More

    ಹಲಿಗೆ ಬಾರಿಸಿ ರೈತರ ಪ್ರತಿಭಟನೆ, ಎಕರೆಗೆ 25 ಸಾವಿರ ರೂ. ವಿಮೆ ಪರಿಹಾರ ನೀಡಲು ಆಗ್ರಹ

    ಸವಣೂರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅನ್ನದಾತ ಕೃಷಿಕ ಸಮಾಜ ರಾಜ್ಯ ಘಟಕದ ಪದಾಧಿಕಾರಿಗಳು ಪಟ್ಟಣದ ಕಂದಾಯ ಇಲಾಖೆ ಎದುರು ಬುಧವಾರ ಪ್ರತಿಭಟನೆ ಕೈಗೊಂಡು ಉಪವಿಭಾಗಾಧಿಕಾರಿ ಮೊಹಮ್ಮದ್ ಖಿಜರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

    ಮಳೆ ಕೊರತೆಯಿಂದ ರೈತರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಬೆಳೆ ಹಾನಿ ಪರಿಹಾರ ನೀಡಬೇಕು. ಮಧ್ಯಂತರ ಬೆಳೆ ವಿಮೆ ಬೇಗನೆ ಬಿಡುಗಡೆ ಮಾಡಿ ಅನುಕೂಲ ಕಲ್ಪಿಸಬೇಕು. ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದು, ಕೃಷಿಗಾಗಿ ಮಾಡಿದ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

    ಕೊಳವೆ ಬಾವಿ ನೀರು ಬಳಸಿ ಹಿಂಗಾರು ಬೆಳೆ ಬೆಳೆಯಲು 7 ತಾಸು ವಿದ್ಯುತ್ ಪೂರೈಸಬೇಕು. ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ರೈತರ ಪಹಣಿಯಲ್ಲಿನ ಕಾಲಂ ನಂ. 6ರಲ್ಲಿ ಸರ್ಕಾರ ಅಂತಾ ನಮೂದು ಆಗಿರುವುದರಿಂದ ಯಾವುದೇ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಹಣಿ ನ್ಯೂನತೆ ಸರಿಪಡಿಸುವಂತೆ ಕಂದಾಯ ಇಲಾಖೆಗೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಪಟ್ಟಣದ ಎಪಿಎಂಸಿ ಪ್ರಾಂಗಣದಿಂದ ಹಲಿಗೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ಆಗಮಿಸಿ ಮನವಿ ಸಲ್ಲಿಸಲಾಯಿತು. ರೈತ ಸಂಘದ ಅಧ್ಯಕ್ಷ ಶಿವಾನಂದ ಯಲಿಗಾರ, ಪದಾಧಿಕಾರಿಗಳಾದ ಸಿದ್ದನಗೌಡ ಪಾಟೀಲ, ಗದಿಗೆಪ್ಪ ಗುದಗಿ, ಶಾಂತಪ್ಪ, ವೈ.ಬಿ. ಹೊಂಡದ, ಭೀಮಪ್ಪ ವಾಲ್ಮೀಕಿ, ರಮೇಶ ಬಡಿಗೇರ, ಮುತ್ತಣ್ಣ ಕಳ್ಳಿಮನಿ, ಎಸ್.ವೈ. ಕಳ್ಳಿಮನಿ, ಬಸವರಾಜ ಕಳ್ಳಿಮನಿ, ಫಕೀರೇಶ ಕಳ್ಳಿಮನಿ, ಎನ್.ಎ.ದೊಡ್ಡಮನಿ ಹಾಗೂ ಇತರರು ಇದ್ದರು. ಉಪವಿಭಾಗಾಧಿಕಾರಿ ಮೊಹಮ್ಮದ್ ಖಿಜರ್ ಅವರು ಮನವಿ ಸ್ವೀಕರಿಸಿದರು. ತಹಸೀಲ್ದಾರ್ ಗಣೇಶ ಸವಣೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts