More

    ರೈತರಿಗೆ ನಷ್ಟ… ಗ್ರಾಹಕಗೆ ಬಲುಕಷ್ಟ

    ಬೆಳಗಾವಿ: ರಾಜ್ಯದಲ್ಲಿ ಸತತ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಯಾಗಿದ್ದು ಸಗಟು, ಚಿಲ್ಲರೆ ಮಾರುಕಟ್ಟೆಗಳಲ್ಲಿ ಸೊಪ್ಪು-ಕಾಯಿಪಲ್ಲೆ ದರ ಗಗನಮುಖಿಯಾಗಿದೆ. ಬೆಳೆಹಾನಿಯಿಂದಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದರೆ, ತರಕಾರಿ ಬೆಲೆ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಬಲುಕಷ್ಟ ಅನುಭವಿಸುವಂತಾಗಿದೆ.

    ಎರಡು ವಾರಗಳ ಅವಧಿಯಲ್ಲಿ ಸತತವಾಗಿ ಸುರಿದ ಮಳೆಯಿಂದ ರಾಜ್ಯದಲ್ಲಿ ಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕೊತ್ತಂಬರಿ, ಪುಂಡಿಪಲ್ಲೆ, ಮೆಂತೆ, ಸಬ್ಬಸಗಿ, ಕೊತ್ತಂಬರಿ, ಬೀನ್ಸ್, ಎಲೆಕೋಸು, ಹೂ-ಕೋಸು, ಹಸಿ ಮೆಣಸಿನಕಾಯಿ, ಚವಳಿಕಾಯಿ, ಬೆಂಡೆ, ಸೌತೆ, ಬದನೆ, ಅವರೆ ಇನ್ನಿತರ ತರಕಾರಿ ಬೆಳೆಗಳು ಹಾನಿಯಾಗಿವೆ.

    ದಿಢೀರ್ ದರ ಏರಿಕೆ: ಲಾಕ್‌ಡೌನ್ ಸಂದರ್ಭದಲ್ಲಿ ಹೋಟೆಲ್, ಮದುವೆ, ಸಭೆ-ಸಮಾರಂಭ ನಡೆಯದಿರುವ ಹಿನ್ನೆಲೆಯಲ್ಲಿ ತರಕಾರಿ ದರದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ರೈತರು ತರಕಾರಿ ಬೆಳೆಯುವುದನ್ನೇ ಕೈಬಿಟ್ಟಿದ್ದರಿಂದ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಷ್ಟು ತರಕಾರಿ ಆವಕ ಆಗುತ್ತಿಲ್ಲ. ಕಳೆದ ಆರೇಳು ತಿಂಗಳಿಂದ ಕೆ.ಜಿ.ಗೆ 15ರಿಂದ 20 ರೂ. ಇದ್ದ ಸೊಪ್ಪು- ಕಾಯಿಪಲ್ಲೆ ದರ ದಿಢೀರನೆ ಗಗನಮುಖಿಯಾಗಿದೆ. ತಾಜಾ ತರಕಾರಿ ಮಾರುಕಟ್ಟೆಗೆ ಬರುವುದೇ ತಡ, ಖರೀದಿಗೆ ಸಣ್ಣ ವ್ಯಾಪಾರಿಗಳು, ಗ್ರಾಹಕರು ಮುಗಿಬೀಳುತ್ತಿದ್ದಾರೆ. ಆದರೆ, ತರಕಾರಿ ಬೆಲೆ ಏರಿಕೆಯಾಗಿದ್ದರಿಂದ ಕೆಲವರು ದರ ಕೇಳಿ ಮುಂದೆ ಹೋದರೆ, ಇನ್ನಷ್ಟು ಮಂದಿ ಚೌಕಾಸಿ ಮಾಡುತ್ತ ಕಾಲುಪಾವ್, ಅರ್ಧಪಾವ್ ಖರೀದಿಸುತ್ತಿದ್ದಾರೆ.

    ತಪ್ಪದ ದಲ್ಲಾಳಿಗಳ ಕಾಟ: ಬೆಳಗಾವಿ ನಗರದ ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆ ಸೇರಿದಂತೆ ಜಿಲ್ಲೆಯ ವಿವಿಧ ಮಾರುಕಟ್ಟೆಗಳಲ್ಲಿ, ವಾರದ ಸಂತೆಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿದ್ದರಿಂದ ಬೆಲೆ ರೈತನಿಗೆ ದೊರೆಯುತ್ತದೆ ಎಂದರೆ ಅದು ಸಾಧ್ಯವಾಗುತ್ತಿಲ್ಲ. ಏರಿಕೆಯ ಲಾಭವನ್ನು ದಲ್ಲಾಳಿಗಳು ಕಬಳಿಸುತ್ತಿದ್ದಾರೆ. ಜಮೀನಿಂದ ತಾಜಾ ತರಕಾರಿಯನ್ನು ರೈತರು ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಬಂದರೆ ಅಗ್ಗದ ದರದಲ್ಲಿ ಬೆಲೆ ನಿಗದಿ ಮಾಡುವುದು. ಬಳಿಕ ಅದೇ ತರಕಾರಿಯನ್ನು ದುಪ್ಪಟ್ಟು ದರಕ್ಕೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತರಕಾರಿ ಬೆಳೆಗಾರ ರಾಮಪ್ಪ ಸೋ. ಬೆಂಡಿವಾಡ, ಮಾರುತಿ ಲಕ್ಷಾಣಿ ದೂರಿದ್ದಾರೆ.

    ಗೋವಾದಿಂದ ಭಾರಿ ಬೇಡಿಕೆ: ರಾಜ್ಯದಲ್ಲಿ ಬೆಂಗಳೂರು ಮಾರುಕಟ್ಟೆ ಹೊರತುಪಡಿಸಿದರೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಾರುಕಟ್ಟೆಗಳಿಂದಲೇ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ರವಾನೆ ಆಗುತ್ತದೆ. ಬೆಳಗಾವಿ ತರಕಾರಿ ಮಾರುಕಟ್ಟೆಯಿಂದ ಗೋವಾ ರಾಜ್ಯಕ್ಕೆ ಪ್ರತಿನಿತ್ಯ ಕನಿಷ್ಠ 40 ಟನ್‌ನಷ್ಟು ವಿವಿಧ ರೀತಿಯ ತರಕಾರಿ ಪದಾರ್ಥಗಳು ರವಾನೆಯಾಗುತ್ತದೆ.

    ಕೋವಿಡ್-19 ಬಳಿಕವಂತೂ ಗೋವಾ ರಾಜ್ಯದವರು ತರಕಾರಿಗಾಗಿ ಬೆಳಗಾವಿ ರೈತರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಅಧಿಕ ಪ್ರಮಾಣದಲ್ಲಿ ಇಲ್ಲಿನ ತರಕಾರಿ ಗೋವಾಕ್ಕೆ ಹೋಗುತ್ತಿರುವುದರಿಂದ ನಮ್ಮಲ್ಲಿ ತರಕಾರಿ ಕೊರತೆ ಉಂಟಾಗುತ್ತಿದೆ. ಹೀಗಾಗಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇನ್ನೂ ದರ ಏರಿಕೆ ಸಾಧ್ಯತೆ ಇದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳಾದ ರಾಮು ಎಸ್. ನಾಯಕರ್, ರಫೀಕ್ ಮುಲ್ಲಾ.

    ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮತ್ತು ಬೆಳೆಗೆ ರೋಗ ಬಾಧಿಸಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ನಿರೀಕ್ಷೆಯಷ್ಟು ತರಕಾರಿ ಮಾರುಕಟ್ಟೆಗೆ ಬರದ ಕಾರಣ ದಿನದಿಂದ ದಿನಕ್ಕೆ ತರಕಾರಿ ಬೇಡಿಕೆ ಹೆಚ್ಚಾಗುತ್ತಿದೆ. ಸಗಟು ಮಾರುಕಟ್ಟೆಗಳಲ್ಲಿ ರೈತರಿಗೆ ಒಳ್ಳೆಯ ದರ ಸಿಗುತ್ತಿದೆ. ಆದರೆ, ತರಕಾರಿ ಉತ್ಪಾದನೆ ಕುಸಿತದಿಂದಾಗಿ ಬೇಡಿಕೆಗೆ ತಕ್ಕಂತೆ ತರಕಾರಿ ಸಿಗುತ್ತಿಲ್ಲ. ಹಾಗಾಗಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ದರ ಏರಿಕೆಯಾಗುತ್ತಿದೆ.
    | ಡಾ. ಕೆ.ಕೋಡಿಗೌಡ ಕಾರ್ಯದರ್ಶಿ, ಎಪಿಎಂಸಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts