More

    ಕೋರಮಂಡಲ್ ಸಕ್ಕರೆ ಕಾರ್ಖಾನೆ ಎದುರು ರೈತರ ಪ್ರತಿಭಟನೆ

    ಕೆ.ಆರ್.ಪೇಟೆ: ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಪರಿಸರ ಮಾಲಿನ್ಯ ಕುರಿತು ಪರಿಶೀಲನೆ ನಡೆಸಿ, ಕ್ರಮ ವಹಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.


    ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ಮತ್ತು ಹಾರುಬೂದಿಯ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಅ.10ರಂದು ಬೆಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಅಂದು ಪ್ರತಿಭಟನಾಕಾರರಿಗೆ ನೀಡಿದ್ದ ಭರವಸೆಯಂತೆ ಮಂಡಳಿಯ ಅಧ್ಯಕ್ಷ ಶಾಂತತಿಮ್ಮಯ್ಯ ಶನಿವಾರ ಕಾರ್ಖಾನೆಗೆ ಆಗಮಿಸಿ ಪರಿಶೀಲಿಸಿ, ಹೊರಬಂದರು. ಈ ವೇಳೆ ಅವರ ಕಾರಿಗೆ ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿದರು. ರೈತ ಸಂಘದ ಕಾರ್ಯಕರ್ತರ ಸಮ್ಮುಖದಲ್ಲಿ ಪರಿಶೀಲನೆ ನಡೆಸದೆ ತಾವು ಒಬ್ಬರೇ ಕಾರ್ಖಾನೆಯವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.


    ರೈತ ಮುಖಂಡ ಎಂ.ವಿ.ರಾಜೇಗೌಡ ಮಾತನಾಡಿ, ಕಾರ್ಖಾನೆ ತನ್ನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಹೊರ ಬಿಡುತ್ತಿರುವುದಾಗಿ ಹೇಳುತ್ತಿದೆ. ಆದರೆ ಶುದ್ಧೀಕರಣ ಘಟಕದಲ್ಲಿ ನಿಯಮಾನುಸಾರ ಬಳಕೆ ಮಾಡಬೇಕಾದ ಸುಣ್ಣ ಮತ್ತು ಸಗಣಿ ಬಳಕೆ ಮಾಡುತ್ತಿಲ್ಲ. ಇದನ್ನು ನಿತ್ಯ ಪರಿಶೀಲಿಸುವರ‌್ಯಾರು? ಪರಿಸರ ಮಂಡಳಿಯ ಅಧ್ಯಕ್ಷರಾಗಿ ನೀವು ಶುದ್ಧೀಕರಣ ಘಟಕದ ಬಳಿ ನಿಗದಿತ ಪ್ರಮಾಣದ ಸುಣ್ಣ ಮತ್ತು ಸಗಣಿ ಬಳಕೆ ಮಾಡಿರುವುದನ್ನು ನೋಡಿದ್ದೀರಾ? ನಮ್ಮ ಸಮ್ಮುಖದಲ್ಲೇ ಅದನ್ನು ಪರಿಶೀಲಿಸಿ. ಅಲ್ಲಿರುವ ಲೋಪ-ದೋಷಗಳ ಬಗ್ಗೆ ಬಹಿರಂಗವಾಗಿ ತಿಳಿಸಿ ಎಂದು ಪಟ್ಟು ಹಿಡಿದರು.
    ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಶಾಂತ ತಿಮ್ಮಯ್ಯ, ರೈತರು ನನ್ನ ಮೇಲೆ ನಂಬಿಕೆಯಿಡಬೇಕು. ನಾನು ಬೆಂಗಳೂರಿನಲ್ಲಿ ರೈತ ಹೋರಾಟಗಾರರಿಗೆ ನೀಡಿದ್ದ ಮಾತಿನಂತೆ ಇಂದು ಕಾರ್ಖಾನೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ನಿಯಮಾನುಸಾರ ವರದಿ ಮಾಡಿ ಅದರ ಪ್ರತಿಯನ್ನು ನಿಮಗೂ ನೀಡುತ್ತೇನೆ ಎಂದು ರೈತರನ್ನು ಸಮಾಧಾನ ಪಡಿಸಲು ಮುಂದಾದರು. ಆದರೆ ಅವರ ಮನವಿಗೆ ರೈತ ಹೋರಾಟಗಾರರು ಸೊಪ್ಪು ಹಾಕಲಿಲ್ಲ.


    ಹೊರ ನಡೆದ ಶಾಂತತಿಮ್ಮಯ್ಯ: ರೈತ ಹೋರಾಟಗಾರರ ಪ್ರತಿಭಟನೆಗೆ ಮಣಿದು ಮೂವರು ರೈತ ಮುಖಂಡರು ಶಾಂತತಿಮ್ಮಯ್ಯ ಅವರೊಂದಿಗೆ ಮತ್ತೆ ಕಾರ್ಖಾನೆಯ ಒಳಗೆ ತೆರಳಲು ಅನುಮತಿಸಲಾಯಿತು. ಆದರೆ ರೈತ ಮುಖಂಡರು ತಮ್ಮ ಜತೆ ಮೊಬೈಲ್ ಕೊಂಡೊಯ್ಯಲು ಕಾರ್ಖಾನೆಯ ಆಡಳಿತ ಮಂಡಳಿ ಅನುಮತಿಸಲಿಲ್ಲ. ಮೊಬೈಲ್ ಇಲ್ಲದೆ ಒಳಗೆ ತೆರಳಲು ರೈತ ಮುಖಂಡರು ನಿರಾಕರಿಸಿದರು. ಈ ನಡುವೆ ಕಾರ್ಖಾನೆಯ ಮತ್ತೊಂದು ಬಾಗಿಲ ಮೂಲಕ ಶಾಂತತಿಮ್ಮಯ್ಯ ಹೊರನಡೆದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಎಂ.ವಿ.ರಾಜೇಗೌಡ, ನಮ್ಮ ಜನಪರ ಹೋರಾಟ ನಿರಂತರವಾಗಿರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಕಾರ್ಖಾನೆಯ ಮತ್ತೊಂದು ಬಾಗಿಲಿನ ಮೂಲಕ ಪಲಾಯನ ಮಾಡಿ ಕಾರ್ಖಾನೆಯ ಪರಿಸರ ಮಾಲಿನ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ರೈತರ ಸಭೆ ನಡೆಸಿ ಮುಂದಿನ ಹೋರಾಟವನ್ನು ಆರಂಭಿಸುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts