More

    ಸುರುಮನೆ ಜಲಪಾತ ವೀಕ್ಷಣೆಗೆ ನಿರ್ಬಂಧ ವಿಧಿಸಿ

    ಕಳಸ: ಪ್ರಕೃತಿಯ ಸೌಂದರ್ಯವನ್ನೇ ಒಡಲಲ್ಲಿ ಇಟ್ಟುಕೊಂಡಿರುವ ತಾಲೂಕು ಕಳಸ. ಆದರೆ ಇಲ್ಲಿನ ಕೆಲ ತಾಣಗಳ ಸೊಬಗೇ ಗ್ರಾಮಸ್ಥರ ನೆಮ್ಮದಿ ಕಸಿದುಕೊಂಡಿದೆ.

    ಹೌದು. ತಾಲೂಕಿನ ಅಬ್ಬುಗುಡಿಗೆ ಸಮೀಪದ ಸುರುಮನೆ ಜಲಪಾತ ಪ್ರವಾಸಿಗರ ಹಾಟ್ ಸ್ಪಾಟ್. ದಿನ ನಿತ್ಯ ನೂರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಕೆಲ ಪ್ರವಾಸಿಗರು ಗುಂಡು-ತುಂಡಿನ ಪಾರ್ಟಿ ಮಾಡಿ ಬಾಟಲಿಗಳನ್ನು ಗ್ರಾಮಸ್ಥರ ತೋಟ, ರಸ್ತೆಗಳಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಕಿರಿಕಿರಿಯಾಗುತ್ತಿದೆ.

    ಫಾಲ್ಸ್​ಗೆ ಹೋಗಲು ಅರಣ್ಯ ಇಲಾಖೆ ಅನುಮತಿ ನೀಡಬೇಕು. ಒಂದು ಗೇಟ್ ನಿರ್ವಿುಸಿ ಕಾವಲುಗಾರನನ್ನು ನೇಮಿಸಬೇಕು.ಪ್ರವಾಸಿಗರಿಗೆ ದರ ನಿಗದಿಪಡಿಸಬೇಕು. ಇದಕ್ಕಾಗಿ ಒಂದು ಸಮಿತಿ ರಚಿಸಬೇಕು. ಯಾವುದೇ ಪಾರ್ಟಿ ಮಾಡಲು ಅವಕಾಶ ನೀಡಬಾರದು. ಸಂಜೆ 6 ಗಂಟೆ ನಂತರ ಪ್ರವೇಶ ನಿರ್ಬಂಧಿಸಬೇಕು ಎಂದು ಗ್ರಾಮಸ್ಥರು ಕಳೆದ ವರ್ಷವೇ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಇದ್ಯಾವುದೂ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಈಗ ಜಲಪಾತದ ವೀಕ್ಷಣೆಯನ್ನೇ ನಿರ್ಬಂಧಿಸಿ ಎಂದು ಗ್ರಾಮಸ್ಥರು ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ.

    ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ: ಸುರುಮನೆ ಜಲಪಾತ ಸೇರಿ ವಶಿಷ್ಠ ತೀರ್ಥ, ಕ್ಯಾತನಮಕ್ಕಿ, ಮೈದಾಡಿ, ಕುದುರೆಮುಖ ಶಿಖರ, ಕುರುಂಜಲ್ ಗುಡ್ಡ, ಅಂಬಾತೀರ್ಥ, ಕಲಶೇಶ್ವರ ದೇವಸ್ಥಾನ, ಹೊರನಾಡು ದೇವಸ್ಥಾನ ಅನೇಕ ಪ್ರವಾಸಿ ತಾಣಗಳಿವೆ. ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರಿಂದ ಹೋಮ್ ಸ್ಟೇ, ಮಲೆನಾಡು ಉತ್ಪನ್ನಗಳ ಅಂಗಡಿ ಮಳಿಗೆಗಳು, ಹೋಟೆಲ್, ಲಾಡ್ಜ್​ಗಳನ್ನು ಮಾಡಿ ವ್ಯವಹಾರ ಮಾಡುತ್ತಿರುವುದರಿಂದ ಅನೇಕ ಕುಟುಂಬಗಳ ಜೀವನವೂ ನಡೆಯುತ್ತಿದೆ. ನೂರಾರು ಯುವಕರಿಗೆ ಉದ್ಯೋಗವೂ ಸಿಗುತ್ತಿದೆ. ಆದರೆ ಪ್ರವಾಸೋದ್ಯಮ ಇಲಾಖೆ ಇಲ್ಲಿ ರಸ್ತೆ ಸೇರಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದಿರುವುದರಿಂದ ಗ್ರಾಮಗಳ ಅಭಿವೃದ್ಧಿಗೂ ತೊಂದರೆಯಾಗಿದೆ.

    ಸಾವಿರಾರು ಪ್ರವಾಸಿಗರು ಬರುತ್ತಿರುವುದರಿಂದ ಇಲ್ಲಿ ಬಹಳಷ್ಟು ಅಭಿವೃದ್ಧಿಗಳಾಗಿವೆ. ಅಲ್ಲದೆ ನೂರಾರು ಕುಟುಂಬಗಳು ಪ್ರವಾಸೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಸುರುಮನೆ ಜಲಪಾತ ವೀಕ್ಷಣೆಗೆ ನಿರ್ಬಂಧ ವಿಧಿಸಿ ಎನ್ನುವುದರಲ್ಲಿ ಅರ್ಥವಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬುದು ಹೋಮ್ ಸ್ಟೇ ಮಾಲೀಕ ಬಿ.ವಿ.ರವಿ ರೈ ಎಂಬುವರ ಒತ್ತಾಯ.

    ನಮ್ಮ ಊರಲ್ಲಿ ಗುಪ್ತಗಾಮಿನಿಯಾಗಿದ್ದ ಫಾಲ್ಸ್ ಹೊರ ಪ್ರಪಂಚಕ್ಕೆ ಗೊತ್ತಾದ ಮೇಲೆ ನಮ್ಮ ಊರಿನ ನಿಯಂತ್ರಣ ತಪ್ಪಿಹೋಗಿದೆ. ಆರಂಭದಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಮ್ಮ ಗ್ರಾಮ ಅಭಿವೃದ್ಧಿ ಆಗುತ್ತದೆ ಎಂದುಕೊಂಡಿದ್ದೆವು. ಆದರೆ ದಿನೇದಿನೆ ತೊಂದರೆಗಳೇ ಹೆಚ್ಚಾಗುತ್ತಿವೆ. ನಮ್ಮ ಊರಿನ ಪರಿಸರ ಹಾಳಾಗುತ್ತಿದೆ. ಅರಣ್ಯ ಇಲಾಖೆ ಈ ಫಾಲ್ಸ್​ಗೆ ಪ್ರವಾಸಿಗರು ಬಾರದಂತೆ ನಿರ್ಬಂಧಿಸಬೇಕು ಎನ್ನುತ್ತಾರೆ ಅಬ್ಬುಗುಡಿಗೆ ನಿವಾಸಿ ಸುಧಿರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts