More

    ವಿಜೃಂಭಣೆಯ ಶ್ರೀ ಲಕ್ಷ್ಮೀಕಾಂತಸ್ವಾಮಿ ರಥೋತ್ಸವ

    • ನಂಜನಗೂಡು : ವೇಣುಪುರಿ ಎಂದೇ ಪುರಾಣ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕಳಲೆ ಗ್ರಾಮದ ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಉತ್ಸವ ಮೂರ್ತಿಯ ವಿಜೃಂಭಣೆಯ ರಥೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

    • ಬೆಳಗ್ಗೆ 7.53 ರಿಂದ 8.21ರ ವರೆಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಗೆ ಬಗೆಯ ಪುಷ್ಪಾಲಂಕಾರದಿಂದ ಸಿಂಗರಿಸಲಾಗಿದ್ದ ಅರವಿಂದನಾಯಕಿ ಅಮ್ಮ ಹಾಗೂ ಆಂಡಾಳಮ್ಮ ಜತೆಗಿನ ಲಕ್ಷ್ಮೀಕಾಂತಸ್ವಾಮಿಯ ಉತ್ಸವ ಮೂರ್ತಿಗೆ ಪಾರುಪತ್ತೇದಾರರಾದ ಜಯರಾಂ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಸಾಂಗವಾಗಿ ಜರುಗಿದವು.

    • ನಂತರ ಮಂಗಳವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಉತ್ಸವಮೂರ್ತಿಯನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದ ಚಕ್ರಗಳಿಗೆ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವ ಮೂಲಕ ಚಾಲನೆ ನೀಡಲಾಯಿತು.

    • ದೇವಾಲಯದ ಅರ್ಚಕರು ಮಂತ್ರ ಘೋಷಗಳೊಂದಿಗೆ ರಥದ ಹಿಂದೆ ಸಾಗಿದರೆ, ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ರಥವನ್ನು ಎಳೆಯುವ ಮೂಲಕ ಹರ್ಷೋದ್ಗಾರ ಮೊಳಗಿತು. ರಥವು ಅಗ್ರಹಾರ ಬೀದಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಿ ಪ್ರೌಢಶಾಲೆ ಮುಂಭಾಗದಲ್ಲಿ ನಿಲ್ಲಿಸಲಾಯಿತು. ಮತ್ತೆ ಸಂಜೆ ವೇಳೆ ಗ್ರಾಮದ ಹಲವು ಬೀದಿಗಳಲ್ಲಿ ರಥ ಸಂಚರಿಸಿ ದೇವಾಲಯದ ಮುಂಭಾಗದಲ್ಲಿರುವ ಸ್ವಸ್ಥಾನಕ್ಕೆ ಮರಳಿತು.
      ರಥೋತ್ಸವದ ವೇಳೆ ನವ ದಂಪತಿ, ಭಕ್ತರು ಹಣ್ಣು- ದವನ ಎಸೆದು ಭಕ್ತಿ ಪರಕಾಷ್ಠೆ ಮೆರೆದರು. ನಾನಾ ಕಡೆಯಿಂದ ಆಗಮಿಸಿದ್ದ ಭಕ್ತರು ಲಕ್ಷ್ಮೀ ಕಾಂತಸ್ವಾಮಿಯ ಉತ್ಸವಮೂರ್ತಿಯನ್ನು ಕಣ್ತುಂಬಿಕೊಂಡರು. ದೇವಾಲಯದಲ್ಲಿ ಭಕ್ತರು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
    • ಗ್ರಾಮದ ಪ್ರತಿಯೊಂದು ಬೀದಿಯಲ್ಲೂ ತಮ್ಮ ಮನೆಯ ಮುಂಭಾಗದಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಮಾವಿನ ತಳಿರು ತೋರಣಗಳಿಂದ ಸಿಂಗರಿಸಿ ರಥವನ್ನು ಸ್ವಾಗತಿಸಿದರು. ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಪಾನಕ, ಮಜ್ಜಿಗೆ ವಿತರಿಸಿ ಬಿಸಿಲಿನ ಬೇಗೆಯ ದಣಿವನ್ನು ನಿವಾರಿಸಿದರು. ಇನ್ನು ಶಾಸಕ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಸೇರಿದಂತೆ ಪ್ರಮುಖ ನಾಯಕರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

    ಚಿತ್ರ:28ಎನ್‌ಜೆಡಿ1-2
    ನಂಜನಗೂಡು ತಾಲೂಕಿನ ಕಳಲೆ ಗ್ರಾಮದ ಶ್ರೀ ಲಕ್ಷ್ಮೀಕಾಂತರಸ್ವಾಮಿ ಉತ್ಸವಮೂರ್ತಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts