More

    ತಾಪಂ ಆಡಳಿತಾಧಿಕಾರಿಗೆ ರೈತರ ಮುತ್ತಿಗೆ

    ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ, ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಠರಾವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ತಾಪಂ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಎಸ್.ಬಿ. ಮಳ್ಳಳ್ಳಿ ಅವರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.

    ಪಟ್ಟಣದ ತಾಪಂ ಕಾರ್ಯಾಲಯ ಸುವರ್ಣಸೌಧದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯುತ್ತಿರುವ ಮಾಹಿತಿ ತಿಳಿದು ದಿಢೀರ್‌ನೆ ಆಗಮಿಸಿದ ರೈತರು, ಸಭೆಯ ಹೊರಗೆ ಘೋಷಣೆ ಕೂಗುತ್ತ, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ನಂತರ ಸಭೆಗೆ ನುಗ್ಗಿ ಅಧಿಕಾರಿಗಳ ಮುತ್ತಿಗೆ ಹಾಕಿದರು.

    ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬರ ಪರಿಸ್ಥಿತಿಯಿಂದ ರೈತರು ಹಾಗೂ ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕೋರಿ ಅರ್ಜಿ ಸಲ್ಲಿಸಿದರೂ ಗ್ರಾಪಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಲ್ಲ ಕಾರ್ಮಿಕರ ಉದ್ಯೋಗ ಚೀಟಿಗಳು ಗ್ರಾಪಂ ಸದಸ್ಯರ ಬಳಿಯಿದ್ದು, ಯಂತ್ರಗಳಿಂದ ಕೆಲಸ ನಿರ್ವಹಿಸಿ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

    ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಬೇಕು. ನರೇಗಾ ಕೂಲಿ 500 ರೂ. ಏರಿಕೆ ಮಾಡಬೇಕು. ಬ್ಯಾಡಗಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡ ಕಿರಣ ಗಡಿಗೋಳ ಮಾತನಾಡಿ, ಶಿಡೇನೂರು, ತಡಸ, ಮುತ್ತೂರು, ಹೆಡಿಗ್ಗೊಂಡ, ಮಾಸಣಗಿ, ಕದರಮಂಡಲಗಿ ಸೇರಿದಂತೆ ಬಹುತೇಕ ಪಂಚಾಯಿತಿಗಳಲ್ಲಿ ಮಹಿಳಾ ಕೂಲಿ ಕಾರ್ಮಿಕರು ಕೆಲಸ ಕೋರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಮೌನ ಧೋರಣೆ ತಾಳಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಎಲ್ಲ ಗ್ರಾಪಂಗಳಿಗೆ ಕಳುಹಿಸಿ ತನಿಖೆ ಮಾಡಿಸಬೇಕು ಎಂದರು.

    ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ: ರೈತರನ್ನು ಉದ್ದೇಶಿಸಿ ಮಾತನಾಡಿದ ಆಡಳಿತಾಧಿಕಾರಿ ಎಸ್.ಬಿ. ಮುಳ್ಳಳ್ಳಿ, ಕೂಡಲೇ ಪಿಡಿಒಗಳ ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿದಲ್ಲಿ ಮಂಜೂರಾತಿ ನೀಡಲಾಗುವುದು. ತಪ್ಪಿತಸ್ಥ ಅಧಿಕಾರಿಗಳು ಯಾರೇ ಇರಲಿ ಅವರ ಮೇಲೆ ಕ್ರಮಕ್ಕೆ ಸೂಚಿಸುತ್ತೇನೆ ಎಂದು ತಿಳಿಸಿದರು.

    ಮುಖಂಡರಾದ ಗಂಗಣ್ಣ ಎಲಿ, ಸಿದ್ದಪ್ಪ ಮೋಟೆಬೆನ್ನುರು, ಜಾನ್ ಪುನೀತ್, ಬಸವರಾಜ ದೊಡ್ಡಮನಿ, ನಂಜುಂಡಯ್ಯ ಹಾವೇರಿಮಠ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts