More

    ಬಿರುಸುಗೊಂಡ ಕೈ ಬಣ ರಾಜಕೀಯ

    ಹಾವೇರಿ: ಮಾಜಿ ಸಚಿವ ಸಿ.ಎಂ. ಉದಾಸಿ ಅವರ ನಿಧನದಿಂದ ಖಾಲಿಯಾಗಿರುವ ಹಾನಗಲ್ಲ ವಿಧಾನಸಭೆ ಕ್ಷೇತ್ರಕ್ಕೆ ಇನ್ನೂ ಉಪ ಚುನಾವಣೆಯೇ ಘೊಷಣೆಯಾಗಿಲ್ಲ. ಆದರೆ, ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಬಣ ಮೇಲಾಟ ಬಿರುಸುಗೊಂಡಿದೆ. ಜಿಲ್ಲೆಗೆ ಭೇಟಿ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರ ಎದುರೇ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

    ಹಿಂದಿನ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲು ಕಂಡಿರುವ ವಿಪ ಸದಸ್ಯ ಶ್ರೀನಿವಾಸ ಮಾನೆ ಅವರಿಗೆ ಈ ಬಾರಿಯೂ ಟಿಕೆಟ್ ಬಹುತೇಕ ಖಾತ್ರಿ ಎಂಬಂತಹ ವಾತಾವರಣ ಹೈಕಮಾಂಡ್​ನಲ್ಲಿ ಸೃಷ್ಟಿಯಾಗಿದೆ. ಅಲ್ಲದೆ, ಮಾನೆ ಬೆಂಬಲಿತ ಅನೇಕರು ಇದನ್ನು ಹೈಕಮಾಂಡ್​ಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದರಂತೆ ಕ್ಷೇತ್ರದಾದ್ಯಂತ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಸಂಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಕಾರ್ಯಕರ್ತರು, ಮುಖಂಡರ ಪಡೆಯ ಬೆಂಬಲವನ್ನು ಅವರು ಪಡೆದುಕೊಂಡಿದ್ದಾರೆ.

    ತಹಶೀಲ್ದಾರ ಟೀಮ್ ಅಖಾಡಕ್ಕೆ: ಶ್ರೀನಿವಾಸ ಮಾನೆ ಅವರೊಂದಿಗೆ ವೈಮನಸ್ಸು ಹೊಂದಿರುವ ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರು ನಾಲ್ಕೈದು ತಿಂಗಳ ಹಿಂದೆಯೇ ಮಾನೆ ಗೋ ಬ್ಯಾಕ್ ಹೋರಾಟ ನಡೆಸುವಂತೆ ಬೆಂಬಲಿಗರಿಗೆ ಕರೆ ಕೊಟ್ಟಿದ್ದರು. ಆಗ ಉಪಚುನಾವಣೆ ಬರುವ ಮುನ್ಸೂಚನೆ ಇಲ್ಲದಿದ್ದರಿಂದ ಅವರ ಮಾತನ್ನು ಹೈಕಮಾಂಡ್ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಉಪಚುನಾವಣೆ ಘೊಷಣೆ ನಿಶ್ಚಿತವಾಗಿರುವುದರಿಂದ ಮನೋಹರ ಬಳಗದ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸ್ಥಳೀಯರಿಗೆ ಆದ್ಯತೆ ಎಂಬ ಅಜೆಂಡಾದೊಂದಿಗೆ ಮಾನೆಗೆ ಟಿಕೆಟ್ ತಪ್ಪಿಸಲು ವೇದಿಕೆ ಸಿದ್ಧಗೊಳಿಸಿದ್ದಾರೆ. ಮಾನೆಗೆ ಟಿಕೆಟ್ ನೀಡಿದರೆ ಬಂಡಾಯವೇಳುವ ಮುನ್ಸೂಚನೆಯನ್ನು ಹೈಕಮಾಂಡ್​ಗೆ ರವಾನಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಕರೊನಾ ಪರಿಸ್ಥಿತಿ ಪರಿಶೀಲನೆಗೆ ಆಗಮಿಸಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಅವರ ಎದುರೇ ಮನೋಹರ ತಹಶೀಲ್ದಾರ ಬಂಡಾಯದ ಬಾವುಟ ಹಾರಿಸುವ ಎಚ್ಚರಿಕೆ ನೀಡಿ ಕಳಿಸಿದರು. ಅಲ್ಲದೆ, ಅದೇ ದಿನ ಸಂಜೆ ಕೂಡಲ ಗ್ರಾಮದಲ್ಲಿ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದು, ಸ್ಥಳೀಯರಿಗೆ ಟಿಕೆಟ್ ಕೊಡಬೇಕು. ನಾನೂ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ.

    ಹಾನಗಲ್ಲ ಕ್ಷೇತ್ರದಲ್ಲಿ ಉಪಚುನಾವಣೆ ಘೊಷಣೆಗೂ ಮುನ್ನವೇ ಈ ಎಲ್ಲ ಬೆಳವಣಿಗೆ ನಡೆದಿದೆ. ಇದಕ್ಕೆ ನಿಯಂತ್ರಣ ಹೇರುವ ಸಾಮರ್ಥ್ಯವನ್ನು ಜಿಲ್ಲಾ ಕಾಂಗ್ರೆಸ್ ಕಳೆದುಕೊಂಡಿದ್ದು, ಎಲ್ಲವನ್ನೂ ಹೈಕಮಾಂಡ್ ಮೇಲೆ ಹಾಕಿ ಕೈತೊಳೆದುಕೊಳ್ಳುತ್ತಿದೆ. ಹೀಗಾಗಿ, ಈ ಬಣ ಮೇಲಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

    ಕೆಪಿಸಿಸಿ ಕಾರ್ಯಾಧ್ಯಕ್ಷರ ಎದುರೇ ವಾಗ್ವಾದ

    ಜಿಲ್ಲೆಯ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ಎದುರೇ ಮಾನೆ ಹಾಗೂ ಮನೋಹರ ಬೆಂಬಲಿಗರ ನಡುವೆ ಗುರುವಾರ ವಾಗ್ವಾದ ನಡೆದಿದೆ. ಈ ವಾಗ್ವಾದ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಇದರಿಂದ ಕಾರ್ಯಾಧ್ಯಕ್ಷ ಸೇರಿ ಅಲ್ಲಿ ಸೇರಿದ್ದ ಜಿಲ್ಲಾ ಕಾಂಗ್ರೆಸ್ ನಾಯಕರು ಮುಜುಗರ ಅನುಭವಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಈಗಾಗಲೇ ಇಷ್ಟೆಲ್ಲ ಪೈಪೋಟಿ ನಡೆಯುತ್ತಿದ್ದು, ಬಿಜೆಪಿಯಲ್ಲಿ ಮಾತ್ರ ಉಪಚುನಾವಣೆಯ ಸಿದ್ಧತೆಯ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಂಡುಬರುತ್ತಿಲ್ಲ. ಜಿಲ್ಲೆಯ ಹಿರಿಯ ನಾಯಕ ಸಿ.ಎಂ. ಉದಾಸಿ ಅವರ ನಿಧನದ ದುಃಖದಿಂದ ಅವರ ಕುಟುಂಬದವರು ಇನ್ನೂ ಹೊರಬಂದಿಲ್ಲ. ಹೀಗಾಗಿ, ಬಿಜೆಪಿಯಲ್ಲಿ ಚುನಾವಣೆಯ ಯಾವುದೇ ಸಿದ್ಧತೆಗಳು ಕಂಡುಬರುತ್ತಿಲ್ಲ.

    ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ, ಟಿಕೆಟ್​ಗಾಗಿ ಪೈಪೋಟಿ ಸಹಜ. ಆಂತರಿಕ ಸಭೆಯಲ್ಲಿ ಅವರವರ ಬೆಂಬಲಿಗರು ಅವರವರ ಪರ ಬೇಡಿಕೆ ಮಂಡಿಸಿದ್ದಾರೆ. ಇದು ಗಲಾಟೆಯಲ್ಲ, ಹಕ್ಕು ಪ್ರತಿಪಾದನೆಯಷ್ಟೆ. ಹಾನಗಲ್ಲ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯನ್ನು ಘೊಷಿಸಿಲ್ಲ. ಪಕ್ಷದ ವರಿಷ್ಠರು ರ್ಚಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದ್ದರೂ ಅದು ಟಿಕೆಟ್ ಘೊಷಣೆ ನಂತರ ಸರಿಯಾಗಲಿದೆ. ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ.

    | ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts