More

    ಕೃಷಿ ಉತ್ಪನ್ನಕ್ಕೆ ರಫ್ತು ಬಲ: ಉತ್ಪನ್ನಗಳಿಗೆ ಪ್ರತ್ಯೇಕ ಬ್ರ್ಯಾಂಡಿಂಗ್, ಎಕ್ಸ್​ಪೋರ್ಟ್ ಹಬ್ ಸ್ಥಾಪನೆ..

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯದಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುವ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಐದು ರಫ್ತು ಕೇಂದ್ರಗಳ (ಎಕ್ಸ್​ಪೋರ್ಟ್ ಹಬ್) ಸ್ಥಾಪನೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ಆಶಯದಂತೆ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯನ್ನು ರಫ್ತು ಕೇಂದ್ರ ಮಾಡುವುದು ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ.

    ರಾಜ್ಯದಿಂದ ವಿವಿಧ ರಾಜ್ಯಗಳು ಹಾಗೂ ದೇಶಗಳಿಗೆ ಆಗುವ ಒಟ್ಟಾರೆ ರಫ್ತಿನಲ್ಲಿ ಕೃಷಿ ಉತ್ಪನ್ನಗಳ ಪಾಲು ಕೇವಲ ಶೇ.2ರಷ್ಟು ಇದೆ. ಅದನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ದ್ವಿಗುಣ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಉತ್ಪನ್ನಗಳಿಗೆ ಪ್ರತ್ಯೇಕ ಹೆಸರು ನೀಡಿ ಹೊಸ ಬ್ರಾ್ಯಂಡಿಂಗ್ ಮಾಡಲು ಸರ್ಕಾರ ತೀರ್ವನಿಸಿದೆ. ಕೇಂದ್ರದ ಅಪೆಡಾ (ಅಗ್ರಿಕಲ್ಚರಲ್ ಆಂಡ್ ಪ್ರೊಸೆಸ್ಡ್ ಫುಡ್ ಎಕ್ಸ್​ಪೋರ್ಟ್ ಡೆವಲಪ್​ವೆುಂಟ್ ಅಥಾರಿಟಿ) ಸಂಸ್ಥೆಯ ನೆರವು ಪಡೆದುಕೊಂಡು ರಾಜ್ಯದ ಕೃಷಿ ಉತ್ಪನ್ನ ರಫ್ತು ಸಂಸ್ಥೆ (ಕಪೆಕ್) ಮೂಲಕ ರಫ್ತು ಕೇಂದ್ರಗಳನ್ನು ಸ್ಥಾಪನೆ ಮಾಡಲು ಸಿದ್ಧತೆಗಳು ನಡೆದಿವೆ. ನೆರೆಯ ಮಹಾರಾಷ್ಟ್ರ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಈಗ ಮುಂದಿದೆ. ದೇಶದಲ್ಲಿ 70 ಸಾವಿರ ರಫ್ತುದಾರರು ನೋಂದಣಿ ಮಾಡಿಸಿಕೊಂಡಿದ್ದರೆ, ಅದರಲ್ಲಿ 60 ಸಾವಿರ ಜನ ಮಹಾರಾಷ್ಟ್ರದಲ್ಲಿಯೇ ಇದ್ದಾರೆ. ಆ ರಫ್ತುದಾರರ ನೆರವನ್ನು ಪಡೆದುಕೊಂಡು, ರಾಜ್ಯದಲ್ಲಿಯೂ ಹೊಸ ರಫ್ತುದಾರರನ್ನು ಹುಟ್ಟುಹಾಕುವ ಮೂಲಕ ಕೃಷಿಕರ ನೆರವಿಗೆ ಬರುವುದು ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ದೇಶವಾಗಿದ್ದು ಅದಕ್ಕಾಗಿ ಸತತವಾಗಿ ಸಭೆ ನಡೆಸುತ್ತಿದ್ದಾರೆ.

    ಮಿನಿ ಪುಡ್ ಪಾರ್ಕ್: ತಮ್ಮ ಚೊಚ್ಚಲ ಬಜೆಟ್​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹತ್ತು ಜಿಲ್ಲೆಗಳಲ್ಲಿ ಮಿನಿ ಫುಡ್ ಪಾರ್ಕ್​ಗಳ ಸ್ಥಾಪನೆಗೆ 50 ಕೋಟಿ ರೂ. ಮೀಸಲಿರಿಸಿದ್ದಾರೆ. ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯಕ್ಕೆ 5 ಕೋಟಿ ರೂ. ಒದಗಿಸಿದ್ದಾರೆ. ಈ ಹಣ ಬಳಸಿ ರಫ್ತು ಕೇಂದ್ರಗಳನ್ನು ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ಫುಡ್ ಪಾರ್ಕ್​ಗಳಲ್ಲಿಯೇ ರಫ್ತು ಕೇಂದ್ರಗಳಿರುತ್ತವೆ. ಕಪೆಕ್ ಮೂಲಕ ವಿವರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿ ಜಿಲ್ಲೆಯಿಂದ ಅಲ್ಲಿನ ಉತ್ಪನ್ನಗಳು ನೇರವಾಗಿ ವಿವಿಧ ರಾಜ್ಯ ಹಾಗೂ ದೇಶಗಳಿಗೆ ರಫ್ತಾಗಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದ್ದೇಶವಾಗಿದೆ. ರೈತ ಉತ್ಪಾದಕ ಸಂಸ್ಥೆಗಳಿಗೂ ಹೆಚ್ಚಿನ ನೆರವನ್ನು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

    ಪೂಜೇನಹಳ್ಳಿಯಲ್ಲಿ ದೊಡ್ಡ ಘಟಕ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿಯ ಪೂಜೇನಹಳ್ಳಿಯಲ್ಲಿ ಕೃಷಿ ಇಲಾಖೆಗೆ ಸೇರಿದ ದೊಡ್ಡ ಜಾಗ ಇದೆ. ಇಲ್ಲಿ ಎಕ್ಸ್​ಪೋರ್ಟ್ ಹಬ್ ಬರಲಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಸರ್ಕಾರ ಸ್ಥಾಪನೆ ಮಾಡಿರುವ ರೀತಿಯಲ್ಲಿಯೇ ದೊಡ್ಡ ಪ್ರಮಾಣದ ರಫ್ತು ಕೇಂದ್ರ ಇಲ್ಲಿರಲಿದೆ. ಅದಕ್ಕೆ ಬೇಕಾದ ಸಿದ್ಧತೆಗಳು ನಡೆದಿವೆ.

    ಇಂದು ಅಪೆಡಾ ಜತೆ ಸಭೆ: ಕೃಷಿ ಸಚಿವ ಬಿ.ಸಿ. ಪಾಟೀಲ್ ಬುಧವಾರ ಅಪೆಡಾ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಪೂಜೇನಹಳ್ಳಿ ಹೊರತುಪಡಿಸಿ ಇತರ ಐದು ಸ್ಥಳಗಳು ಯಾವುವು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ. ಆ ನಂತರ ಬೇರೆ ಬೇರೆ ರಾಜ್ಯಗಳ ರಫ್ತುದಾರರ ಸಭೆಯನ್ನು ನಡೆಸಲಿದ್ದಾರೆ.

    ಆಹಾರ ಪಾರ್ಕ್: ರಾಜ್ಯದಲ್ಲಿ ಸದ್ಯ ಆರು ಆಹಾರ ಪಾರ್ಕ್​ಗಳಿವೆ. ಅವುಗಳಲ್ಲಿ ಎರಡಕ್ಕೆ ಕೇಂದ್ರದಿಂದ 50 ಕೋಟಿ ರೂ. ನೆರವು ಸಿಕ್ಕಿದೆ. ಉಳಿದ ನಾಲ್ಕಕ್ಕೆ ರಾಜ್ಯ ಸರ್ಕಾರ 8 ಕೋಟಿ ರೂ. ಆರ್ಥಿಕ ಸಹಾಯ ಮಾಡಿದೆ. ಸರಿಯಾದ ರಸ್ತೆ ಸೌಕರ್ಯ ಇಲ್ಲದಿರುವುದು ಉತ್ಪನ್ನಗಳ ರಫ್ತಿಗೆ ಅಡ್ಡಿಯಾಗಿದೆ.

    ರಾಜ್ಯದಿಂದ ಯಾವ ದೇಶಗಳಿಗೆ ರಫ್ತು?: ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಮೆಕ್ಸಿಕೋ, ಸಿಂಗಾಪುರ, ಶ್ರೀಲಂಕಾ, ಟರ್ಕಿ, ಮಲೇಷ್ಯಾ, ಮಾರಿಷಸ್, ಬಾಂಗ್ಲಾದೇಶ, ಜಪಾನ್, ಇಂಡೋನೇಷ್ಯಾ, ಸ್ಪೇನ್, ಕೆನಡಾ, ನೆದರ್ಲೆಂಡ್, ಇಟಲಿ, ಕೊರಿಯಾ, ಬೆಲ್ಜಿಯಂ, ರಷ್ಯಾ, ಜರ್ಮನಿ, ನ್ಯೂಜಿಲೆಂಡ್, ಚೀನಾ, ಇಸ್ರೇಲ್, ಯುಎಇ, ಫ್ರಾನ್ಸ್, ಮಧ್ಯಪೂರ್ವ ದೇಶಗಳು.

    ಅನುಕೂಲಗಳೇನು?

    • ರಾಜ್ಯದ ಉತ್ಪನ್ನಗಳು ವಿಶ್ವದ ವಿವಿಧೆಡೆ ಲಭ್ಯ
    • ರೈತರ ಆದಾಯ ದ್ವಿಗುಣಕ್ಕೆ ಸಹಕಾರಿ
    • ರೈತ ಉತ್ಪಾದಕ ಸಂಸ್ಥೆಗಳಿಗೂ ಪ್ರೋತ್ಸಾಹ
    • ರಾಜ್ಯದ ಆರ್ಥಿಕ ಚಟುವಟಿಕೆಗೆ ಅನುಕೂಲ

    ಹೇಗಿರಲಿವೆ ರಫ್ತು ಕೇಂದ್ರಗಳು?: ರಫ್ತು ಕೇಂದ್ರಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ಸಂಸ್ಕರಿಸುವುದು, ತೇವಾಂಶ ತೆಗೆಯುವುದು, ಬಿಸಿ ನೀರಿನ ಸಂಸ್ಕರಣೆ, ಪ್ಯಾಕೇಜ್ ವ್ಯವಸ್ಥೆ ಹಾಗೂ ಕಾಗೋ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ಕೃಷಿ ಇಲಾಖೆಯ ಜಾಗಗಳಲ್ಲಿಯೇ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಇವುಗಳಿಗೆ ಅಗತ್ಯವಾದ ಯಂತ್ರಗಳ ಖರೀದಿಗೆ ದೊಡ್ಡ ಪ್ರಮಾಣದ ಹಣ ಬೇಕಾಗುತ್ತದೆ.

    ರಾಜ್ಯದ ಕೃಷಿ ಉತ್ಪನ್ನಗಳು ಬೇರೆ ಕಡೆ ರಫ್ತಾಗುವ ಮೂಲಕ ನಮ್ಮ ರೈತರಿಗೆ ಅನುಕೂಲ ವಾಗಬೇಕು. ಅದಕ್ಕಾಗಿ ಅಫೆಡಾದಿಂದ ಆರ್ಥಿಕ ನೆರವು ಪಡೆಯಲಾಗುತ್ತದೆ. ಇದರಿಂದ ಆಹಾರ ಸಂಸ್ಕರಣೆಗೆ ಅನುಕೂಲವಾಗಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗುತ್ತದೆ.

    | ಬಿ.ಸಿ.ಪಾಟೀಲ್ ಕೃಷಿ ಸಚಿವ

    ಯಾವ ಉತ್ಪನ್ನ ರಫ್ತು?: ಮೆಕ್ಕೆಜೋಳ, ಅಕ್ಕಿ, ಶೇಂಗಾ, ಹುಚ್ಚೆಳ್ಳು, ಕುಸುಬೆ, ಎಳ್ಳು, ಕಾಫಿ, ಗೋಡಂಬಿ, ಹಣ್ಣು-ತರಕಾರಿ, ಹೂವು, ಮೆಣಸಿನ ಕಾಯಿ, ಈರುಳ್ಳಿ, ಬೆಂಗಳೂರು ಗುಲಾಬಿ ಈರುಳ್ಳಿ, ಆಲೂಗಡ್ಡೆ, ಮಿಡಿಸೌತೆ, ನಿಂಬೆ, ಕರಿಮೆಣಸು, ಹೂವು, ಬೇಳೆಕಾಳು.

    ಅಪೆಡಾ ನೆರವು: ರಫ್ತಿಗೆ ಬೇಕಾದ ಸೌಲಭ್ಯಗಳ ಕೇಂದ್ರವನ್ನು ಸ್ಥಾಪಿಸಲು ಅಪೆಡಾ ಸಂಸ್ಥೆ ಆರ್ಥಿಕ ನೆರವು ನೀಡುತ್ತದೆ. ಯಾವುದೇ ಕೇಂದ್ರಕ್ಕೆ ಶೇ.90 ಅನುದಾನವನ್ನು ಅಪೆಡಾ ನೀಡಿದರೆ ಉಳಿದ ಶೇ.10ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲಿಯೂ ರಫ್ತು ಕೇಂದ್ರ ಇರಬೇಕೆಂದು ಬಯಸಿದೆ. ರಾಜ್ಯ ಸರ್ಕಾರ ಸದ್ಯಕ್ಕೆ ಆರು ಕಡೆಗಳಲ್ಲಿ ಮಾತ್ರ ಆರಂಭಿಸಲಿದೆ. ರೈತ ಉತ್ಪನ್ನ ಸಂಸ್ಥೆಗಳಿಗೆ ಅಪೆಡಾ ಹಣ ನೀಡುವುದಿಲ್ಲ. ಆದ್ದರಿಂದ, ಕಪೆಕ್ ಮೂಲಕ ಯೋಜನೆ ಜಾರಿ ಮಾಡಲಾಗುತ್ತದೆ.

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts