More

    ರೈತರ ಚಿತ್ತ ತುಂತುರು ನೀರಾವರಿಯತ್ತ

    ಬೆಳಗಾವಿ: ಈ ಮೊದಲು ಕೃಷಿಯಲ್ಲಿ ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ರೈತರಿಗೆ ಅದೇ ಹನಿ, ತುಂತುರು ನೀರಾವರಿ ವರವಾಗಿ ಪರಿಣಮಿಸಿದೆ. ಕೇವಲ ನಾಲ್ಕು ವರ್ಷದಲ್ಲಿ 64.81 ಸಾವಿರ ಹೆಕ್ಟೇರ್ ಕೃಷಿ ಪ್ರದೇಶವೀಗ ಲಘು ನೀರಾವರಿ ಸೌಲಭ್ಯ ಹೊಂದಿದೆ.

    ಮಳೆ ಅಭಾವ, ನೀರಿನ ಅಲಭ್ಯತೆ, ಹೆಚ್ಚು ಖರ್ಚು, ಬೆಳೆಗಳ ಇಳುವರಿ ಕುಂಠಿತ ಇತರ ಸಮಸ್ಯೆಗಳಿಂದ ತತ್ತರಿಸಿದ್ದ ರೈತರು ಹನಿ, ತುಂತುರು ನೀರಾವರಿಯತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಶೇ. 43ರಷ್ಟು ಹನಿ ನೀರಾವರಿ ಪ್ರಮಾಣ ಹೆಚ್ಚಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರು ಹನಿ ನೀರಾವರಿಯತ್ತ ಮುಖ ಮಾಡಿದ್ದು ಬೇಡಿಕೆ ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

    ಕಳೆದ ನಾಲ್ಕೈದು ವರ್ಷದಿಂದ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿ, ತೆರೆದ ಬಾವಿ, ನದಿ ಹಾಗೂ ಹಳ್ಳ- ಕೊಳ್ಳಗಳು ಬತ್ತಿ ಹೋಗಿದ್ದವು. ಆದ್ದರಿಂದ ಕಂಗಾಲಾಗಿದ್ದ ರೈತರು ಹನಿ, ತುಂತುರು ನೀರಾವರಿಯತ್ತ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕೆಲ ರೈತರು ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ಖರ್ಚು, ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಕೇವಲ 2 ವರ್ಷದ ಅವಧಿಯಲ್ಲಿ ಶೇ. 32ರಷ್ಟು ಹನಿ ನೀರಾವರಿ ಪದ್ಧತಿ ಹೆಚ್ಚಿದೆ. ಇದೇ ಪ್ರಮಾಣ ಮುಂದುವರಿದರೆ 2020ರ ಅಂತ್ಯದ ವೇಳೆಗೆ ಶೇ. 80ರಷ್ಟು ಭೂಮಿ ಹನಿ ನೀರಾವರಿಗೆ ಒಳಪಡಲಿದೆ.

    ಸಬ್ಸಿಡಿ ಸೌಲಭ್ಯ : ರಾಜ್ಯ ಸರ್ಕಾರವು ಹನಿ, ತುಂತು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ರೈತರಿಗೆ ಸಬ್ಸಿಡಿ ಸೌಲಭ್ಯ ನೀಡುತ್ತಿದೆ. ಸರ್ಕಾರವು ಹನಿ ನೀರಾವರಿ ಪದ್ಧತಿ ಪ್ರೋತ್ಸಾಹಿಸಲು ಬೆಳಗಾವಿ ಜಿಲ್ಲೆಗೆ 5 ವರ್ಷದ ಅವಧಿಯಲ್ಲಿ 225 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಿದೆ. ಕೃಷಿ ಇಲಾಖೆ ಅನುಮತಿ ಪಡೆಯದೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಸಬ್ಸಿಡಿ ಅನುದಾನ ಲಭಿಸುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
    ವಾರ್ಷಿಕ ಕೋಟ್ಯಂತರ ರೂ. ಸಹಾಯಧನ

    ಸರ್ಕಾರವು ರಾಜ್ಯಾದ್ಯಂತ ಹನಿ ನೀರಾವರಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2012- 13ರಲ್ಲಿ 108 ಕೋಟಿ ರೂ. ಸಬ್ಸಿಡಿ ಅನುದಾನ ನೀಡಿತ್ತು. 2016-17ನೇ ಸಾಲಿಗೆ 370 ಕೋಟಿ ರೂ., 2017-18ನೇ ಸಾಲಿಗೆ 280 ಕೋಟಿ ರೂ., 2018-19ನೇ ಸಾಲಿಗೆ 230 ಕೋಟಿ ರೂ. 2019-20ನೇ ಸಾಲಿಗೆ 180 ಕೋಟಿ ರೂ.ಗಿಂತ ಹೆಚ್ಚು ಸಹಾಯಧನ ಸೌಲಭ್ಯ ಕಲ್ಪಿಸಿದೆ. ವರ್ಷದಿಂದ ವರ್ಷಕ್ಕೆ ಹನಿ ನೀರಾವರಿ ಸೌಲಭ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಹನಿ ನೀರಾವತಿ ಪದ್ಧತಿ ಬೇಡಿಕೆ ಹೆಚ್ಚುತ್ತಿದೆ. ಕಬ್ಬು ಬೆಳೆಗಾರರು ಹನಿ ನೀರಾವರಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರವು ಹನಿ ನೀರಾವರಿ ಸೌಲಭ್ಯಕ್ಕೆ ಶೇ. 90 ಸಬ್ಸಿಡಿ ನೀಡುತ್ತಿದೆ. ಇದರಲ್ಲಿ
    ಶೇ. 20ರಷ್ಟು ಕೇಂದ್ರ ಸರ್ಕಾರ ಪಾಲು ಹೊಂದಿದೆ. ರೈತರು ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕು.
    ಜಿಲಾನಿ ಎಚ್.ಮೊಕಾಶಿ, ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು.

     

    |ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts