More

    ಬಿರುಸಾದ ಮಳೆಯ ನಿರೀಕ್ಷೆಯಲ್ಲಿ ರೈತರು

    ಮಂಜುನಾಥ ಅಂಗಡಿ ಧಾರವಾಡ
    ಮಳೆ ವಿಳಂಬದಿಂದ ಮುಂಗಾರು ಹಂಗಾಮಿನಲ್ಲಿ ಬರದ ಛಾಯೆ ಆವರಿಸಿತ್ತು. ಕಳೆದ ಕೆಲ ದಿನಗಳಿಂದ ತುಂತುರು ಮಳೆಯಾಗುತ್ತಿದ್ದು, ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಿಸುವ ಬಿರುಸಿನ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.
    ಜು. 6ರಿಂದ ಪುನರ್ವಸು ಮಳೆ ಆರಂಭಗೊಂಡಿದೆ. 2- 3 ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿದೆ. ಮುಂಗಾರು ಬಿತ್ತನೆಗೆ 30 ದಿನಗಳಷ್ಟು ಹಿನ್ನಡೆಯಾಗಿದ್ದು, ಈಗಲಾದರೂ ಮಳೆಯಾಗಲಿ ಎಂದು ರೈತರು ಬೇಡುತ್ತಿದ್ದಾರೆ. ಬೋರ್‌ವೆಲ್, ಇತರ ನೀರಾವರಿ ವ್ಯವಸ್ಥೆ ಇರುವ ಬಹುತೇಕ ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಮೊಳಕೆಯೊಡೆದು ಭೂಮಿಯ ಮಟ್ಟಕ್ಕೆ ಬಂದ ಸಸಿಗಳಿಗೆ ತುಂತುರು ಮಳೆ ಕೊಂಚ ವರದಾನವಾಗಿದೆ.
    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 2.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಮಳೆಯ ಅಭಾವದಿಂದ ಈವರೆಗೆ 42,003 ಹೆಕ್ಟೇರ್ ಪ್ರದೇಶದಲ್ಲಿ (ಶೇ. 16) ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಹೆಸರು, ಸೋಯಾಅವರೆ, ಹತ್ತಿ, ಮೆಕ್ಕೆಜೋಳ, ಶೇಂಗಾ, ಭತ್ತ, ಕಬ್ಬು, ಈರುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ ಹೀಗೆ ಬಹುವಿಧದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ, ಮಳೆಯ ಅಭಾವದಿಂದ ಪರ್ಯಾಯ ಬೆಳೆಗಳಿಗೆ ಕೃಷಿ ಇಲಾಖೆ ಸೂಚಿಸಿದೆ.
    ಜಿಲ್ಲೆಯಲ್ಲಿ 147 ಮಿ.ಮೀ. ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತಾದರೂ ವಾಸ್ತವಿಕ 71 ಮಿ.ಮೀ. ಮಳೆಯಾಗಿದೆ. 76 ಮಿ.ಮೀ. ಮಳೆ ಕೊರತೆಯಾಗಿದೆ. ಇದೇರೀತಿ ಮಳೆ ಕೊರತೆ ಮುಂದುವರಿದರೆ ಈಗಾಗಲೇ ಬಿತ್ತಿದ ಬೆಳೆಗಳೂ ಕೈಗೆಟುಕುವುದು ಕಷ್ಟ.

    • ಪರ್ಯಾಯ ಬೆಳೆಗಳಿಗೆ ಶಿಪಾರಸು:

    ಬಿತ್ತನೆಯಾಗದಿರುವ ಪ್ರದೇಶದಲ್ಲಿ ಬಿತ್ತನೆಗಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಮಾಲೋಚಿಸಿ ಪರ್ಯಾಯ ಬೆಳೆ ರೂಪಿಸಿದ್ದಾರೆ. ಆಗಸ್ಟ್‌ವರೆಗೆ ಬಿತ್ತನೆಗೆ ಸೂಕ್ತ ಬೆಳೆಗಳನ್ನು ಶಿಾರಸು ಮಾಡಿದ್ದಾರೆ. ಧಾರವಾಡ ತಾಲೂಕಿನ ಕಪ್ಪು, ಕೆಂಪು ಮಿಶ್ರಿತ ಮಳೆಯಾಶ್ರಿತ ಪ್ರದೇಶಗಳಲ್ಲಿ ಜುಲೈ 2ನೇ ವಾರದಲ್ಲಿ ಸೂರ್ಯಕಾಂತಿ, ಹಬ್ಬು ಶೇಂಗಾ, ಗೋವಿನಜೋಳ, ಮೆಣಸಿನಕಾಯಿ, ಔಡಲ, ಅಲಸಂದಿ, ತರಕಾರಿ, ಮೇವಿನಜೋಳ, ಮೇವಿನ ಗೋವಿನಜೋಳ ಬಿತ್ತಬಹುದು.  ಆಗಸ್ಟ್ ಮೊದಲ ವಾರದಲ್ಲಿ ವಠಾಣೆ, ಹುರಳಿ, ಗೋವಿನಜೋಳ, ಮೇವಿನ ಗೋವಿನಜೋಳ, ಔಡಲ, ಸೂರ್ಯಕಾಂತಿ ಬಿತ್ತನೆಗೆ ಸೂಕ್ತ. ಅದೇರೀತಿ ಆಗಸ್ಟ್ 2ನೇ ವಾರದಲ್ಲಿ ಸೂರ್ಯಕಾಂತಿ, ಮೇವಿನ ಗೋವಿನಜೋಳ, ಮೇವಿನ ಜೋಳ, ಮೇವಿನ ಅಲಸಂದಿ, ಔಡಲ ಬೆಳೆಗಳನ್ನು ಬೆಳೆಯಬಹುದು.

    ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದ್ದಲ್ಲದೆ, ದುರ್ಬಲವಾಗಿದೆ. ಜುಲೈ ಮೊದಲ ವಾರದಲ್ಲಿ ಮಳೆ ಚುರುಕಾಗಿದ್ದರೂ ಮೇ, ಜೂನ್‌ನಲ್ಲಿ ಮಳೆಯಾಗದಿರುವುದರಿಂದ ಜಮೀನುಗಳಲ್ಲಿ ತೇವಾಂಶವಿಲ್ಲ. ಇದರಿಂದ ಬಿತ್ತನೆಯೂ ವಿಳಂಬವಾಗಿದೆ. ಕಬ್ಬು ಬೆಳೆಗಾರರು ಕೊಳವೆಬಾವಿ ನೀರನ್ನು ಅತ್ಯಂತ ವಿವೇಚನೆಯಿಂದ ಬಳಸಬೇಕು. ನೀರಾವರಿ ವ್ಯವಸ್ಥೆ ಇದ್ದವರು ಹನಿ ನೀರಾವರಿ ಅಳವಡಿಸಿಕೊಳ್ಳುವುದು ಸೂಕ್ತ.
    – ಆರ್.ಆರ್. ಪಾಟೀಲ, ಹವಾಮಾನತಜ್ಞ, ಕೃಷಿ ವಿವಿ ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts