More

    ಗಣೇಶನಿಗೆ ವಿಜೃಂಭಣೆಯ ವಿದಾಯ

    ರಾಯಚೂರು: ಜಿಲ್ಲೆಯಾದ್ಯಂತ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಐದನೇ ದಿನವಾದ ಶನಿವಾರ ರಾತ್ರಿ ಗಣೇಶ ಮೂರ್ತಿಗಳನ್ನು ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು. ನಗರದಲ್ಲಿ 126 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
    ವಿಸರ್ಜನೆ ವೇಳೆ ಡಿಜೆ ಬಳಕೆ ಬೇಡ ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಬಹುತೇಕ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಡಿಜೆಗಳ ಅಬ್ಬರ ಹೆಚ್ಚಾಗಿತ್ತು. ಜತೆಗೆ ವಿದ್ಯುತ್ ದೀಪಗಳ ಅಲಂಕಾರ, ಯುವಕರು ಕುಣಿದು ಕುಪ್ಪಳಿಸಿ ಗಣೇಶನಿಗೆ ವಿದಾಯ ಹೇಳಿದರು.
    ನಗರದಲ್ಲಿ ಶನಿವಾರ ರಾತ್ರಿ ಆರಂಭವಾದ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಮಾವಿನಕೆರೆ ಹತ್ತಿರದ ಖಾಸಬಾವಿಯಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಜರುಗಿತು. ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್ ಮತ್ತು ಮುನ್ನೂರುವಾಡಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ಮೆರವಣಿಗೆ ಹೆಚ್ಚಿನ ಗಮನ ಸೆಳೆಯಿತು.
    ಜಿಲ್ಲೆಯಾದ್ಯಂತ ಸುಮಾರು 2 ಸಾವಿರಕ್ಕೂ ಹೆಚ್ಚು ದೊಡ್ಡದಾದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ಐದನೇ ದಿನ ಅಂದಾಜು 600ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ ನಡೆಸಲಾಯಿತು. ಇನ್ನೂ ಕೆಲವರು 9ನೇ ದಿನಕ್ಕೆ, ಕೆಲವರು 11ನೇ ದಿನಕ್ಕೆ ಮೂರ್ತಿಗಳ ವಿಸರ್ಜನೆ ಕಾರ್ಯ ನಡೆಸಲಿದ್ದಾರೆ.
    ಖಾಸಬಾವಿಯಲ್ಲಿ ಗಣೇಶ ವಿಸರ್ಜನೆಗೆ ನಗರಸಭೆಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಕ್ರೇನ್‌ಗಳನ್ನು ಬಳಸಿ ಬಾವಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದ್ದು, ಗಣೇಶ ಮೂರ್ತಿಯ ಅಲಂಕಾರಿಕ ಸಾಮಗ್ರಿ ಮತ್ತು ಹೂವುಗಳನ್ನು ತೆಗೆದು ಹಾಕಿ ವಿಸರ್ಜನೆ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು.
    ಗಣೇಶ ಮೂರ್ತಿಗಳ ವಿಸರ್ಜನೆ ನಿಮಿತ್ತ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೆರವಣಿಗೆ ನಡೆಯುವ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಸಲಾಗಿದ್ದು, ಕುಣಿದು ಕುಪ್ಪಳಿಸುತ್ತಿದ್ದ ಯುವಕರನ್ನು ಪೊಲೀಸರು ಮುಂದೆ ಹೋಗುವಂತೆ ಕೇಳಿದರೂ ಮಾತು ಕೇಳದ ಕಾರಣ ಹಲವೆಡೆ ಮಾತಿನ ಚಕಮಕಿ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts