನಹಳ್ಳಿಯಲ್ಲಿ ಗುರುವಾರ ವರ್ತಕರು ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜತೆಗೆ ರಸ್ತೆ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ರೈತರ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ಸಂಬಂಧ ಕಳೆದ 4 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಡಿಸಿಎಫ್‌ಗಳು ಸ್ಥಳಕ್ಕಾಗಮಿಸಿಲ್ಲ. ಸಚಿವರು ಹಾಗೂ ಸ್ಥಳೀಯ ಶಾಸಕರೂ ಸಹ ಬಂದಿಲ್ಲ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಆಲಿಸುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.

    ರಸ್ತೆ ಸಂಚಾರ ತಡೆ ನಡೆಸುತ್ತಿರುವ ಬಗ್ಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ತಿಳಿಸಿದರು. ಬಳಿಕ ಜಿಲ್ಲಾಧಿಕಾರಿ ಅವರು ಫೆ.15 ರಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಅಂತ್ಯಗೊಳಿಸಿದರು. ರಸ್ತೆ ಸಂಚಾರ ತಡೆಯಿಂದ ನಾಗರಿಕರು ತೊಂದರೆ ಅನುಭವಿಸಿದರು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಶಾಂತಕುಮಾರ್, ಜಯಶಂಕರ್, ಮಹೋಹರ್, ವೇಲು ಮುರುಗನ್, ಜಯಂತಿ, ಬಸಮ್ಮಾಳ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts