ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು(ಜೆಎನ್ಯು) 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆಯನ್ನು ಮಾಡಿದೆಯೇ? ಹೌದು ಎಂದು ನಂಬಿದ್ದಾರೆ ಕೆಲವು ಸಾಮಾಜಿಕ ಜಾಲತಾಣಿಗರು. ಇದಕ್ಕೆ ಸಂಬಂಧಿಸಿದ ವೈರಲ್ ಪೋಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ 50 ವರ್ಷದಲ್ಲಿ ಮೊದಲ ಬಾರಿಗೆ ಜೆಎನ್ಯುನಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ವಾದಿಸಲಾಗಿದ್ದು, ಇದು ಅಕ್ಷರಶಃ ಸುಳ್ಳು ಎಂಬುದು ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ.
ಪುಷ್ಪೇಂದ್ರ ಕುಲಶ್ರೇಷ್ಠ ಫ್ಯಾನ್ಸ್ ಕ್ಲಬ್ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಅಪ್ಲೋಡ್ ಮಾಡಲಾಗಿದ್ದು, ತರ್ಜುಮೆ ಮಾಡಿದಾಗ 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜನವರಿ 26ರಂದು ಜೆಎನ್ಯುನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಬರೆದು ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಸಹಮತವನ್ನು ವ್ಯಕ್ತಪಡಿಸಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಸುಮಾರು 1,800 ಬಾರಿ ಶೇರ್ ಮಾಡಲಾಗಿದೆ.
ಈ ವಿಚಾರವು ಇಂಡಿಯಾ ಟುಡೆ ಗಮನಕ್ಕೆ ಬಂದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಸತ್ಯಾಂಶವನ್ನು ಬಯಲಿಗೆ ಎಳೆದಿದೆ. ಹಿಂದಿನ ವರ್ಷಗಳಲ್ಲಿ ಜೆಎನ್ಯುನಲ್ಲಿ ನಡೆದ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹುಡುಕಿದಾಗ ಅನೇಕ ಫೋಟೋಗಳು ದೊರೆತಿದೆ. ಸೇನಾ ಸಮವಸ್ತ್ರದಲ್ಲಿ ಕೆಲ ಮಕ್ಕಳು, ಸಿಬ್ಬಂದಿ ಮತ್ತು ಉಪಕುಲಪತಿ ನೇತೃತ್ವದಲ್ಲಿ ಧ್ವಜಾರೋಹನ ನಡೆಸಿರುವ ಅನೇಕ ಫೋಟೋಗಳು ಲಭ್ಯವಾಗಿದೆ.
ಫೇಸ್ಬುಕ್ ಬಳಕೆದಾರರು ಕ್ರಮವಾಗಿ 2017, 2016, 2015 ಹಾಗೆ 2014ರಲ್ಲಿ ಅಪ್ಲೋಡ್ ಮಾಡಿರುವ ಅನೇಕ ಫೋಟೋಗಳು ಇಂಡಿಯಾ ಟುಡೆಗೆ ಲಭ್ಯವಾಗಿವೆ.
ಆಚರಣೆಗೆ ಸಂಬಂಧಿಸಿದಂತೆ ಜೆಎನ್ಯು ರಿಜಿಸ್ಟ್ರಾರ್ ಡಾ. ಪ್ರಮೋದ್ ಕುಮಾರ್ ಎಂಬುವರು ಮಾತನಾಡಿ ವಿಶ್ವವಿದ್ಯಾಲಯ ಪ್ರಾರಂಭವಾದ ದಿನದಿಂದಲೂ ಜನವರಿ 26ರಂದು ನಿರಂತರವಾಗಿ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮಾಡಿಕೊಂಡು ಬರಲಾಗುತ್ತಿದೆ. ನಾವು ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳುತ್ತೇವೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಂದುವರಿದು ಮಾತನಾಡಿ ಇದೇ ಮೊದಲ ಬಾರಿಗೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್ಸಿಸಿ)ಯನ್ನು ಜೆಎನ್ಯುನಲ್ಲಿ ಆರಂಭಿಸಲಾಗಿದೆ. ಇದರಲ್ಲಿ ನೋಂದಾವಣೆಯಾಗಿರುವ ಕೆಲವು ವಿದ್ಯಾರ್ಥಿಗಳು ಈ ವರ್ಷದ ಪರೇಡ್ ಅನ್ನು ನಡೆಸಲಿದ್ದಾರೆ. ಇದನ್ನು ಹೊರತುಪಡಿಸಿದರೆ ಪ್ರತಿವರ್ಷವು ಸಂಭ್ರಮಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುಂಚೆಯಿಂದಲೂ ಜೆಎನ್ಯುನಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ. (ಏಜೆನ್ಸೀಸ್)